ಪ್ರಧಾನಿ ಮಾತಿನಿಂದ ದೇಶ ತಲೆತಗ್ಗಿಸುವಂತಾಗಿದೆ: ಶಿವಸುಂದರ

| Published : Apr 24 2024, 02:19 AM IST

ಸಾರಾಂಶ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತನ್ನೆಲ್ಲ ವಶಪಡಿಸಿಕೊಂಡು ಮುಸ್ಲಿಂರಿಗೆ ಹಂಚಿಕೆ ಮಾಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಇದರಿಂದ ವಿಶ್ವದಲ್ಲಿ ಭಾರತ ತಲೆ ತಗ್ಗಿಸುವಂತಾಗಿದೆ.

ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಕಾರ್ಯಕ್ರಮ

ದೇಶದ ಯಾವ ಪ್ರಧಾನಿಯೂ ಈ ರೀತಿ ಹೇಳಿರಲಿಲ್ಲ

ಸಂಪತ್ತು ಹಂಚಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ ಕನ್ನಡಪ್ರಭ ವಾರ್ತೆ ಕೊಪ್ಪಳ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತನ್ನೆಲ್ಲ ವಶಪಡಿಸಿಕೊಂಡು ಮುಸ್ಲಿಂರಿಗೆ ಹಂಚಿಕೆ ಮಾಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಇದರಿಂದ ವಿಶ್ವದಲ್ಲಿ ಭಾರತ ತಲೆ ತಗ್ಗಿಸುವಂತಾಗಿದೆ ಎಂದು ಪ್ರಗತಿಪರ ಚಿಂತಕ ಶಿವಸುಂದರ ಆರೋಪಿಸಿದರು.

ನಗರದ ವಾಲ್ಮೀಕಿ ಭವನದಲ್ಲಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ "ಕೋಮುವಾದಿ ಸೋಲಿಸಿ, ಭಾರತ ಉಳಿಸಿ " ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನಮೋಹನ್ ಸಿಂಗ್ ಹೇಳಿಕೆಯನ್ನೇ ತಿರುಚಿ ಪ್ರಧಾನಿ ನರೇಂದ್ರ ಮೋದಿ ಈಗ ಜನರ ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ. ದೇಶದ ಸಂಪತ್ತು ದೀನದಲಿತರು, ಅಲ್ಪಸಂಖ್ಯಾತರಿಗೆ ಪ್ರಥಮವಾಗಿ ಹಂಚಿಕೆಯಾಗುವಂತಾಗಬೇಕು ಎನ್ನುವ ಸದಾಶಯದ ಮಾತು ಆಡಿದ್ದನ್ನೇ ಒಂದು ಕೋಮಿಗೆ ಹಂಚಿಕೆ ಮಾಡುತ್ತಾರೆ ಎನ್ನುವ ಮೂಲಕ ಅತ್ಯಂತ ಕೆಟ್ಟದಾಗಿ ಹೇಳಿಕೆ ನೀಡಿದ್ದಾರೆ. ದೇಶದ ಇತಿಹಾಸದಲ್ಲಿಯೇ ಯಾವೊಬ್ಬ ಪ್ರಧಾನಿಯೂ ಈ ರೀತಿ ಹೇಳಿಕೆ ನೀಡಿರಲಿಲ್ಲ ಎಂದು ವಿಷಾಧಿಸಿದರು.

ಬಹುತ್ವ ಭಾರತ ಕಟ್ಟಬೇಕೆನ್ನುವುದು ಸಂವಿಧಾನದ ಆಶಯವಾಗಿದ್ದರೆ ಪ್ರಧಾನಿ ಮೋದಿ ಹಿಂದುತ್ವದ ದೇಶ ಕಟ್ಟಬೇಕು ಎನ್ನುತ್ತಿದ್ದಾರೆ. ದೇಶ ಎಂದರೆ ಜನರು ಎಂದು ಸಂವಿಧಾನ ಹೇಳಿದರೆ, ಪ್ರಧಾನಿ ನರೇಂದ್ರ ಮೋದಿ ದೇಶ ಎಂದರೇ ಶ್ರೀರಾಮ, ದೇಶ ಸೇವೆ ಎಂದರೆ ಶ್ರೀರಾಮನ ಸೇವೆ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಶ್ರೀರಾಮಂದಿರ ಉದ್ಘಾಟನಾ ಸಮಾರಂಭದಲ್ಲಿ ಇದನ್ನು ಅವರು ಹೇಳಿದ್ದಾರೆ ಎಂದರು.

ಸಂವಿಧಾನ ಹಕ್ಕು ನೀಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಮನುಸ್ಮೃತಿಯಂತೆ ಕರ್ತವ್ಯದ ಕುರಿತು ಮಾತನಾಡುತ್ತಾರೆ. ಅಂದರೆ ಯಾರು ಯಾವ ಯಾವ ಕರ್ತವ್ಯ ಮಾಡುತ್ತಿದ್ದಾರೆ, ಅದನ್ನೇ ಅವರು ಮುಂದುವರೆಸಿಕೊಂಡು ಹೋಗಬೇಕು ಎನ್ನುವ ಮೂಲಕ ದೇಶದಲ್ಲಿ ವರ್ಗ ಸಮಾಜ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ ಎಂದರು.

ದೇಶದಲ್ಲಿ ಈ ಹಿಂದೆ ಯಾವ ಸರ್ಕಾರದಲ್ಲಿಯೂ ಇಷ್ಟೊಂದು ದೊಡ್ಡ ಹಗರಣ ನಡೆದಿರಲಿಲ್ಲ. ಆದರೆ, ಚುನಾವಣಾ ಬಾಂಡ್ ಹಗರಣ ವಿಶ್ವದಲ್ಲಿಯೇ ದೊಡ್ಡ ಹಗರಣವಾಗಿದೆ. ಇದು ಮೇಲ್ನೋಟಕ್ಕೆ ಕಾಣುವುದು ಅಷ್ಟೇ, ಇದನ್ನು ತನಿಖೆ ಮಾಡಿದಾಗ ಇನ್ನೂ ದೊಡ್ಡ ಹಗರಣ ಬೆಳಕಿಗೆ ಬರುತ್ತದೆ ಎಂದರು.

ದೇಶದಲ್ಲಿನ ಸಮಸ್ಯೆಗೆ ಕಾಂಗ್ರೆಸ್ ಪಕ್ಷವೂ ಪರಿಹಾರ ಅಲ್ಲ, ಆದರೆ, ಸದ್ಯ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷವೇ ನಮಗೆ ಪರ್ಯಾಯವಾಗಿದ್ದರಿಂದ ಬೆಂಬಲಿಸುತ್ತಿದ್ದೇವೆ ಎಂದರು.

ಸಭೆಯಲ್ಲಿ ಚಿಂತಕ ಡಾ. ಲಕ್ಷ್ಮಿನಾರಾಯಣಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಹೋರಾಟಗಾರರಾದ ಎಚ್.ಎಸ್. ಪಾಟೀಲ್, ಬಸವರಾಜ ಶೀಲವಂತರ, ಡಿ.ಎಚ್. ಪೂಜಾರ, ಶೈಲಜಾ ಹಿರೇಮಠ, ಸಾವಿತ್ರಿ ಮುಜುಂದಾರ, ಆದಿಲ್ ಪಟೇಲ್ ಇದ್ದರು.

ಕೆ.ಬಿ. ಗೋನಾಳ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಇದಕ್ಕೂ ಮೊದಲು ಕ್ರಾಂತಿಗೀತೆಗಳನ್ನು ಹಾಡಲಾಯಿತು.