ಧಾರವಾಡ:

ಹು-ಧಾ ಮಹಾನಗರ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲು ರಾಜ್ಯ ಸರ್ಕಾರ ಒಪ್ಪಿ, ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ಸಹ ಅವಕಾಶ ನೀಡಿದಾಗ ತಕರಾರು ಸಲ್ಲಿಸದ ವಿರೋಧಿಗಳದ್ದು ನೈತಿಕ ಶೂನ್ಯತೆ. ಪ್ರತ್ಯೇಕ ಪಾಲಿಕೆ ವಿರೋಧಿಸುವವರು ನೈಜವಾಗಿ ಧಾರವಾಡಕ್ಕೆ ದ್ರೋಹ ಬಗೆಯುತ್ತಿದ್ದು, ಕೊನೆ ಕ್ಷಣದ ಈ ಆಕ್ಷೇಪಣೆಗೆ ರಾಜ್ಯ ಸರ್ಕಾರ ಕಿವಿಗೊಡದೇ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಗೆ ಅಂತಿಮ ಅಧಿಸೂಚನೆ ಹೊರಡಿಸಬೇಕು.

ಇದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಪರವಾಗಿ ಹೋರಾಟಗಾರ ಬಿ.ಡಿ. ಹಿರೇಮಠ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ ಪರಿ. ಜತೆಗೆ ಇನ್ನು 15 ದಿನಗಳೊಳಗೆ ಸರ್ಕಾರ ಹೋರಾಟಗಾರರನ್ನು ಕರೆಯಿಸಿ ಪ್ರತ್ಯೇಕ ಪಾಲಿಕೆಯ ಘೋಷಣೆ ಮಾಡಬೇಕು. ಇಲ್ಲದೇ ಹೋದಲ್ಲಿ ನಾವು ನಿರಂತರ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದರು.

ಪ್ರತ್ಯೇಕ ಪಾಲಿಕೆಯ ಇಡೀ ಪ್ರಕ್ರಿಯೆ ಮುಗಿದು ರಾಜ್ಯಪಾಲರು ಸಹ ಸಹಿ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಇಂತಹ ಸಮಯದಲ್ಲಿ ಕೃಪಾ ಪೋಷಿತ ಮಿತ್ರ ಮಂಡಳಿಯು ಸರ್ಕಾರಕ್ಕೆ ದಾರಿ ತಪ್ಪಿಸುವ ಮನವಿ ಸಲ್ಲಿಸಿ ಗೊಂದಲ ಸೃಷ್ಟಿಸಿದೆ. ಪ್ರತ್ಯೇಕ ಪಾಲಿಕೆಗೆ ವಿರೋಧವೇ ಇದ್ದರೆ, ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿದಾಗ ತಕರಾರು ಮಾಡದೇ ಈಗೇಕೆ ಈ ನಿಲುವು ಎಂದು ಪ್ರತ್ಯೇಕ ಪಾಲಿಕೆ ವಿರೋಧಿಸಿದ ಹು-ಧಾ ಅಭಿವೃದ್ಧಿ ಫೋರಂನ ಅರುಣ ಚರಂತಿಮಠ, ಹನುಮಂತ ಡಂಬಳ ಹಾಗೂ ಇತರರಿಗೆ ಪ್ರಶ್ನಿಸಿದರು.

ಧಾರವಾಡ ಅಭಿವೃದ್ಧಿಗೆ ಹಿನ್ನೆಡೆಯಾಗಿರುವ ಹಿನ್ನೆಲೆಯಲ್ಲಿ ನ್ಯಾಯಯುತವಾಗಿ ಕೇಳಿದ ಪ್ರತ್ಯೇಕ ಪಾಲಿಕೆಗೆ ಎಲ್ಲ ರೀತಿ ಮಾನದಂಡವನ್ನು ಪೂರೈಸಲಾಗಿದೆ. ಕೇಂದ್ರ ಜನಗಣತಿ ನಿಯಮ ಮತ್ತು ಹಾಲಿ ಚುನಾಯಿತ ಪಾಲಿಕೆ ಅವಧಿಯ ತಾಂತ್ರಿಕ ನೆಪಗಳನ್ನು ವಿರೋಧಿಗಳು ಮುನ್ನಲೆಗೆ ತಂದಿದೆ. ಭೌಗೋಳಿಕ ಗಡಿಗಳ ಪ್ರತ್ಯೇಕಿಕರಣ ಮತ್ತು ಹೊಸ ಪಾಲಿಕೆಯ ಆಡಳಿತ ಜಾರಿಯನ್ನು ರಾಜ್ಯಪಾಲರ ಷರತ್ತಿನಂತೆ 2027ರ ನಿಯಮಾವಳಿ ಅವಧಿ ಹಾಗೂ ಪಾಲಿಕೆಯ ಅವಧಿ ಮುಗಿದ ನಂತರ ಅನುಷ್ಠಾನಕ್ಕೆ ತರಬಹುದು. ಈಗ ಮಾತ್ರ ಅಂತಿಮ ಅಧಿಸೂಚನೆ ಹೊರಡಿಸಲು ಯಾವುದೇ ಕಾನೂನು ಅಡ್ಡಿ ಇಲ್ಲ. ಹಲವು ದಶಕಗಳ ಭರವಸೆ ನಂಬಿ ಆಡಳಿತಾತ್ಮಿಕ ನ್ಯಾಯಕ್ಕಾಗಿ ಚಾತಕ ಪಕ್ಷಿಯಂತೆ ಧಾರವಾಡ ಜನರು ಕಾಯುತ್ತಿದ್ದಾರೆ. ಮುಖ್ಯಮಂತ್ರಿಗಳು ಆಡಳಿತಾತ್ಮಕ ಚಾತುರ್ಯ ಹೊಂದಿದ್ದಾರೆ. ದೃಢ ನಿರ್ಧಾರ ಪ್ರಕಟಿಸಿ, ಇಲ್ಲದೇ ಹೋದಲ್ಲಿ ನಮ್ಮಿಂದ ದಿಟ್ಟವಾದ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಬಿ.ಡಿ. ಹಿರೇಮಠ ಸ್ಪಷ್ಟಪಡಿಸಿದರು.


ಸುದ್ದಿಗೋಷ್ಠಿಯಲ್ಲಿ ಮಹಾದೇವ ಹೊರಟ್ಟಿ, ಗುರುರಾಜ ಹುಣಸೀಮರದ, ವಿಠ್ಠಲ ಕಮ್ಮಾರ, ಅರವಿಂದ ಏಗನಗೌಡರ, ನಾಗರಾಜ ಗೌರಿ, ಶಂಕರ ನೀರಾವರಿ, ಸುಧೀರ ಮುಧೋಳ, ರವಿಕುಮಾರ ಮಾಳಿಗೇರ ಮತ್ತಿತರರು ಇದ್ದರು. ಇಂದು ಹೋರಾಟಗಾರರ ಸಭೆ..

ಕ್ಯಾಬಿನೆಟ್‌ ಅನುಮೋದನೆ ಮತ್ತು ರಾಜ್ಯಪಾಲರ ಒಪ್ಪಿಗೆ ದೊರೆತರೂ ಅಂತಿಮ ಅಧಿಸೂಚನೆ ಹೊರಡಿಸದ ಸರ್ಕಾರದ ವಿಳಂಬ ಧೋರಣೆ ವಿರುದ್ಧ ಹೋರಾಟ ಮುನ್ನಡೆಸಲು ಜುಲೈ 15ರ ಸಂಜೆ 5ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹೋರಾಟಗಾರರ ಸಭೆ ಕರೆಯಲಾಗಿದೆ. ಸಭೆಗೆ ಸಂಸದರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಜಿಲ್ಲೆಯ ಜನಪ್ರತಿಧಿಗಳು, ಸಂಘ-ಸಂಸ್ಥೆಗಳ ಮುಖಂಡರು, ಹೋರಾಟಗಾರರು ಭಾಗವಹಿಸಬೇಕು ಎಂದು ಹಿರೇಮಠ ಮನವಿ ಮಾಡಿದರು.