ಕನ್ನಡಪ್ರಭ ವಾರ್ತೆ ಕೋಲಾರ

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ- ೨೦೨೬ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲೇಜು ವಿದ್ಯಾರ್ಥಿಗಳಿಂದ ಕೋಲಾರದಲ್ಲಿ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಸೂಚನೆಯಂತೆ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕಾಲೇಜು ಪಿಯು ಶಿಕ್ಷಣ ಇಲಾಖೆಯಿಂದ ಕಾಲೇಜುಗಳಲ್ಲಿನ ಚುನಾವಣಾ ಸಾಕ್ಷರತಾ ಕ್ಲಬ್‌ನ ಸದಸ್ಯ ವಿದ್ಯಾರ್ಥಿಗಳು ಸೋಮವಾರ ನಗರದ ಬಂಗಾರಪೇಟೆ ಸರ್ಕಲ್‌ನಿಂದ ಡೂಮ್‌ಲೈಟ್ ಸರ್ಕಲ್, ಕ್ಲಾಕ್ ಟವರ್, ಬಸ್ ನಿಲ್ದಾಣ, ದೊಡ್ಡಪೇಟೆ ಮಾರ್ಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಎಲ್ಲಾ ನಾಗರಿಕರು ಭಾಗವಹಿಸಿ, ತಮ್ಮ ಮತದಾನದ ಹಕ್ಕು ಪಡೆದುಕೊಳ್ಳಲು ಕರೆ ನೀಡಿದರು.

ಜೂ.೩೦ ರಿಂದ ಜು.೨೯ರವರೆಗೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಆರಂಭವಾಗಲಿದ್ದು, ಎಲ್ಲಾ ಮತದಾರರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು ನೀಡುವ ಎನ್ಯೂಮರೇಷನ್ ಫಾರಂಗಳನ್ನು, ಎಲ್ಲಾ ಅರ್ಹ ಮತದಾರರು ಕಡ್ಡಾಯವಾಗಿ ಫಾರಂ ಭರ್ತಿ ಮಾಡಿ ನೀಡಬೇಕಿದೆ. ಅರ್ಹ ನಾಗರಿಕರೆಲ್ಲರಿಗೂ ಮತದಾನದ ಹಕ್ಕು ಸಿಗುವಂತೆ ಮಾಡಲು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಳ್ಳಲಾಗಿದ್ದು, ಹೊಸ ಮತದಾರರ ಸೇರ್ಪಡೆ, ವಿಳಾಸ, ಫೋಟೋ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಮೃತರು ಹಾಗೂ ಅನರ್ಹರನ್ನು ಮತದಾರರ ಪಟ್ಟಿ ತೆಗೆದು ಹಾಕಲಾಗುವುದು ಎಂದು ಘೋಷಣೆಗಳ ಮೂಲಕ ಸಾರ್ವಜನಿಕರಲ್ಲಿ ವಿದ್ಯಾರ್ಥಿಗಳು ಅರಿವು ಮೂಡಿಸಿದರು.

ಜಿಪಂ ಯೋಜನಾ ನಿರ್ದೇಶಕ ಎಚ್.ಎನ್.ಮಂಜುನಾಥ್ ಸ್ವಾಮಿ, ಸಹಾಯಕ ಕಾರ್ಯದರ್ಶಿ ವಿ.ವೆಂಕಟಾಚಲಪತಿ, ಸಹಾಯಕ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ಇದ್ದರು.