ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಿ ಜಿಲ್ಲೆಯಲ್ಲಿ ಶೇ.100ರಷ್ಟು ಮತದಾನ ಮಾಡಬೇಕೆಂದು ಜಿಲ್ಲಾಡಳಿತ ವತಿಯಿಂದ ವಿನಂತಿಸಿಕೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಸುಶೀಲಾ ತಿಳಿಸಿದರು.ಭಾರತ ಚುನಾವಣಾ ಆಯೋಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ನಗರಸಭೆ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ -2024ರ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ನಗರದ ಹೊಸ ಬಸ್ ನಿಲ್ದಾಣ ಹತ್ತಿರದ ಚಿರಂಜೀವಿ ಮೆಥೊಡಿಸ್ಟ್ ಪ್ರೌಢ ಶಾಲೆಯ ಮುಂಭಾಗದಲ್ಲಿ ವಿಶಿಷ್ಟ ರೀತಿಯ ಮೊಂಬತ್ತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಜೊತೆಗೆ ಸುರಪುರ ಮತಕ್ಷೇತ್ರದ ಉಪ ಚುನಾವಣೆಯು ಮೇ 7ರಂದು ನಡೆಯಲಿದ್ದು, ಎಲ್ಲರೂ ತಮ್ಮ ಮತಗಟ್ಟೆಗಳಿಗೆ ತೆರಳಿ ತಮ್ಮ ಅಮೂಲ್ಯವಾದ ಮತ ಚಲಾಯಿಸಬೇಕು ಎಂದರು.ಮತಹಕ್ಕು ಎನ್ನುವುದು ಕೇವಲ ನಮ್ಮ ಹಕ್ಕು ಮಾತ್ರವಲ್ಲ. ನಮ್ಮ ಜವಾಬ್ದಾರಿಯು, ಆಯ್ಕೆಯು ಆಗಿದೆ. ಜಿಲ್ಲೆ, ದೇಶದ ಅಭಿವೃದ್ಧಿಗೆ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇದಾಗಿದೆ. ನಾವು ಪ್ರತಿಯೊಂದು ಹಬ್ಬವನ್ನು ಕುಟುಂಬದ ಸದಸ್ಯರ ಜೊತೆಗೆ ಆಚರಣೆ ಮಾಡ್ತೇವೋ ಅದೇ ರೀತಿ ನಮ್ಮ ರಾಜ್ಯದ ಮತ್ತು ದೇಶದ ಅತಿದೊಡ್ಡ ಹಬ್ಬ. ಈ ಚುನಾವಣೆ ಹಬ್ಬವು ನಮ್ಮ ದೇಶದ ಹೆಮ್ಮೆ, ಗರ್ವವಾದ ಹಬ್ಬವಾಗಿದೆ. ಈ ಹಬ್ಬದಲ್ಲಿ ಜಿಲ್ಲೆಯ ಜನರು ಭಾಗವಹಿಸಿ ಯಶಸ್ವಿಗೊಳಿಸೋಣ ಎಂದರು.
ಜಿಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಗರಿಮಾ ಪನ್ವಾರ ಮಾತನಾಡಿ, ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ, ದೇಶದ ಅಭಿವೃದ್ಧಿಗಾಗಿ ಮತದಾನದ ಅಧಿಕಾರವನ್ನು ಎಲ್ಲರೂ ಕಡ್ಡಾಯವಾಗಿ ಚಲಾಯಿಸಿ ಸುಭದ್ರವಾದ ದೇಶ ಕಟ್ಟಲು ಸಹಕರಿಸಿ ಎಂದು ನುಡಿದರು.ಸಹಾಯಕ ಆಯುಕ್ತ ಪ್ರಕಾಶ ಕುದರಿ, ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ, ಅಂಬೇಡ್ಕರ್ ನಿಗಮದ ವ್ಯವಸ್ಥಾಪಕಿ ದೀಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಉತ್ತರಾದೇವಿ ಮಠಪತಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಾಧರ ದೊಡ್ಮನಿ, ಡಿಹೆಚ್ಒ ಡಾ. ಪ್ರಭುಲಿಂಗ ಮಾನಕರ್, ತಹಸೀಲ್ದಾರ್ ವಿಜಯಕುಮಾರ ಮುಂತಾದವರಿದ್ದರು.