ಭೂಮಿ ಫಲವತ್ತತೆ ಕಾಪಾಡುವುದು ತುರ್ತು ಅಗತ್ಯ

| Published : Nov 17 2025, 12:15 AM IST

ಭೂಮಿ ಫಲವತ್ತತೆ ಕಾಪಾಡುವುದು ತುರ್ತು ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಭೂಮಿ ನಮ್ಮ ಬದುಕಿಗೆ ಅಗತ್ಯವಿರುವ ಎಲ್ಲವನ್ನು ನೀಡಿದೆ. ಸವಲತ್ತುಗಳನ್ನು ಬಳಸಿಕೊಂಡು ಭೂಮಿಯನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಸಾವಯವ ಕೃಷಿಕ ಎನ್.ಆರ್.ಸುರೇಂದ್ರ ಹೇಳಿದರು.

ರಾಮನಗರ: ಭೂಮಿ ನಮ್ಮ ಬದುಕಿಗೆ ಅಗತ್ಯವಿರುವ ಎಲ್ಲವನ್ನು ನೀಡಿದೆ. ಸವಲತ್ತುಗಳನ್ನು ಬಳಸಿಕೊಂಡು ಭೂಮಿಯನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಸಾವಯವ ಕೃಷಿಕ ಎನ್.ಆರ್.ಸುರೇಂದ್ರ ಹೇಳಿದರು.

ನಗರದ ಪಟೇಲ್ ಆಂಗ್ಲ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ಅತ್ಯುತ್ತಮ ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕೃತ ನಂಜುಂಡಿ ಬಾನಂದೂರು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ಭೂಮಿಯನ್ನು ಉಳಿಸಿಕೊಳ್ಳಲು ಏನು ಮಾಡಬೇಕೆಂಬ ನಿಟ್ಟಿನಲ್ಲಿ ನಾವು ಆಲೋಚನೆಯನ್ನೇ ಮಾಡುತ್ತಿಲ್ಲ. ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಹಾರ ಪದಾರ್ಥಗಳನ್ನಷ್ಟೇ ಅಲ್ಲ ಅಗತ್ಯ ಔಷಧಿ ಸಸ್ಯಗಳನ್ನು ಬೆಳೆಸಿ ಅವುಗಳ ಸುತ್ತ ಓಡಾಡಿದರೆ ನಮ್ಮ ಆರೋಗ್ಯ ಸುಧಾರಿಸುತ್ತದೆ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತ ನಂಜುಂಡಿ ಮಾತನಾಡಿ, ರಾಗಿ ಬೆಲೆ 45ರಿಂದ 50 ರು.ವರೆಗೆ ಇದೆ. ಆದರೆ, ನಾನು ಬೆಳೆದ ರಾಗಿಯನ್ನು 85 ರು.ಗಳಿಗೂ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದೇನೆ. ಅಂದರೆ ರೈತ ತಾನು ಬೆಳೆದ ಬೆಳೆಗೆ ತಾನೇ ದರ ನಿಗದಿ ಮಾಡಿಕೊಳ್ಳುವ ಕಾಲ ಬಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯೋಗಶೀಲನಾಗಿ ರಾಜ್ಯದ 12 ಜಿಲ್ಲೆಗಳಿಗೆ ಭಿತ್ತನೆ ತಳಿಗಳನ್ನು ಸಾವಯವ ಕೃಷಿಯ ಮೂಲಕ ಬೆಳೆದು ನೀಡುತ್ತಿದ್ದೇನೆ ಎಂದರು.

ಬಾನಂದೂರು ಬೆಲ್ಲಕ್ಕೆ ವಿಶೇಷ ಬೆಲೆ ಇದ್ದದ್ದು ನಮಗೆ ತಿಳಿದ ವಿಷಯ. ಬಾನಂದೂರು ಬೆಲ್ಲವನ್ನು ಕೊಟ್ಟು ಸರ್ಕಾರಿ ನೌಕರಿ ಪಡೆದುಕೊಂಡ ಪ್ರಕರಣಗಳು ದಾಖಲಾಗಿವೆ . ಪ್ರಸ್ತುತ ನಾಗಾಲ್ಯಾಂಡ್ ತಳಿ ರಾಗಿ ಸುಮಾರು ಕೆ.ಜಿ.800 ಬೆಲೆಯ ಮತ್ತು ಸಕ್ಕರೆ ಖಾಯಿಲೆ ಇರುವವರು ಬಳಸಬಹುದಾದ ಬತ್ತವನ್ನು ನಾನು ನಮ್ಮ ಭೂಮಿಯಲ್ಲಿ ಬೆಳೆಯುತ್ತಿದ್ದೇನೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ಪ್ರಕೃತಿಯ ಜೊತೆಗೆ ಜೀವನ ಕಟ್ಟಿಕೊಳ್ಳಬೇಕು. ಕೃಷಿ ನಮ್ಮ ಜೀವನಾಡಿ, ಸಾಧನೆ ಎಂಬುದು ಸಾಧಕರ ಸ್ವತ್ತು, ಈ ಹಿನ್ನೆಲೆಯಲ್ಲಿ ನಂಜುಂಡಿಯವರ ಸಾಧನೆ ನಾಡೆ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದರು.

ಬಾನಂದೂರು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಬಿ.ಎಂ.ಕುಮಾರ್ ಮಾತನಾಡಿ, ನಮ್ಮ ಗ್ರಾಮದ ಯುವ ಪ್ರತಿಭೆ ಸಾವಯವ ಕೃಷಿ ಅಲ್ಲದೆ ಜಾನಪದ ಎಂ.ಎ ಪದವಿಯಲ್ಲಿ ಚಿನ್ನದ ಪಡೆದಿದ್ದಾರೆ. ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಷಯ ಎಂದರು.

ಸಮಾಜ ಸೇವಕ ಬಿ.ಪಿ.ಬಾನುಪ್ರಕಾಶ್, ಮಾಜಿ ಗ್ರಾಪಂ ಸದಸ್ಯ ಬಿ.ಪಿ.ಕೇಶವಮೂರ್ತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಟಿ.ದಿನೇಶ್ ಬಿಳಗುಂಬ, ಜಾನಪದ ವಿದ್ವಾಂಸ ಡಾ. ಎಂ.ಬೈರೇಗೌಡ ಮಾತನಾಡಿದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ರಾಜೇಶ್ ಕವಣಾಪುರ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಕಿರಣ್, ಮಲ್ಲೇಶ್ ನೇಗಿಲಯೋಗಿ, ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಭೂಮಿಗೌಡ, ಡಾ.ರಾಜಣ್ಣ ಉಪಸ್ಥಿತರಿದ್ದರು.

16ಕೆಆರ್ ಎನ್ 2.ಜೆಪಿಜಿ

ರಾಮನಗರದ ಪಟೇಲ್ ಆಂಗ್ಲ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ಸಮಾರಂಭದಲ್ಲಿ ಅತ್ಯುತ್ತಮ ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕೃತ ನಂಜುಂಡಿ ಬಾನಂದೂರು ಅವರನ್ನು ಅಭಿನಂದಿಸಲಾಯಿತು.