ಸಾರಾಂಶ
ಸಿದ್ಧಾರೂಢ ಅಜ್ಜ ಇದ್ದಾಗಲೇ ಇಲ್ಲಿನ ಜಾತ್ರೆಯ ಮುರ್ಕಿಬಾವಿ ಪಲ್ಲಕ್ಕಿ ಉತ್ಸವದ ದಿನದಂದು ಸೂಕ್ಷ್ಮ ರೂಪದಲ್ಲಿ ಅಲ್ಲಿನ ಜನರಿಗೆ ಸಿದ್ದಾರೂಢರು ದರ್ಶನ ನೀಡಿದ್ದರು.
ಶಿವಾನಂದ ಗೊಂಬಿ
ಹುಬ್ಬಳ್ಳಿ: ನಮ್ಮೂರು ಹಾಗೂ ಅಜ್ಜಗ ಅವಿನಾಭಾವ ಸಂಬಂಧ ಐತ್ರಿ.. ನಮ್ಮೂರಾಗ ಅಜ್ಜ ಪ್ರತ್ಯಕ್ಷ ಆಗಿದ್ದ.. ಆಗಿಂದ ನಮ್ಮೂರಾಗಿನ ಜನಾ ಎಲ್ಲ ಸೇರಕೊಂಡು ಜಾತ್ರಿಗೆ ಬಂದು ಇಲ್ಲೇ ಸೇವಾ ಮಾಡ್ತೇವಿ... ನಾನ್ ಇಲ್ಲಿಗೆ ಬರಕ್ಕತ್ತು 50 ವರ್ಷಕ್ಕೂ ಹೆಚ್ಚಾಗೈತಿ ನೋಡ್ರಿ..!ಇದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮುರ್ಕಿಬಾವಿ ಗ್ರಾಮದ 65 ವರ್ಷದ ರುದ್ರ ನಾಯಕ ಎಂಬ ವೃದ್ಧ ಹೇಳುವ ಮಾತಿದು.
ಸಿದ್ಧಾರೂಢ ಅಜ್ಜ ಇದ್ದಾಗಲೇ ಇಲ್ಲಿನ ಜಾತ್ರೆಯ ಸಂದರ್ಭದಲ್ಲಿ ಅಲ್ಲಿನ ಜನರು ಕೂಡ ಉತ್ಸವ ಮಾಡಬೇಕೆಂದು ನಿಶ್ಚಯಿಸಿದ್ದರು. ಆದರೆ, ಅಲ್ಲಿನ ಉತ್ಸವಕ್ಕೂ ಸಿದ್ಧಾರೂಢರು ಆಗಮಿಸಬೇಕು ಎಂಬ ಬೇಡಿಕೆ ಅಲ್ಲಿನ ಭಕ್ತರದ್ದು ಇತ್ತು. ಇಲ್ಲಿನ ಜಾತ್ರೆ ಬಿಟ್ಟು ಅಲ್ಲಿಗೆ ಹೋಗಲು ಆಗುವುದಿಲ್ಲ ಎಂಬ ಅರಿವು ಆರೂಢರಿಗೆ ಇತ್ತು. ಆದರೂ ಬರುತ್ತೇನೆ ಎಂಬ ಭರವಸೆ ನೀಡಿ ಅಲ್ಲಿನ ಭಕ್ತರನ್ನು ಕಳುಹಿಸಿದ್ದರು. ಮುಂದೆ ಅಲ್ಲಿನ ಪಲ್ಲಕ್ಕಿ ಉತ್ಸವದ ದಿನದಂದು ಸೂಕ್ಷ್ಮ ರೂಪದಲ್ಲಿ ಅಲ್ಲಿನ ಜನರಿಗೆ ದರ್ಶನ ನೀಡಿದ್ದರು. ಜತೆಗೆ ಇಲ್ಲೂ ಜಾತ್ರೆಯಲ್ಲೂ ಆರೂಢರು ಪಾಲ್ಗೊಂಡಿದ್ದರಂತೆ. ಅಂದಿನಿಂದ ಪ್ರತಿವರ್ಷ ಅಲ್ಲಿನ ಜನತೆ ಜಾತ್ರೆ ವೇಳೆ ಇಲ್ಲಿಗೆ ಆಗಮಿಸಿ ಅಜ್ಜನ ಸೇವೆ ಮಾಡುತ್ತಾರೆ. ನಮ್ಮೂರಿಂದ ಜನತೆ ಜಾತ್ರೆಗೆ ಆಗಮಿಸಲು ಶುರು ಮಾಡಿ 100 ವರ್ಷಕ್ಕೂ ಅಧಿಕವಾಗಿದೆ ನೋಡ್ರಿ ಎಂದು ಅಲ್ಲಿನ ಬಸಪ್ಪ ಎಂಬುವವರು ನುಡಿಯುತ್ತಾರೆಅದೇ ರೀತಿ ಈ ಸಲವೂ ಬರೋಬ್ಬರಿ 100ಕ್ಕೂ ಅಧಿಕ ಜನ ಆಗಮಿಸಿದ್ದಾರೆ. ಪಾದಯಾತ್ರೆಯ ಮೂಲಕವೇ ಆಗಮಿಸುವ ಅಲ್ಲಿನ ಭಕ್ತರು, ಇಲ್ಲಿ ಅಡುಗೆ ಮಾಡುವುದು. ಪಾತ್ರೆ ಪಗಡೆ ತೊಳೆಯುವುದು, ಊಟಕ್ಕೆ ಬಡಿಸುವುದು. ಮಠದ ಪ್ರಾಂಗಣದಲ್ಲಿನ ಕೆಲಸ ಹೀಗೆ ವಿವಿಧ ಸೇವೆ ಮಾಡುತ್ತಾರೆ.
ವೃದ್ಧರಿಂದ ಹಿಡಿದು ಏಳೆಂಟು ವರ್ಷದ ಬಾಲಕರು ಪಾದಯಾತ್ರೆಯಲ್ಲಿ ಆಗಮಿಸಿ ಸೇವೆ ಮಾಡುವುದು ವಿಶೇಷ. ಈ ಸಲ ಬಂದವರಲ್ಲಿ ರುದ್ರ ನಾಯಕ ಎಂಬುವವರು ಹಿರಿಕರು. ಇವರಿಗೆ 65 ವರ್ಷ ಇರಬಹುದು. ಎಷ್ಟು ವಯಸ್ಸು ಎಂಬುದು ಖಚಿತವಾಗಿ ಅವರಿಗೆ ಗೊತ್ತಿಲ್ಲ. ಆದರೆ ಸಣ್ಣ ವಯಸ್ಸಿನವನಿದ್ದಾಗಿನಿಂದಲೇ ಆಗಮಿಸುತ್ತಿದ್ದೇನೆ. ಸುಮಾರು 50 ವರ್ಷಕ್ಕೂ ಅಧಿಕ ಕಾಲ ಸಂದಿದೆ ನಾನು ಇಲ್ಲಿ ಬರಲು ಆರಂಭಿಸಿ. ಪ್ರತಿವರ್ಷ ಬರುತ್ತಿದ್ದೇನೆ ಎಂದು ನುಡಿಯುತ್ತಾರೆ ರುದ್ರ ನಾಯಕ.ನೆಮ್ಮದಿ ಕಂಡಿದ್ದೇನೆ ನಾನು ಅಷ್ಟೇನೂ ಶ್ರೀಮಂತನಲ್ಲ. ಅಲ್ಪಸ್ವಲ್ಪ ಭೂಮಿಯಿದೆ. ಆದರೆ ಮಠಕ್ಕೆ ಬರುವುದಕ್ಕೆ ಪ್ರಾರಂಭಿಸಿದಾಗಿನಿಂದಲೂ ಹೊಟ್ಟೆ ಬಟ್ಟೆಗೆ ಏನು ಕೊರತೆಯಾಗಿಲ್ಲ. ಏನೇ ಸಂಕಷ್ಟ ಬಂದರೂ ಅಜ್ಜನ ನೆನಸಿಸಿಕೊಂಡ ಕೂಡಲೇ ಅವು ದೂರವಾಗುತ್ತವೆ. ಬಂದಂತಹ ಸಮಸ್ಯೆಗಳೆಲ್ಲ ಪರಿಹಾರ ಕಾಣುತ್ತವೆ. ಬದುಕಲ್ಲಿ ನೆಮ್ಮದಿ ಕಂಡಿದ್ದೇನೆ ಎಂದು ನುಡಿಯುತ್ತಾರೆ ರುದ್ರ ನಾಯಕ.
ಇವರೊಂದಿಗೆ ಬಂದಿರುವ ಮತ್ತೊಬ್ಬ ಬಸಪ್ಪ ಎಂಬಾತನೂ ಕಳೆದ 15-20 ವರ್ಷದಿಂದ ಮಠಕ್ಕೆ ಆಗಮಿಸುತ್ತಿದ್ದಾರಂತೆ. ಎಲ್ಲರೂ ಜಾತ್ರೆ ಇನ್ನು ನಾಲ್ಕೈದು ದಿನ ಇರುವಾಗಲೇ ಆಗಮಿಸಿ ಜಾತ್ರೆ ಮುಗಿದ ನಾಲ್ಕೈದು ದಿನ ಆದ ಮೇಲೆ ಇಲ್ಲಿಂದ ಹೊರಡುತ್ತಾರೆ.ಒಟ್ಟಿನಲ್ಲಿ ಸಿದ್ಧಾರೂಢರ ಕಥಾಮೃತಕ್ಕೆ ಹೇಗೆ ಶತಮಾನೋತ್ಸವ ಆಗಿದೆಯೋ ಅಜ್ಜನ ಜಾತ್ರೆಗೆ ಮುರ್ಕಿಬಾವಿ ಭಕ್ತರು ಆಗಮಿಸಲು ಶುರು ಮಾಡಿ ಶತಮಾನೋತ್ಸವವೇ ಆಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))