ಜಾಗತಿಕ ಸವಾಲು ಎದುರಿಸುವ ಶಕ್ತಿ ಇಂದಿನ ಪ್ರತಿಭಾವಂತ ಯುವಕರಿಗೆ ಅನಿವಾರ್ಯವಾಗಿದ್ದು, ಸ್ಪರ್ಧೆ ಎದುರಿಸುವ ಭರವಸೆಯಿಂದ ಮಾತ್ರ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಪರಿವರ್ತನ ಕಲಿಕಾ ಕೇಂದ್ರದ ನಿರ್ದೇಶಕ ಸಂತೋಷ ಅಪ್ಪಾಜಿ ತಿಳಿಸಿದರು.
ಹಾನಗಲ್ಲ: ಜಾಗತಿಕ ಸವಾಲು ಎದುರಿಸುವ ಶಕ್ತಿ ಇಂದಿನ ಪ್ರತಿಭಾವಂತ ಯುವಕರಿಗೆ ಅನಿವಾರ್ಯವಾಗಿದ್ದು, ಸ್ಪರ್ಧೆ ಎದುರಿಸುವ ಭರವಸೆಯಿಂದ ಮಾತ್ರ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಪರಿವರ್ತನ ಕಲಿಕಾ ಕೇಂದ್ರದ ನಿರ್ದೇಶಕ ಸಂತೋಷ ಅಪ್ಪಾಜಿ ತಿಳಿಸಿದರು.ಹಾನಗಲ್ಲಿನ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಕಳೆದ 4 ತಿಂಗಳಿನಿಂದ ಐಎಎಸ್, ಕೆಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯೋಜಿಸಿದ ತರಬೇತಿ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಭವಿಷ್ಯ ರೂಪಿಸಿಕೊಳ್ಳಬೇಕಾದ ಯುವಕರಿಗೆ ಕಾಲ ಹರಣ ಸಲ್ಲದು. ಅನಗತ್ಯ ಸಂಗತಿಗಳ ಕಡೆಗೆ ಗಮನ ಹಾಕಿ ಬದುಕು ರೂಪಿಸಿಕೊಳ್ಳುವ ಸಂಗತಿಗಳನ್ನು ನಿರ್ಲಕ್ಷಿಸಿಕೊಳ್ಳುವುದು ಬೇಡ. ಪರಿವರ್ತನ ಕಲಿಕಾ ಕೇಂದ್ರ ಕಳೆದ 3 ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಕ್ಕಾಗಿ ಉಚಿತ ತರಬೇತಿಗಳನ್ನು ನಡೆಸುತ್ತಿದೆ. ಇದರೊಂದಿಗೆ 14 ಉದ್ಯೋಗ ಮೇಳಗಳನ್ನು ನಡೆಸಿ 4 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ಉದ್ಯೋಗಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಇದೆಲ್ಲಕ್ಕೂ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಅವರ ದೂರದೃಷ್ಟಿ ಹಾಗೂ ಅವರ ಸಹಾಯ ಹಸ್ತ ಕೆಲಸ ಮಾಡುತ್ತಿದೆ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ತರಬೇತಿಯ ಸಂಪನ್ಮೂಲ ವ್ಯಕ್ತಿ ಮುಸ್ತಾಕ ಹಾದಿಮನಿ ಮಾತನಾಡಿ, ನಮ್ಮಲ್ಲಿರುವ ಬುದ್ಧಿಶಕ್ತಿಗೆ ಉತ್ತಮ ಜ್ಞಾನ ಸಂಪಾದನೆ ಸಾಧ್ಯವಾದರೆ ಸರ್ಕಾರ ಹಾಗೂ ಸರ್ಕಾರೇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸುಲಭ. ಬದಲಾದ ಕಾಲದಲ್ಲಿ ಉದ್ಯೋಗಗಳ ಸಂಖ್ಯೆಯೂ ಕಡಿತವಾಗುತ್ತಿದೆ. ಇದರ ನಡುವೆಯೂ ನಾವು ಉದ್ಯೋಗ ಪಡೆಯಲು ಹರ ಸಾಹಸವನ್ನೇ ಮಾಡುವ ಅನಿವಾರ್ಯತೆ ಇದೆ. ಅದಕ್ಕಾಗಿ ನಿರಂತರ ಪರಿಶ್ರಮ ಮಾತ್ರ ಫಲ ನೀಡಬಲ್ಲದು. ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಉಚಿತ ತರಬೇತಿಯ ವ್ಯವಸ್ಥೆ ಕಲ್ಪಿಸುವ ಮೂಲಕ ಗ್ರಾಮೀಣ ಮಕ್ಕಳಿಗೆ ಮನೆ ಬಾಗಿಲಿನಲ್ಲಿಯೇ ಸ್ಪರ್ಧಾತ್ಮ ಪರೀಕ್ಷೆಗಳ ಸಿದ್ಧತೆಗೆ ಅನುವು ಮಾಡಿಕೊಟ್ಟಂತಾಗಿದೆ ಎಂದರು.ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಮಾರುತಿ ಶಿಡ್ಲಾಪುರ ಅಧ್ಯಕ್ಷತೆವಹಿಸಿದ್ದರು. ಸಂಪನ್ಮೂಲ ಉಪನ್ಯಾಸಕ ಎಸ್.ಡಿ. ನಾಗರಾಜ, ವಿ.ಶ್ರೀಧರ, ಆರ್.ಕೆ.ದೇವರಾಜ ಮುಖ್ಯಅತಿಥಿಗಳಾಗಿದ್ದರು. ತರಬೇತಿ ಪಡೆದ ವಿದ್ಯಾರ್ಥಿಗಳಾದ ಕಿರಣ ಹಿರೇಕಣಗಿ, ಲಕ್ಷ್ಮಿ ಈಳಿಗೇರ, ಆದರ್ಶ ಪಾಟೀಲ, ಕಾವ್ಯಾ ಶ್ಯಾಡಗುಪ್ಪಿ, ಸಾವಿತ್ರಿ ತರಬೇತಿಯ ಅನುಭವ ಹಂಚಿಕೊಂಡರು.ಯಶೋಧಾ ಕೊಪ್ಪರಸಿಕೊಪ್ಪ ಸ್ವಾಗತಿಸಿದರು. ಸುಮಾ ಸಿಂಗಾಪೂರ ಕಾರ್ಯಕ್ರಮ ನಿರೂಪಿಸಿದರು. ಕಿರಣ ಲಮಾಣಿ ವಂದಿಸಿದರು.