ಮನುಷ್ಯ ಜನ್ಮ ಸಿಕ್ಕಿದ್ದೇ ನಮ್ಮ ಪುಣ್ಯ: ಕೊನೋಡಿ ಗಣೇಶ್

| Published : Nov 04 2025, 02:00 AM IST

ಸಾರಾಂಶ

ನರಸಿಂಹರಾಜಪುರ, ಮನುಷ್ಯನ ಜನ್ಮ ದೊರೆತದ್ದೇ ನಮ್ಮೆಲ್ಲರ ಪುಣ್ಯ. ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿ ಕೊಂಡು ಸರಿಯಾದ ದಾರಿಯಲ್ಲಿ ನಡೆಯಬೇಕು ಎಂದು ತಾಲೂಕು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಕೊನೋಡಿ ಗಣೇಶ್ ಹೇಳಿದರು.

- ಮದ್ಯವರ್ಜನ ಶಿಬಿರದ 3 ನೇ ದಿನದ ಸಭಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮನುಷ್ಯನ ಜನ್ಮ ದೊರೆತದ್ದೇ ನಮ್ಮೆಲ್ಲರ ಪುಣ್ಯ. ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿ ಕೊಂಡು ಸರಿಯಾದ ದಾರಿಯಲ್ಲಿ ನಡೆಯಬೇಕು ಎಂದು ತಾಲೂಕು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಕೊನೋಡಿ ಗಣೇಶ್ ಹೇಳಿದರು.

ಶನಿವಾರ ಪಟ್ಟಣದ ಮಹಾವೀರ ಭವನದಲ್ಲಿ ನಡೆಯುತ್ತಿರುವ 2000ನೇ ಮದ್ಯವರ್ಜನ ಶಿಬಿರದ 3 ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಹುಟ್ಟುವಾಗ ನಮ್ಮ ದೇಹಕ್ಕೆ ಯಾವುದೇ ಹೆಸರಿರುವುದಿಲ್ಲ. ದೇಹಕ್ಕೊಂದು ಹೆಸರಿಟ್ಟ ನಂತರ ಒಂದು ಅರ್ಥ ಬರುತ್ತದೆ. ನಮಗೆ ಸಿಕ್ಕ ಈ ಮನುಷ್ಯ ಜನ್ಮವನ್ನು ದುಶ್ಚಟ ಗಳಿಂದ ಹಾಳು ಮಾಡಿಕೊಳ್ಳದೆ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಪತ್ರಕರ್ತ ಎಂ.ಸಿ.ಗುರುಶಾಂತಪ್ಪ ಮಾತನಾಡಿ, ಯಾವುದೇ ಸಂಘ ಸಂಸ್ಥೆಗಳು ಏನೇ ಕಾರ್ಯ ಮಾಡಿ ದರೂ ಕೂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸಮವಲ್ಲ. ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುವ ಮೂಲಕ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಬೆಳಕು ತಂದ ಕೀರ್ತಿ ಧರ್ಮಸ್ಥಳ ಸಂಘಕ್ಕೆ ಸೇರುತ್ತದೆ ಎಂದರು.ಕಲಾವಿದ ಹಿರೇನಲ್ಲೂರು ಶ್ರೀನಿವಾಸ್ ಮಾತನಾಡಿ, ಸಂತೋಷಕ್ಕೆ, ದುಃಖಕ್ಕೆ ಎರಡಕ್ಕೂ ಮದ್ಯ ಪಾನ ಆರಿಸಿಕೊಳ್ಳುವವರಿದ್ದಾರೆ. ನಿಮ್ಮ ಸಂತೋಷ, ದುಃಖಗಳನ್ನು ಪರಿಸರ, ಪ್ರಕೃತಿ, ಮಕ್ಕಳ ಪಿಸು ಪಿಸು ಮಾತಿನಲ್ಲಿ, ಪ್ರತಿ ನಿತ್ಯ ಭಜನೆ ಮಾಡುವುದರಲ್ಲಿ ಪುಸ್ತಕ ಓದುವುದರಲ್ಲಿ ಅನುಭವಿಸಬೇಕು. ದುಶ್ಚಟಗಳಿಗೆ ಬಲಿಯಾಗಿ ಕುಟುಂಬವನ್ನು ಬಲಿಕೊಡಬಾರದು ಎಂದು ಸಲಹೆ ನೀಡಿದರು.

ಧ.ಗ್ರಾ.ಯೋಜನೆಯಿಂದ ನಿರಂತರ ಎಂಬ ಮಾಸಿಕ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕಲಾವಿದ ಹಿರೇನಲ್ಲೂರು ಶ್ರೀನಿವಾಸ್ ಚಲನಚಿತ್ರಗಳ ಗೀತೆಗಳನ್ನು ಹಾಡಿ ಮನರಂಜನೆ ನೀಡಿದರು. ನಂತರ ರಾಘಮಯೂರಿ ಅಕಾಡೆಮಿ ಕಲಾವಿದರಿಂದ ಭರತನಾಟ್ಯ ನಡೆಯಿತು.ಅಧ್ಯಕ್ಷತೆಯನ್ನು ಮದ್ಯವರ್ಜನ ಶಿಬಿರದ ಅಧ್ಯಕ್ಷ ಪೂರ್ಣೇಶ್ ವಹಿಸಿದ್ದರು. ಹಿರಿಯ ನಾಗರಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ವಿದ್ಯಾನಂದಕುಮಾರ್, ವಿಶ್ವಕರ್ಮ ಸಮಾಜ ಸೇವಾ ಸಂಘದ ಶೃಂಗೇರಿ ಕ್ಷೇತ್ರಾಧ್ಯಕ್ಷ ಕೃಷ್ಣಯ್ಯಾಚಾರ್, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ, ತಾಲೂಕು ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್ ಇದ್ದರು.