ಶಿವಗಂಗೆಯಲ್ಲಿ ಮಹಾಶಿವರಾತ್ರಿ ಆಚರಣೆ

| Published : Feb 27 2025, 12:30 AM IST

ಸಾರಾಂಶ

ಶಿವನ ಲಿಂಗಕ್ಕೆ ಪಂಚಾಮೃತ ಅಭಿಷೇಕ, ಬಿಲ್ವಷ್ಟೋತ್ತರ, ಗಣಪತಿ ಪೂಜೆ, ಕುಂಕುಮಾರ್ಚನೆ ಮುಂತಾದ ಧಾರ್ಮಿಕ ಕೈಂಕರ್ಯಗಳನ್ನು ಅರ್ಚಕರಾದ ರಾಜುದೀಕ್ಷಿತ್ ನಡೆಸಿಕೊಟ್ಟರು. ದೇವಾಲಯವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸೇಬು, ದ್ರಾಕ್ಷಿ ಸೇರಿ ವಿವಿಧ ಹಣ್ಣುಗಳ ಅಲಂಕಾರ, ಬಿಲ್ವಪತ್ರೆ, ಅಲಂಕಾರಿಕ ಹೂಗಳಿಂದ ದೇವಾಲಯದ ಪ್ರಾಂಗಣ ಕಂಗೊಳಿಸುತ್ತಿತ್ತು.

ದಾಬಸ್‍ಪೇಟೆ: ದಕ್ಷಿಣಕಾಶಿ ಶಿವಗಂಗೆಯ ಶ್ರೀ ಗಂಗಾಧರೇಶ್ವರ ಸ್ವಾಮಿ ಹಾಗೂ ಹೊನ್ನಾದೇವಿ ದೇವಾಲಯಗಳಲ್ಲಿ ಮಹಾಶಿವರಾತ್ರಿ ಆಚರಣೆ ಅರ್ಥಪೂರ್ಣವಾಗಿ ನಡೆಯಿತು.

ಶಿವನ ಲಿಂಗಕ್ಕೆ ಪಂಚಾಮೃತ ಅಭಿಷೇಕ, ಬಿಲ್ವಷ್ಟೋತ್ತರ, ಗಣಪತಿ ಪೂಜೆ, ಕುಂಕುಮಾರ್ಚನೆ ಮುಂತಾದ ಧಾರ್ಮಿಕ ಕೈಂಕರ್ಯಗಳನ್ನು ಅರ್ಚಕರಾದ ರಾಜುದೀಕ್ಷಿತ್ ನಡೆಸಿಕೊಟ್ಟರು. ದೇವಾಲಯವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸೇಬು, ದ್ರಾಕ್ಷಿ ಸೇರಿ ವಿವಿಧ ಹಣ್ಣುಗಳ ಅಲಂಕಾರ, ಬಿಲ್ವಪತ್ರೆ, ಅಲಂಕಾರಿಕ ಹೂಗಳಿಂದ ದೇವಾಲಯದ ಪ್ರಾಂಗಣ ಕಂಗೊಳಿಸುತ್ತಿತ್ತು.

ಶಿವಗಂಗೆಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹರಿದು ಬಂದಿದ್ದು, ರಾತ್ರಿಯಿಡೀ ವಿವಿಧ ಪೂಜೆ, ಅಭಿಷೇಕ, ಹೋಮ, ಹವನಾದಿಗಳು ನಡೆಯಲಿವೆ. ಗುರುವಾರ ಬೆಳಗ್ಗೆ 5 ಗಂಟೆಗೆ ವಿಶೇಷ ಪೂಜೆ ಮುಗಿದು ಶಿವರಾತ್ರಿ ಆಚರಣೆಗೆ ತೆರೆ ಬೀಳಲಿದೆ.

ಇಂದಿಗೂ ವಿಸ್ಮಯ:

ಗಂಗಾಧರೇಶ್ವರ ದೇವರ ಲಿಂಗದ ಮೇಲೆ ತುಪ್ಪವನ್ನು ಸವರಿದರೆ ಬೆಣ್ಣೆಯಾಗಿ ಪರಿವರ್ತನೆಯಾಗುವ ವಿಸ್ಮಯವನ್ನು ಇಂದಿಗೂ ಭಕ್ತರು ಕಂಡು ಕಣ್ತುಂಬಿಕೊಳ್ಳುತ್ತಾರೆ.

ಐದು ಸಾವಿರ ಭಕ್ತರ ಭೇಟಿ:

ಗಂಗಾಧರೇಶ್ವರನಿಗೆ ವಿಶೇಷ ಪೂಜೆ, ಅಲಂಕಾರ, ಪಂಚಾಮೃತ ಅಭಿಷೇಕಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚಿನ ಭಕ್ತರು ಸಾಕ್ಷಿಯಾದರು. ದಾಬಸ್‍ಪೇಟೆ ಪೊಲೀಸರು ನಿಯಂತ್ರಿಸಿ, ಸರದಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ಶಿವಗಂಗೆ ದಾಸೋಹ ಭವನದಲ್ಲಿ ಕೊಡಿಗೇಹಳ್ಳಿ ಶಿವಣ್ಣ ಮತ್ತು ಕುಟುಂಬದಿಂದ ಸುಮಾರು 5 ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಉಪ್ಪಿಟ್ಟು, ಕೇಸರಿಬಾತ್, ಪೊಂಗಲ್, ಅವಲಕ್ಕಿ ಉಪಹಾರ ವಿತರಿಸಿದರು,

ದೇವಾಲಯದ ಇಒ ಬೃಂದಾ, ಪಾರುಪತ್ತೇದಾರ ಸುಮ, ನವೀನ್ ದೀಕ್ಷಿತ್, ಕಾರ್ತಿಕ್ ದೀಕ್ಷಿತ್, ಗುಂಡ ದೀಕ್ಷಿತ್ ಇನ್ನಿತರರಿದ್ದರು.