ಕನ್ನಡಪ್ರಭ ವಾರ್ತೆ ಸಕಲೇಶಪುರ

ಪತ್ರಕರ್ತರು ಯಾವುದೇ ಬಾಹ್ಯ ಶಕ್ತಿಗಳ ಪ್ರಭಾವಕ್ಕೆ ಒಳಗಾಗದೆ, ತಮ್ಮ ವಿವೇಚನೆ, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ಬಲಿಷ್ಠವಾಗುತ್ತದೆ ಎಂದು ತೆಂಕಲಗೂಡಿನ ಶ್ರೀ ಚನ್ನ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಲಯನ್ಸ್ ಹಾಲ್‌ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಕಲೇಶಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಪತ್ರಿಕೋದ್ಯಮವು ಸಮಾಜದ ಕಣ್ಣು ಮತ್ತು ಕಿವಿಯಂತೆ ಕಾರ್ಯನಿರ್ವಹಿಸುವ ಮಹತ್ತರ ಹೊಣೆಗಾರಿಕೆಯ ಕ್ಷೇತ್ರವಾಗಿದೆ. ಸತ್ಯವನ್ನು ನಿರ್ಭೀತಿಯಿಂದ ಜನರ ಮುಂದಿಡುವುದು ಪತ್ರಕರ್ತರ ಕರ್ತವ್ಯವಾಗಿದ್ದು, ಸುದ್ದಿಗಳ ಪ್ರಸಾರದಲ್ಲಿ ಪ್ರಾಮಾಣಿಕತೆ, ನಿಷ್ಪಕ್ಷಪಾತತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪತ್ರಕರ್ತರು ರಾಜಕೀಯ, ಆರ್ಥಿಕ ಅಥವಾ ವೈಯಕ್ತಿಕ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ವರದಿ ಮಾಡಿದಾಗ ಮಾತ್ರ ಮಾಧ್ಯಮಗಳ ಮೇಲಿನ ಸಾರ್ವಜನಿಕರ ವಿಶ್ವಾಸ ಮತ್ತಷ್ಟು ಗಟ್ಟಿಯಾಗುತ್ತದೆ. ಸಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಜನರ ಧ್ವನಿಯನ್ನು ಸರ್ಕಾರದ ಮಟ್ಟಕ್ಕೆ ತಲುಪಿಸುವ ಸೇತುವೆಯಾಗಿ ಅವರು ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆಂಚೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೋದ್ಯಮವು ಹಣ ಸಂಪಾದನೆಯ ಉದ್ದಿಮೆ ಅಲ್ಲ. ಅದು ಸೇವಾ ಮನೋಭಾವದ ಕಾಯಕವಾಗಿದೆ. ಅನೇಕ ಸವಾಲುಗಳು, ಒತ್ತಡಗಳು ಮತ್ತು ಅಪಾಯಗಳ ನಡುವೆಯೂ ಸತ್ಯದ ಪರವಾಗಿ ನಿಲ್ಲುವ ಧೈರ್ಯವನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಮಾಜಿ ಸಚಿವ ಎಚ್. ಕೆ. ಕುಮಾರಸ್ವಾಮಿ, ಮಾಜಿ ಶಾಸಕ ಬಿ. ಆರ್‌. ಗುರುದೇವ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುರುಳಿ ಮೋಹನ್, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಬೈರಮುಡಿ ಚಂದ್ರು, ಬಿಜೆಪಿ ತಾಲೂಕು ಅಧ್ಯಕ್ಷ ಅಶ್ವಥ್, ಜಿಲ್ಲಾ ಸಂಘದ ಕಾರ್ಯದರ್ಶಿ ಕುಶ್ವಂತ್, ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯ ರವಿ ನಾಕಲಗೋಡು ಹಾಗೂ ಹೆತ್ತೂರು ನಾಗರಾಜ್, ಮಾಜಿ ಅಧ್ಯಕ್ಷ ಬಾಳ್ಳುಗೋಪಾಲ್, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಸಂಜೀತ್ ಶೆಟ್ಟಿ, ಲಯನ್ಸ್ ಅಧ್ಯಕ್ಷ ಗಿರೀಶ್ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುಮೂರ್ತಿ ಹಾಗೂ ಬದ್ರಿಯಾ ಮಸೀದಿ ಮಾಜಿ ಅಧ್ಯಕ್ಷ ಆದಮ್ ಹಾಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಎಚ್.ಡಿ. ಕುಮಾರ್ ಪ್ರಾರ್ಥನೆ ಸಲ್ಲಿಸಿದರು.ಪ್ರಧಾನ ಕಾರ್ಯದರ್ಶಿ ಅಕ್ಬರ್‌ ಜುನೈದ್ ಸ್ವಾಗತಿಸಿದರು. ಖಜಾಂಚಿ ಯೋಗೇಶ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ನವೀನ್ ಸದಾ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಿರಂಜನ್ ಮೂರ್ತಿ, ವಿನಯ್ ಕೂಡರಸ್ತೆ, ಚೇತನ್, ಅರ್ಜುನ್ ಹಾಗೂ ಮಲ್ನಾಡ್ ಮೆಹಬೂಬ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಹೆತ್ತೂರು ರವಿ ವಂದನಾರ್ಪಣೆ ಸಲ್ಲಿಸಿದರು.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಕಾಂತರಾಜ್ ಹೊನ್ನೇಕೋಡಿ, ಪ್ರಧಾನ ಕಾರ್ಯದರ್ಶಿ ಅಕ್ಬರ್‌ ಜುನೈದ್ ಸೇರಿದಂತೆ ಎಲ್ಲಾ ನೂತನ ಪದಾಧಿಕಾರಿಗಳನ್ನು ವಿವಿಧ ಸಂಘಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಭಿನಂದಿಸಿದರು.ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ್ ಕೀರ್ತಿ, ಮಾಜಿ ಅಧ್ಯಕ್ಷ ಯಾದ್ಗಾರ್‌ ಇಬ್ರಾಹಿಂ, ಕೆಪಿಸಿಸಿ ಸದಸ್ಯ ಸಲಿಂ ಕೊಲ್ಲಹಳ್ಳಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮೊಹಮ್ಮದ್ ಹನೀಫ್, ರೋಟರಿ ಸಂಸ್ಥೆಯ ಸುರೇಶ್ ಕೇತನ್, ಶಿಕ್ಷಕರ ಸಂಘದ ದೊರೇಶ್, ಚಿಂತಕಿ ಅರ್ಚನಾ ಜಯಂತ್, ಮಾಜಿ ಅಧ್ಯಕ್ಷೆ ಕೌಶಲ್ಯ ಲಕ್ಷ್ಮಣಗೌಡ, ಬೆಳಗಾರ ಸಂಘದ ಹೆಗ್ಗಾವಿ ಪುಟ್ಟಣ್ಣ, ಮಂಜುನಾಥ್ ಶೆಟ್ಟಿ, ರೋಷನ್ ವಿಜಯಕುಮಾರ್, ದಲಿತ ಮುಖಂಡರಾದ ವಳಲಹಳ್ಳಿ ವೀರೇಶ್, ಮಂಜು ಎಸಳೂರು, ಕಲ್ಗನೆ ಗಿರೀಶ್, ಕಲ್ಗನೆ ಪ್ರಶಾಂತ, ಸನಾತನ ಸೇವಾ ಟ್ರಸ್ಟ್‌ನ ಮೋಹನ್, ಬಾಲು, ಜಾನಕೆರೆ ಲೋಕೇಶ್, ಸಿಪಿಐ(ಎಂ)ನ ಸೌಮ್ಯ, ಶಾನು, ಸುಹಾನ, ಸಾಯಿರಾ, ರಾಣಿ, ಝುಬೇರ್‌ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.