ಸಾರಾಂಶ
ಗಜೇಂದ್ರಗಡ: ಬೇಸಿಗೆ ಬಂತೆಂದರೆ ಸಾಕು ಇದೆಂತಹ ಬಿಸಿಲು ಎಂದು ಜನರು ಬೇಸರ ವ್ಯಕ್ತಪಡಿಸಿದರೆ, ಇತ್ತ ಬೇಸಿಗೆ ಬಂದರೆ ಗ್ರಾಮೀಣ ಹಾಗೂ ಪಟ್ಟಣದ ಮಹಿಳೆಯರು ಮನೆ ಅಂಗಳ ಹಾಗೂ ಮನೆಯ ಮಾಳಿಗೆ ಮೇಲೆ ಗರಿಗರಿಯಾದ ಸಂಡಿಗೆ, ಹಪ್ಪಳ, ಶಾವಿಗೆ ಸಿದ್ಧಪಡಿಸಲು ಮುಂದಾಗುತ್ತಾರೆ.
ಉತ್ತರ ಕರ್ನಾಟಕ ಊಟದಲ್ಲಿ ಇಂದಿಗೂ ಸಂಡಿಗೆ, ಹಪ್ಪಳವೆಂದರೆ ಪ್ರೀತಿ. ಹೀಗಾಗಿ ಬೀಗರು, ಬಿಜ್ಜರು, ತವರು ಮನೆಯವರು ಯಾರೇ ಮನೆಗೆ ಬಂದಾಗ ಮೃಷ್ಟಾನ್ನ ಭೊಜನಕ್ಕೆ ಕರಿದ ಸಂಡಿಗೆ ಹಪ್ಪಳ ಬಡಿಸುತ್ತಾರೆ. ಹಾಗಾಗಿ ಪಾರಂಪರಿಕ ಆಹಾರ ಪದ್ಧತಿ ಇನ್ನೂ ಮುಂದುವರೆಸಿದ್ದಾರೆ.ಬಿಸಿಲಿಗೆ ವಿವಿಧ ತರಹದ ಸಂಡಿಗೆ, ಶಾವಿಗೆ, ಹಪ್ಪಳ ಹಾಗೂ ಇತರೆ ಪದಾರ್ಥ ತಯಾರಿಸುವುದು ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಹಬ್ಬ, ಮದುವೆ, ನಾಮಕರಣ ಹೀಗೆ ಪ್ರತಿ ಕಾರ್ಯಕ್ರಮದ ಭೋಜನಕ್ಕೆಂದು ತಯಾರಿಸುವ ಬಗೆ ಬಗೆಯ ಖಾದ್ಯಗಳೊಂದಿಗೆ ಸಂಡಿಗೆ, ಹಪ್ಪಳಗಳಿಲ್ಲದಿದ್ದರೆ ಸಮಾರಂಭ ಅಪೂರ್ಣ. ಅದಕ್ಕಾಗಿಯೇ ಅನೇಕ ಮಹಿಳೆಯರು ಬೇಸಿಗೆ ದಿನಗಳಲ್ಲಿ ಇವುಗಳನ್ನು ತಯಾರಿಸುತ್ತಾರೆ.
ಅಕ್ಕಿ ಹಿಟ್ಟಿನ ಸಂಡಿಗೆ ಮಾಡುವಾಗ ಅದನ್ನು ಬಿಡಿ ಇರುವಾಗಲೆ ತಮಗೆ ಬೇಕಾದ ಬಣ್ಣ ಬೆರಸಿ ನಾನಾ ನಮೂನೆ ಆಕಾರದಲ್ಲಿ ಮನೆಯ ಮಾಳಿಗೆಯಲ್ಲಿ ಪ್ಲಾಸ್ಟಿಕ್ ಚೀಲದ ಮೇಲೆ ಬಿಸಿಲಿಗೆ ಹಾಕುತ್ತಾರೆ. ಹೆಚ್ಚು ಬಿಸಿಲಿನ ಪ್ರಖರತೆಯಿಂದ ಸಂಡಿಗೆ ಗಟ್ಟಿಯಾಗಿ ಒಣಗುತ್ತವೆ. ಸಂಜೆ ಹೊತ್ತಿಗೆ ಒಣಗಿದ ಬಳಿಕ ಡಬ್ಬದಲ್ಲಿ ಹಾಕಿ ವರ್ಷ ಪೂರ್ತಿ ಸಂಡಿಗೆ ಬಳಕೆ ಮಾಡುತ್ತಾರೆ. ಇದನ್ನು ಈಗ ಕೆಲ ಮನೆಯ ಮಹಿಳೆಯರು ಮಾಡುವಲ್ಲಿ ಮಗ್ನರಾಗಿದ್ದಾರೆ.ಸಂಡಿಗೆ, ಹಪ್ಪಳ ದುಡ್ಡು ಕೊಟ್ಟು ಅಂಗಡಿಯಲ್ಲಿ ಕೊಂಡು ತಿಂದರೆ ಮನೆಯಲ್ಲಿ ಮಾಡಿದಕ್ಕಿಂತ ರುಚಿ ಬರುವುದಿಲ್ಲ. ಜತೆಗೆ ನಮಗೆ ಬೇಕಾಗುವ ಹಾಗೆ ನಾನಾ ಆಕಾರದ ಸಂಡಿಗೆಗಳು ಸಿಗುವುದಿಲ್ಲ. ಹೀಗಾಗಿ ವರ್ಷಕ್ಕೆ ಬೇಕಾಗುವಷ್ಟು ಸಂಡಿಗೆ ಹಪ್ಪಳಗಳು ನಮ್ಮ ಮನೆಯ ಅಕ್ಕಪಕ್ಕದ ಮಹಿಳೆಯರನ್ನು ಒಗ್ಗೂಡಿಸಿಕೊಂಡು ತಯಾರಿಸುತ್ತೆವೆ ಎಂದು ನಾಗೇಂದ್ರಗಡದ ಹೇಮಾ ಜೋಶಿ ತಿಳಿಸಿದ್ದಾರೆ.