ರಾಜ್ಯಕ್ಕೆ ಕೇಂದ್ರ ಅನುದಾನ ನೀಡಿಲ್ಲ ಎಂಬುದು ರಾಜಕೀಯ ದುರುದ್ದೇಶದ ಆರೋಪ: ಅಣ್ಣಾ ಮಲೈ

| Published : Apr 24 2024, 02:19 AM IST

ಸಾರಾಂಶ

ಕೇಂದ್ರ ಸರ್ಕಾರದ ಮಾರ್ಗದರ್ಶಿ ನಿಯಮದ ಪ್ರಕಾರವೇ ನೆರವು ನೀಡುತ್ತಿದ್ದು, ವಿನಾ ಕಾರಣ ಇದನ್ನೇ ರಾಜಕೀಯ ಆರೋಪದ ಉದ್ದೇಶಕ್ಕೆ ಹೇಳಲಾಗುತ್ತಿದೆ ಎಂದು ಅಣ್ಣಾಮಲೈ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡಿಲ್ಲ ಎಂಬುದು ರಾಜಕೀಯ ದುರುದ್ದೇಶಕ್ಕಾಗಿ ಕಾಂಗ್ರೆಸ್‌ ಮಾಡುತ್ತಿರುವ ಆಪಾದನೆಯಾಗಿದೆಯೇ ಹೊರತು ವಾಸ್ತವಾಂಶ ಹಾಗಿಲ್ಲ ಎಂದು ತಮಿಳ್ನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004ರಿಂದ 2014ರ ವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಆಗ ರಾಜ್ಯದ ಬೇಡಿಕೆ ಹೊರತೂ ಯುಪಿಎ ಸರ್ಕಾರ ನೀಡಿದ್ದು ಶೇ.8ರಷ್ಟು ನೆರವು ಮಾತ್ರ. 2014ರಿಂದ 2022ರ ಅವಧಿಯಲ್ಲಿ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ಶೇ.38ರಷ್ಟು ನೆರವು ನೀಡಿದೆ. ಅದೇ ರೀತಿ ತಮಿಳ್ನಾಡಿಗೂ ನೆರವು ನೀಡಿಕೆಯಲ್ಲಿ ತುಲನಾತ್ಮಕತೆ ಇದೆ. ಕೇಂದ್ರ ಸರ್ಕಾರದ ಮಾರ್ಗದರ್ಶಿ ನಿಯಮದ ಪ್ರಕಾರವೇ ನೆರವು ನೀಡುತ್ತಿದ್ದು, ವಿನಾ ಕಾರಣ ಇದನ್ನೇ ರಾಜಕೀಯ ಆರೋಪದ ಉದ್ದೇಶಕ್ಕೆ ಹೇಳಲಾಗುತ್ತಿದೆ ಎಂದರು.ಭಾವನಾತ್ಮಕ ವಿಚಾರದಲ್ಲಿ ರಾಜಕೀಯ ಬೇಡ:

ಕರ್ನಾಟಕ ಮತ್ತು ತಮಿಳುನಾಡಿನ ಜನತೆ ಪರಸ್ಪರ ಅನ್ಯೋನ್ಯವಾಗಿದ್ದಾರೆ. ಮೇಕೆದಾಟು, ಕಾವೇರಿ ವಿಚಾರಗಳು ಭಾವನಾತ್ಮಕವಾಗಿದ್ದು, ಅದನ್ನು ಕೇಂದ್ರವೇ ಪರಿಹರಿಸಬೇಕಾಗಿದೆ. ನೀರಿಗೆ ಸಂಬಂಧಿಸಿದ ವಿಚಾರಗಳನ್ನು ವಾಟರ್‌ ಬೋರ್ಡ್‌ ಪರಿಹರಿಸಲಿದ್ದು, ಅನ್ಯಥಾ ಪರಸ್ಪರ ನಂಬಿಕೆ, ವಿಶ್ವಾಸವನ್ನು ಕದಡುವ ಕೆಲಸ ಯಾರೂ ಮಾಡಬಾರದು. ಇದರಲ್ಲಿ ರಾಜಕೀಯ ಬೇಡ ಎಂದರು. ಹದಗೆಟ್ಟ ಕಾನೂನು:

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್‌ ಹತ್ಯೆ ಘಟನೆ ಏಕಮುಖ ಪ್ರೀತಿಯಿಂದ ಸಂಭವಿಸಿದೆ. ಗೃಹ ಸಚಿವರು ತಡವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪ್ರತಿಕ್ರಿಯೆ ನಾಗರಿಕ ಸಮಾಜ ಒಪ್ಪಲಿಕ್ಕಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ನೇರವಾಗಿ ಕಾನೂನು ಪಾಲನೆಯಾಗುತ್ತಿಲ್ಲ. ಮಾನವೀಯತೆ ನೆಲೆಯಲ್ಲಿ ನೇಹಾಳ ಮನೆಗೆ ಬಿಜೆಪಿ ಭೇಟಿ ನೀಡಿ, ಅವರಿಗೆ ನೈತಿಕ ಧೈರ್ಯವನ್ನು ತುಂಬಿದೆ ಎಂದರು.ಆಯೋಗಕ್ಕೆ ದೂರು:

ತಮಿಳುನಾಡಿನ ಗ್ರಾಮೀಣ ಭಾಗಗಳಲ್ಲಿ ಮತದಾರರ ಪಟ್ಟಿಯಿಂದ ಏಕಾಏಕಿ ಹೆಸರುಗಳನ್ನು ತೆಗೆದುಹಾಕಲಾಗಿದೆ. ಎಲ್ಲರೂ ಒಂದೇ ಕುಟುಂಬದಲ್ಲಿದ್ದರೂ, ಎಲ್ಲರ ಹೆಸರು ಇಲ್ಲ. ಮತದಾರರ ಪಟ್ಟಿಯಲ್ಲೂ ತಪ್ಪು ನುಸುಳಿ ಅಚಾತುರ್ಯಕ್ಕೆ ಕಾರಣವಾಗಿದೆ. ಈ ವಿಚಾರ ಇತ್ತೀಚೆಗೆ ಚುನಾವಣೆ ವೇಳೆ ಬೆಳಕಿಗೆ ಬಂದಿದೆ. ಇದರ ವಿರುದ್ಧ ಚುನಾಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.