ವಿಜಯನಗರ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ: ಎಂ.ಎಸ್‌. ದಿವಾಕರ

| Published : Mar 20 2025, 01:16 AM IST

ವಿಜಯನಗರ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ: ಎಂ.ಎಸ್‌. ದಿವಾಕರ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಲಾಗಿದೆ.

ಸುಳ್ಳು ವದಂತಿಗಳನ್ನು ಹರಡಿದರೇ ಅಂಥವರ ವಿರುದ್ಧ ಕಾನೂನು ಕ್ರಮಕನ್ನಡಪ್ರಭ ವಾರ್ತೆ ಹೊಸಪೇಟೆ

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಲಾಗಿದ್ದು, ಪರೀಕ್ಷೆಗಳ ಬಗ್ಗೆ ಸುಳ್ಳು ವದಂತಿಗಳನ್ನು ಹರಡಿದರೇ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.21ರಿಂದ ಜಿಲ್ಲೆಯ 71 ಪರೀಕ್ಷಾ ಕೇಂದ್ರಗಳಲ್ಲಿ 22,700 ವಿದ್ಯಾರ್ಥಿಗಳು ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ 340 ಶಾಲೆಗಳಿದ್ದು, 120 ಸರ್ಕಾರಿ, 32 ವಸತಿ, 74 ಅನುದಾನಿತ ಹಾಗೂ 114 ಅನುದಾನ ರಹಿತ ಶಾಲೆಗಳಿವೆ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ, ಕೊಠಡಿ ನಿರ್ವಹಣೆ, ಕುಡಿಯುವ ನೀರು, ಶೌಚಾಲಯ, ಬೆಳಕು, ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿಯಮಾನುಸಾರ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗುವುದು. ವೆಬ್ ಕಾಸ್ಟಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 21,429 ಹೊಸ ಮತ್ತು 1271 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 22700 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 11376 ಬಾಲಕರು, 11324 ಬಾಲಕಿಯರು ಇದ್ದಾರೆ. ಹಾಜರಾತಿ ಕೊರತೆ ಇದ್ದ 1714 ವಿದ್ಯಾರ್ಥಿಗಳಿಗೆ ಈ ಬಾರಿ ಪ್ರವೇಶ ಪತ್ರ ಕೊಟ್ಟಿಲ್ಲ. ಪರೀಕ್ಷೆಗೆ ಒಟ್ಟು 962 ಪರೀಕ್ಷಾ ಸಿಬ್ಬಂದಿ ನಿಯೋಜನೆ ಮಾಡಿದ್ದು, 71 ಮುಖ್ಯ ಅಧೀಕ್ಷಕರು ಮತ್ತು 71 ಸ್ಕ್ವಾಡ್‌ ನೇಮಿಸಲಾಗಿದೆ ಎಂದರು.ಫಲಿತಾಂಶ ಸುಧಾರಣೆಗೆ ಕ್ರಮ:

ಜಿಲ್ಲೆಯಲ್ಲಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಈ ಬಾರಿ ವಿವಿಧ ಕ್ರಮ ಕೈಗೊಂಡಿದ್ದು, ರಾಜ್ಯದಲ್ಲಿ ಐದನೇ ಸ್ಥಾನದಲ್ಲಿ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಇದಕ್ಕಾಗಿ ಕಲಿಕೆಯಲ್ಲಿ ಹಿಂದುಳಿದ 6611 ಮಕ್ಕಳನ್ನು ಗುರುತಿಸಿ ಪರೀಕ್ಷೆ ನಡೆಸಲಾಗಿದೆ. ಜುಲೈ ನಾಲ್ಕನೇ ವಾರದಿಂದ ಮಾರ್ಚ್ ಮೂರನೇ ವಾರದವರೆಗೆ ಪ್ರತಿ 15 ದಿನಕ್ಕೊಮ್ಮೆ ಪರೀಕ್ಷೆ ನಡೆಸಲಾಗಿದೆ. ಮೂರು ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿದ್ದು ಶೇ.78.69 ಫಲಿತಾಂಶ ಪಡೆದಿದೆ. ರಾತ್ರಿ ಶಾಲೆಗಳು, ಕಲಿಕೆ ಹಿಂದುಳಿದವರಿಗೆ ಬುದ್ದಿವಂತ ವಿದ್ಯಾರ್ಥಿಗಳ ತಂಡ ರಚನೆ, ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಪೋಷಕರ ಸಭೆ, ಫಲಿತಾಂಶ ಹೆಚ್ಚಳಕ್ಕೆ ವಿಷಯವಾರು ಶಿಕ್ಷಕರಿಗೆ ತರಬೇತಿ ನೀಡಿ ಕ್ರಮ ಕೈಗೊಳ್ಳಲಾಗಿದೆ ಎಂದರು.ಮಕ್ಕಳಿಗೆ ಆತಂಕ ಬೇಡ:

ಪರೀಕ್ಷೆ ಕುರಿತು ಮಕ್ಕಳು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಪ್ರಶ್ನೆಪತ್ರಿಕೆ ಲೀಕ್ ಕುರಿತು ಸುಳ್ಳು ಮೆಸೇಜ್ ಹಾಕಿದರೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಊಹಾಪೋಹಗಳಿಗೆ ಕಿವಿಗೊಡಬಾರದು ಎಂದರು.

ಈ ವೇಳೆ ಬಿಇಒ ಚನ್ನಬಸಪ್ಪ ಮಗ್ಗದ, ನೋಡಲ್‌ ಅಧಿಕಾರಿ ಹುಲಿಬಂಡಿ ಇದ್ದರು.