ರಕ್ತಹೀನತೆ ತಡೆಗಟ್ಟಲು ಶ್ರಮಿಸಬೇಕು: ಶಾಂತನಗೌಡ

| Published : Nov 17 2025, 12:15 AM IST

ಸಾರಾಂಶ

ಮನುಷ್ಯರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಅನೀಮಿಯಾ (ರಕ್ತಹೀನತೆ) ಬಹಳವಾಗಿ ಕಂಡುಬರುತ್ತಿದ್ದು, ಇದು ವಿವಿಧ ರೀತಿಯ ಕಾಯಿಲೆಗಳಿಗೂ ದಾರಿ ಮಾಡಿಕೊಡುತ್ತದೆ. ಈ ಕಾರಣದಿಂದಾಗಿ ರಕ್ತಹೀನತೆ ಸಮಸ್ಯೆಗಳು ಉಂಟಾಗದಂತೆ ಸಂಘ, ಸಂಸ್ಥೆಗಳು, ಆರೋಗ್ಯ ಹಾಗೂ ಶಿಕ್ಷಣ ವ್ಯವಸ್ಥೆಗಳು ಹೆಚ್ಚಿನ ಎಚ್ಚರವಹಿಸಬೇಕಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮನುಷ್ಯರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಅನೀಮಿಯಾ (ರಕ್ತಹೀನತೆ) ಬಹಳವಾಗಿ ಕಂಡುಬರುತ್ತಿದ್ದು, ಇದು ವಿವಿಧ ರೀತಿಯ ಕಾಯಿಲೆಗಳಿಗೂ ದಾರಿ ಮಾಡಿಕೊಡುತ್ತದೆ. ಈ ಕಾರಣದಿಂದಾಗಿ ರಕ್ತಹೀನತೆ ಸಮಸ್ಯೆಗಳು ಉಂಟಾಗದಂತೆ ಸಂಘ, ಸಂಸ್ಥೆಗಳು, ಆರೋಗ್ಯ ಹಾಗೂ ಶಿಕ್ಷಣ ವ್ಯವಸ್ಥೆಗಳು ಹೆಚ್ಚಿನ ಎಚ್ಚರವಹಿಸಬೇಕಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕಿನ ಎಚ್.ಕಡದಕಟ್ಟೆ ಸಮೀಪದ ಸಾಯಿ ಗುರುಕುಲ ವಸತಿಯುತ ಶಾಲೆಯಲ್ಲಿ ಸ್ಫೂರ್ತಿ ಸಂಸ್ಥೆ, ಆರೋಗ್ಯ ಮತ್ತು ಕುುಟಂಬ ಕಲ್ಯಾಣ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ಅನೀಮಿಯಾ (ರಕ್ತಹೀನತೆ ) ತಡೆಗಟ್ಟುವ ಕುರಿತು ಜಾಗೃತಿ ಹಾಗೂ ರಕ್ತ ತಪಾಸಣ ಶಿಬಿರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತದಲ್ಲಿ ಶೇ.50ರಷ್ಟು ಜನ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳಲ್ಲಿ ರಕ್ತಹೀನತೆ ಸಾಮಾನ್ಯವಾಗಿ ಹೆಚ್ಚು ಕಂಡುಬರುತ್ತದೆ. ರಕ್ತಹೀನತೆ ನಿಯಂತ್ರಿಸಲು ಪೌಷ್ಟಿಕ ಆಹಾರದ ಜೊತೆ ನಿತ್ಯವೂ ವ್ಯಾಯಾಮಗಳನ್ನು ಮಾಡಬೇಕು. ಆಗಾಗ ವೈದ್ಯರ ಬಳಿ ರಕ್ತಪರೀಕ್ಷೆ ಮಾಡಿಸಿಕೊಂಡು ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಸುಸ್ಥಿತಿಯಲ್ಲಿ ಇರುವುದೇ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಆರೋಗ್ಯ ಇಲಾಖೆಯ ಎಂ.ಎಚ್. ಗೀತಾ ಅವರು ರಕ್ತಹೀನತೆಗೆ ಕಾರಣಗಳು, ಅದರ ಲಕ್ಷಣಗಳು ಹಾಗೂ ಪರಿಹಾರೋಪಾಯಗಳ ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಪ್ರದೀಪ್ ಗೌಡ, ಆಡಳಿತಾಧಿಕಾರಿ ಅರುಣ್ ಗೌಡ, ಡಿ.ಜಿ.ಸೋಮಪ್ಪ, ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ, ಸ್ಫೂರ್ತಿ ಸಂಸ್ಥೆಯ ನಿರ್ದೇಶಕಿ ರೇಣುಕಾ, ಎಚ್.ಕಡದಕಟ್ಟೆ ಗ್ರಾ.ಪಂ. ಕಾರ್ಯದರ್ಶಿ ಸಣ್ಣಬಸಪ್ಪ, ಸ್ಫೂರ್ತಿ ಸಂಸ್ಥೆಯ ಸಂಚಾಲಕಿ ಸುಜಾತ, ಸಾಯಿ ಗುರುಕುಲ ವಸತಿ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು,

ಸ್ಫೂರ್ತಿ ಸಂಸ್ಥೆಯ ಕೃಷ್ಣ ಸ್ವಾಗತಿಸಿದರು, ಸುಧಾ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಸೇರಿದಂತೆ ಎಲ್ಲರ ರಕ್ತ ತಪಾಸಣೆ ನೆಡೆಸಲಾಯಿತು.

- - -

(ಬಾಕ್ಸ್‌) * ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಜನರಲ್ಲಿ ರಕ್ತಹೀನತೆ ಸ್ಫೂರ್ತಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ರೂಪ್ಲ ನಾಯ್ಕ ಪ್ರಾಸ್ತವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಜನ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅವಳಿ ತಾಲೂಕಿನಲ್ಲಿ 5283 ಮಕ್ಕಳ ರಕ್ತ ಪರೀಕ್ಷೆ ನಡೆಸಲಾಗಿದೆ. ಶ್ರೀಮದ್ ರಾಜಚಂದ್ರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಗುಜರಾತ್, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸ್ಪಂದನ ಸ್ವಯಂ ಸೇವಾಸಂಸ್ಥೆ ವಿಜಯಪುರ, ಹಾಗೂ ಭಾರತೀಯ ಸುರಾಜ್ಯ ಸಂಸ್ಥೆ, ಕನ್ನೂರ ಆಶ್ರಯದಲ್ಲಿ ರಾಜ್ಯದಲ್ಲಿ ಅನೀಮಿಯಾ ತಡೆಗಟ್ಟುವ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

- - -

-16ಎಚ್.ಎಲ್.ಐ1.:

ಎಚ್ ಕಡದಕಟ್ಟೆ ಸಮೀಪದ ಸಾಯಿ ಗುರುಕುಲ ವಸತಿಯುತ ಶಾಲೆಯಲ್ಲಿ ಅನೀಮಿಯಾ (ರಕ್ತಹೀನತೆ ) ತಡೆಗಟ್ಟುವ ಕುರಿತು ಜಾಗೃತಿ ಹಾಗೂ ರಕ್ತ ತಪಾಸಣಾ ಶಿಬಿರವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.