ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ 32 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬಹುತೇಕ ಖಾಯಂ ಶಿಕ್ಷಕರೇ ಇಲ್ಲ.ಇದರಿಂದಾಗಿ ಮಕ್ಕಳ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ ಎಂದು ತಾಲೂಕು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಆರೋಪಿಸಿದರು.

ತಾಲೂಕು ಬಿಜೆಪಿ ಘಟಕದಿಂದ ಪಟ್ಟಣದ ನಿವಾಸವೊಂದರಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು,ಮಾತನಾಡಿದರು. ಬರ ಪೀಡಿತ ಹಾಗೂ ಅತ್ಯಂತ ಹಿಂದುಳಿದ ತಾಲೂಕೆಂದೇ ಹೆಸರಾಗಿರುವ ನಮ್ಮ ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯ ಬಳಿ ಈ ಬಗ್ಗೆ ಪೂರ್ಣ ದಾಖಲೆ ಇದ್ದು, ಮಾಹಿತಿ ಪ್ರಕಾರ ಬಿ.ಹೊಸಹಳ್ಳಿಯಲ್ಲಿ 102 ಮಂದಿ ವಿದ್ಯಾರ್ಥಿಗಳಿದ್ದು, ಆದರೆ ಖಾಯಂ ಆಗಿ ಒಬ್ಬರು ಶಿಕ್ಷಕರಿಲ್ಲ. ನಿಯೋಜನಗೊಂಡ ಒಬ್ಬ ಶಿಕ್ಷಕ ಅಡುಗೆ ಇನ್ನಿತರ ಕಾರ್ಯಗಳನ್ನು ಹೇಗೆ ಪರಿಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಜಿ.ವೆಂಕಟರಾಮಯ್ಯ ಅವರು ಮಾತನಾಡಿ, ಬಡ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಶಿಕ್ಷಣದ ಆಧಾರಸ್ತಂಭ. ಆದರೆ ಬಡ ಮಕ್ಕಳು ಓದುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಂತಾಗಿದೆ. ಹೀಗಾಗಿ ಖಾಯಂ ಶಿಕ್ಷಕರನ್ನು ನಿಯೋಜಿಸುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್, ತಾಲೂಕು ಘಟಕದ ಖಜಾಂಚಿ ಪುನೀತ್, ಓಬಿಸಿ ತಾಲೂಕು ಘಟಕದ ಮುಖಂಡ ರಂಗನಾಥ್, ಎಸ್.ಸಿ. ಮೋರ್ಚಾದ ಕಾರ್ಯದರ್ಶಿ ಶಂಕರ್ ನಾಯ್ಕ ,ಮುಖಂಡ ಪ್ರಭಾಕರ್ ಇನ್ನಿತರೆ ಬಿಜೆಪಿ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಇದ್ದರು.