ಸಾರಾಂಶ
ಶಿಕ್ಷಕರು ಕ್ರಿಯಾಶೀಲರಾಗಿ ತಮ್ಮ ವಿದ್ಯಾರ್ಥಿಗಳನ್ನು ಕಲಿಕಾ ಹಬ್ಬದಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲಲು ಶ್ರಮವಹಿಸಬೇಕು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ತಮ್ಮ ಕಲಿಕೆಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಬೇಕು.
ಕಾರಟಗಿ:
ಕಲಿಕಾ ಹಬ್ಬವು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವದೊಂದಿಗೆ ಕ್ರಿಯಾತ್ಮಕವಾಗಿ ಹಾಗೂ ಚಟುವಟಿಕೆಗಳೊಂದಿಗೆ ಕಲಿಯುವ ಉತ್ತಮ ವೇದಿಕೆಯಾಗಿದೆ ಎಂದು ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗೌರವಾಧ್ಯಕ್ಷೆ ಅನುಸೂಯ ಹಂಚಿನಾಳ ಹೇಳಿದರು.ಇಲ್ಲಿಗೆ ಸಮೀಪದ ಹಾಲಸಮುದ್ರ ಮತ್ತು ತಿಮ್ಮಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೂದಗುಂಪ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದಲ್ಲಿ ಹೆಚ್ಚಿನ ಸಾಧನೆಗೈಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದ ಅವರು, ಮಕ್ಕಳು ಕಲಿತ ವಿದ್ಯೆಯನ್ನು ಹಬ್ಬದ ರೀತಿ ಆಚರಿಸುವ ಮೂಲಕ ಸಂತಸ ಪಡಬೇಕು ಎಂದರು.ಶಿಕ್ಷಕರು ಕ್ರಿಯಾಶೀಲರಾಗಿ ತಮ್ಮ ವಿದ್ಯಾರ್ಥಿಗಳನ್ನು ಕಲಿಕಾ ಹಬ್ಬದಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲಲು ಶ್ರಮವಹಿಸಬೇಕು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ತಮ್ಮ ಕಲಿಕೆಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಬೇಕು. ಈ ಕಲಿಕಾ ಹಬ್ಬದ ಚಟುವಟಿಕೆಗಳ ಮೂಲಕ ಸರ್ಕಾರಿ ಶಾಲಾ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ, ದಾಖಲಾತಿ ಸುಧಾರಿಸುವ, ಸಮುದಾಯದ ಜತೆಗೆ ಬಾಂಧವ್ಯ ವೃದ್ಧಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುವಲ್ಲಿ ಸಫಲವಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ನಾವೆಲ್ಲರೂ ದುಡಿಯಬೇಕು ಎಂದು ಕರೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ವಕ್ಕಳದ, ಮುಖ್ಯಗುರು ಶಶಿಧರಸ್ವಾಮಿ, ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಸವರಾಜ ರ‍್ಯಾವಳದ, ನಿರ್ದೇಶಕಿ ನಾಗರತ್ನ, ನೌಕರರ ಸಂಘದ ನಿರ್ಧೇಶಕಿ ಮಂಗಳ ಟೆಂಕಪ್ಪನವರ್ ಮಾತನಾಡಿದರು.ಬೂದಗುಂಪ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ ಚಿಕೇನಕೊಪ್ಪ ಪ್ರಾಸ್ತಾವಿಕ ಮಾತನಾಡಿ, ಕಲಿಕಾ ಹಬ್ಬಗಳ ಹಿನ್ನೆಲೆ, ಆಯೋಜನೆಯ ಮಹತ್ವ ಮತ್ತು ಪ್ರಯೋಜನಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲ ಸಮುದ್ರ ಹಾಗೂ ತಿಮ್ಮಾಪುರ ಉಭಯ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರಾದ ಈರಪ್ಪ ಗೋಡೆಕಾರ, ನಾಗಪ್ಪ ಲಡ್ಡಿನರವರು ವಹಿಸಿಕೊಂಡಿದ್ದರು. ಈ ವೇಳೆ ಬಸವರಾಜ ಸಿದ್ದಾಪುರ, ಕರಿಸಿದ್ದನಗೌಡ ಮಾಲಿಪಾಟೀಲ, ಸಿದ್ದಪ್ಪ ಹೆಬ್ಬಡದ, ಮಲ್ಲಿಕಾರ್ಜುನ ಕಡೇಮನಿ, ಚಂದ್ರು ಜಂತಗಲ್, ಮಲ್ಲನಗೌಡ ಪೊಲೀಸ್‌ಪಾಟೀಲ್, ಮಂಜುನಾಥ ಹೆಬ್ಬಡದ, ಶಿವು ತೆಕ್ಕಲಕೋಟೆ, ನಾಗರಾಜ ಹಾದಿಮನಿ, ರಾಮಣ್ಣ ಹಾಲ್ವಿ, ಶರಣಪ್ಪ ಹೆಬ್ಬಡದ, ವೀರೇಶ ಸಿರಿಗೇರಿ, ವಿರೂಪಾಕ್ಷ ಸಿದ್ದಾಪುರ ಇದ್ದರು. ವಿವಿಧ ಶಾಲೆಗಳ ಮುಖ್ಯಗುರುಗಳಾದ ಬಸವರಾಜ ಅವರಾದಿ, ಜಟ್ಟಿಂಗರಾಯ ದಳವಾಯಿ, ಜಿ. ಅಮರಮ್ಮ, ವಿಠ್ಠಲ ಬಾರಕೇರ, ಮಾಲತೇಶ, ರಾಜೇಶ್ವರಿ, ಸೇರಿದಂತೆ ಇತರರು ಇದ್ದರು. ಚೈತ್ರಾಂಜಲಿ, ಜಟ್ಟಿಂಗರಾಯ ದಳವಾಯಿ ಮತ್ತು ಗೀತಾಂಜಲಿ ಕಾರ್ಯಕ್ರಮ ನಿರ್ವಹಿಸಿದರು.