ಸಾರಾಂಶ
ಮಹಾರಾಷ್ಟ್ರ ಗಡಿಯ ನಾಗಣಸೂರು (ಕಲಬುರಗಿ ಗಡಿಯಿಂದ ಕೇವಲ 5 ಕಿ.ಮೀ. ದೂರ) ಎಂಬ ಪುಟ್ಟ ಗ್ರಾಮದಲ್ಲಿರುವ ಸೊಲ್ಲಾಪುರ ಜಿಲ್ಲಾ ಪರಿಷತ್‌ನ ಕನ್ನಡ ಮಾಧ್ಯಮ ಹೆಣ್ಮಕ್ಕಳ ಪ್ರಾಥಮಿಕ ಶಾಲೆ, ಕಳೆದ 3 ದಶಕದಿಂದ ಮಹಾಗಡಿಯಲ್ಲಿ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಶೇಷಮೂರ್ತಿ ಅವಧಾನಿ, ರಾಹುಲ್ ದೊಡ್ಮನಿ
ನಾಗಣಸೂರ (ಅಕ್ಕಲಕೋಟೆ ತಾಲೂಕು) : ಕಲಬುರಗಿ ಜಿಲ್ಲೆ ಅಫಜಲ್ಪುರ ತಾಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರ ಗಡಿಯ ನಾಗಣಸೂರು (ಕಲಬುರಗಿ ಗಡಿಯಿಂದ ಕೇವಲ 5 ಕಿ.ಮೀ. ದೂರ) ಎಂಬ ಪುಟ್ಟ ಗ್ರಾಮದಲ್ಲಿರುವ ಸೊಲ್ಲಾಪುರ ಜಿಲ್ಲಾ ಪರಿಷತ್‌ನ ಕನ್ನಡ ಮಾಧ್ಯಮ ಹೆಣ್ಮಕ್ಕಳ ಪ್ರಾಥಮಿಕ ಶಾಲೆ, ಕಳೆದ 3 ದಶಕದಿಂದ ಮಹಾಗಡಿಯಲ್ಲಿ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
1995ರಲ್ಲಿ ಸ್ಥಾಪನೆಯಾಗಿರುವ ಈ ಶಾಲೆ ಸಾವಿರಾರು ಹೆಣ್ಮಕ್ಕಳಿಗೆ ಅ, ಆ, ಇ, ಈ... ಕನ್ನಡ ಅಕ್ಷರ ಮಾಲಿಕೆಯನ್ನು ಕಲಿಸುವುದರ ಜೊತೆಗೆ, ಅವರೆಲ್ಲರು ಇಂದು ಕನ್ನಡತಿಯರಾಗಿ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದೆ. ನಾಗಣಸೂರದಲ್ಲಿ 1ರಿಂದ 7ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ ಪ್ರಸಕ್ತ ವರ್ಷ 157 ಬಾಲಕಿಯರು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕನ್ನಡ ಕಲಿಕೆಗಿರುವ ಸದಾವಕಾಶ ಬಳಸಿಕೊಳ್ಳುತ್ತಿರುವ ಇಲ್ಲಿನ ಬಾಲಕಿಯರು
ನಾಗಣಸೂರು ಶಾಲೆಯಲ್ಲಿ ಕನ್ನಡ ಕಲಿಕೆಗಿರುವ ಸದಾವಕಾಶ ಬಳಸಿಕೊಳ್ಳುತ್ತಿರುವ ಇಲ್ಲಿನ ಬಾಲಕಿಯರು, ದೊಡ್ಡವರಾದ ಮೇಲೆ ಕನ್ನಡದ ಕಂಪಿನೊಂದಿಗೆ ಬದುಕು ಕಟ್ಟಿಕೊಳ್ಳುತ್ತಿರುವುದರಿಂದ ಮರಾಠಿ ನೆಲದಲ್ಲಿರುವ ಈ ಶಾಲೆಯಲ್ಲಿ ನಿರಂತರ ಅಚ್ಚ ಕನ್ನಡತಿಯರ ನಿರ್ಮಾಣ ಕಾರ್ಯ ಸಾಗಿದೆ. ಅಫಜಲ್ಪುರ, ಅಕ್ಕಲಕೋಟೆ ಗಡಿಯ ಹತ್ತಾರು ಹಳ್ಳಿಯ ಹೆಣ್ಮಕ್ಕಳ ಪಾಲಿಗೆ ಈ ಶಾಲೆ ಕನ್ನಡಮ್ಮನ ದೇಗುಲವಾಗಿದೆ. ಈ ಶಾಲೆ ಇರುವುದರಿಂದಾಗಿಯೇ ಗ್ರಾಮಸ್ಥರು ಕೂಡ ತಮ್ಮ ಮನೆಯ ಹೆಣ್ಮಕ್ಕಳಿಗೆ ಕನ್ನಡ ಮಾಧ್ಯಮದ ಕಲಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ.
ಶಾಲೆಯ ಶಿಕ್ಷಕರು, ಗ್ರಾಮಸ್ಥರು ಕೂಡಿಕೊಂಡು 15 ಲಕ್ಷ ರು. ವೆಚ್ಚದಲ್ಲಿ ಶಾಲೆಯಲ್ಲಿ ಭೌತಿಕ ಸಾಧನಗಳನ್ನು ಒದಗಿಸಿ ಮಕ್ಕಳ ಕನ್ನಡ ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿದ್ದಾರೆ. ಹೀಗಾಗಿ, ಗಡಿಯಲ್ಲಿದ್ದರೂ ಈ ಶಾಲೆಯಲ್ಲಿ ಇ ಲರ್ನಿಂಗ್, ಸ್ಮಾರ್ಟ್ ಬೋರ್ಡ್, ಕಂಪ್ಯೂಟರ್ ಕ್ಲಾಸ್ ಸೇರಿದಂತೆ ಆಧುನಿಕ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಕನ್ನಡ ಭಾಷೆಯನ್ನು ಸಂರಕ್ಷಿಸುವಂತಹ ಹಲವು ಕಾರ್ಯ ಚಟುವಟಿಕೆಗಳೊಂದಿಗೆ ನಾಗಣಸೂರಿನ ಈ ಶಾಲೆ ಸದಾಕಾಲ ಕನ್ನಡಮಯವಾಗಿ ಕಳೆದ 3 ದಶಕದಿಂದ ಕಂಗೊಳಿಸುತ್ತಿದೆ.ಮರಾಠಿ ನೆಲದಲ್ಲಿದ್ದರೂ ಕನ್ನಡಮಯ ಬದುಕು!
ಮರಾಠಿ ನೆಲದ ಗ್ರಾಮ
ನಾಗಣಸೂರು, ಮರಾಠಿ ನೆಲದ ಗ್ರಾಮವಾದರೂ ಈ ಊರವರ ಮಾತು, ವ್ಯವಹಾರ, ಶಿಕ್ಷಣ ಎಲ್ಲವು ಕನ್ನಡಮಯ. ಹೀಗಾಗಿ ಕನ್ನಡ ಭಾಷೆ, ಕನ್ನಡ ಕಲಿಕೆಗೆ ಇಲ್ಲಿ ಮುಂಚಿನಿಂದಲೂ ಆದ್ಯತೆ. ನಾಗಣಸೂರ ಬಾಲಕಿಯರ ಶಾಲೆಯ ಮಕ್ಕಳು ಗುಣಮಟ್ಟದ ಕನ್ನಡ ಕಲಿಕೆಯ ಜೊತೆಗೆ ಸಾಹಿತ್ಯ, ಕ್ರೀಡೆ, ಕವಿಗೋಷ್ಠಿ, ವಿಜ್ಞಾನ ವಸ್ತು ಪ್ರದರ್ಶನ ಸೇರಿದಂತೆ ಎಲ್ಲಾ ರಂಗದಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿ ಸಾಧನೆ ಮಾಡಿದ್ದಾರೆ. ಹಾಸನದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿ ಗಡಿ ಭಾಗದ ಕನ್ನಡ ಶಾಲೆಗಳು, ಕನ್ನಡ ಭಾಷಿಕರ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ. ಗಡಿ ಭಾಗದ ಕನ್ನಡಿಗರ ಸುಖ-ದುಃಖದ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ನಿರಂತರ ಮಾಡುತ್ತಿದ್ದಾರೆ. ಕನ್ನಡ ಶಾಲೆಗೆ ಮಹಾರಾಷ್ಟ್ರ ಬೆಂಬಲ:
ಈ ಶಾಲೆ ಮಹಾರಾಷ್ಟ್ರ ಸರ್ಕಾರದ ಸೌಲಭ್ಯಗಳಿಂದ ಸಮರ್ಪಕವಾಗಿ ನಡೆಯುತ್ತಿದೆ. ಪಠ್ಯಪುಸ್ತಕ, ಸಮವಸ್ತ್ರವನ್ನು ಮಕ್ಕಳಿಗೆ ನೀಡುತ್ತಾರೆ. ಆದರೆ, ಮುಂಚಿನಂತೆ ಮಹಾ ಬೆಂಬಲ ಸಿಗುತ್ತಿಲ್ಲವಾದರೂ ಅಲ್ಪ ಅವಕಾಶದಲ್ಲೇ ಕನ್ನಡ ಶಾಲೆ ತನ್ನ ಗಟ್ಟಿತನ ಬಿಡದೆ ಕಾಪಿಟ್ಟುಕೊಂಡು ಸಾಗಿರೋದು ವಿಶೇಷ.
ಕಳೆದ 6 ವರ್ಷದಿಂದ ಈ ಶಾಲೆಯ ಮುಖ್ಯಗುರು ಶರಣಪ್ಪ ಫುಲಾರಿ ಅವರು ಈ ಶಾಲೆಯಲ್ಲಿ ಕನ್ನಡ ಚಟುವಟಿಕೆಗಳು ಸದಾಕಾಲ ಹಸಿರಾಗಿರುವಂತೆ ನೋಡಿಕೊಂಡಿದ್ದಾರೆ. ಇದೇ ಶಾಲೆಯ ಸಹ ಶಿಕ್ಷಕರಾದ ಶಾಂತಾ ತೋಳನೂರೆ, ಲಕ್ಷ್ಮೀಕಾಂತ ತಳವಾರ, ಶೋಭಾ ಕಲಶೆಟ್ಟಿ, ರಾಜಶೇಖರ ಖಾನಾಪೂರೆ, ರಾಜುಕುಮಾರ ನರುಣೆ, ರಾಜಶೇಖರ ಕುರ್ಲೆ ಹಾಗೂ ನಾಗಣಸೂರ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುವ ಮೂಲಕ ಮಹಾರಾಷ್ಟ್ರದ ಮಣ್ಣಿನಲ್ಲಿದ್ದುಕೊಂಡೇ ಈ ಶಾಲೆಯಲ್ಲಿ ನಿತ್ಯ ಕನ್ನಡ ಡಿಂಡಿಮ ರಿಂಗಣಿಸುವಂತೆ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಮಹಾರಾಷ್ಟ್ರ ಹಾಗೂ ನಮ್ಮ ಕರ್ನಾಟಕ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ಊರಿನವರ ಸಹಕಾರ ಪಡೆದು, ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶಾಲೆಯನ್ನು ಸಮರ್ಥವಾಗಿ ನಡೆಸುತ್ತಿದ್ದೇವೆ.
- ಶರಣಪ್ಪ ಫುಲಾರಿ, ಮುಖ್ಯಗುರು, ಕನ್ನಡ ಮಾಧ್ಯಮ ಬಾಲಕಿಯರ ಶಾಲೆ, ನಾಗಣಸೂರ
;Resize=(690,390))
;Resize=(128,128))
;Resize=(128,128))