ಕನ್ನಡಪ್ರಭ ವಾರ್ತೆ ಪಾಂಡವಪುರ

ವಿದ್ಯಾರ್ಥಿಗಳು, ಯುವ ಸಮುದಾಯ ಮಾದಕ ವಸ್ತುಗಳ ವ್ಯಸನಗಳ ದುಶ್ಚಟಕ್ಕೆ ಒಳಗಾಗಬಾರದು. ಒಮ್ಮೆ ದುಶ್ಚಟಕ್ಕೆ ಒಳಗಾದರೆ ಅದರಿಂದ ಹೊರ ಬರೋದು ಬಹಳಕಷ್ಟವಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ಹೇಳಿದರು.

ಪಟ್ಟಣದ ನಿರ್ಮಲ ಸಂಯುಕ್ತ ಪದವಿ ಪೂರ್ವಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಶಾಲಾ-ಕಾಲೇಜುಗಳ ಆವರಣದಿಂದ 100 ಮೀಟರ್‌ವರೆಗೂ ಯಾವುದೇ ಮಾದಕ ವಸ್ತುಗಳನ್ನು ಮಾರಾಟ ಮಾಡದಂತೆ ಕಾನೂನಿನಲ್ಲಿ ತಡೆ ಇದ್ದರೂ ಸಹ ಚಾಕಲೇಟ್ ರೂಪದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಅದರಿಂದ ವಿದ್ಯಾರ್ಥಿಗಳು ವ್ಯಸನಕ್ಕೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ನಗರ ಪ್ರದೇಶದಲ್ಲಿ ಓದುವ ಮೆಡಿಕಲ್, ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಂಚೆ, ಕೋರಿಯರ್‌ಗಳ ಮೂಲಕವು ಪೂರೈಕೆ ಮಾಡುವ ಜಾಲ ಹುಟ್ಟಿಕೊಂಡಿವೆ. ಯುವ ಸಮುದಾಯ ದೇಶದ ಭವಿಷ್ಯವಾಗಿರುವುದರಿಂದ ಇಂತಹ ವ್ಯಸನಗಳಿಗೆ ದಾಸರಾಗದೇ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.


ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಮಾತನಾಡಿ, ನಗರ ಪ್ರದೇಶದ ಕಾಲೇಜುಗಳಲ್ಲಿ ಡ್ರಕ್ಸ್, ಅಫೀಮು, ಗಾಂಜಾ ದಂತಹ ಮಾದಕ ವಸ್ತುಗಳು ಸರಾಗವಾಗಿ ದೊರೆಯುತ್ತಿವೆ. ಇದಕ್ಕೆ ಕಡಿವಾಣ ಅಗತ್ಯ ಎಂದರು.

ಇದೇವೇಳೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗುವುದಿಲ್ಲವೆಂದು ಪ್ರಮಾಣ ವಚನ ಸ್ವೀಕರಿಸಲಾಯಿತು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್, ಕಾಲೇಜು ಪ್ರಾಂಶುಪಾಲೆ ಸಿಸ್ಟರ್ ರೀಟಾ ಜಾಯ್ಸ್, ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ, ಮೇರಿಜಯಾ, ಸಿಸ್ಟರ್‌ಮೇರಿ ಜೆನಿಫರ್, ಮೇರಿರಾಶಿಕ, ಗೋಪಾಲ್ ಸೇರಿದಂತೆ ಹಲವರು ಇದ್ದರು.