ಸಾರಾಂಶ
ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಅರ್ಹ ನಾಗರೀಕರಿಗೂ ತಲುಪಿಸಲು ಅರಿವು ಮೂಡಿಸಲಾಗುತ್ತಿದ್ದು, ಇದಕ್ಕೆ ಮತ್ತಷ್ಟು ವೇಗ ನೀಡುವುದಾಗಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಬಿ.ಇಟ್ನಾಳ್ ಹೇಳಿದರು.ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಬೇಕು. ಯಾರಿಗೆ ಯೋಜನೆ ಸೌಲಭ್ಯ ತಲುಪುತ್ತಿಲ್ಲ, ಅಂತಹವರಿಗೆ ಅರಿವು ಮೂಡಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ಮಾತನಾಡಿ, ಅನ್ನ ಭಾಗ್ಯದಡಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಬಗ್ಗೆ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು ಜಂಟಿಯಾಗಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಪಡಿತರ ವಿತರಣೆ, ಪಡಿತರ ಧಾನ್ಯಗಳ ವಿತರಣೆಯಲ್ಲಿ ಆಗುವ ತೂಕ ವ್ಯತ್ಯಾಸ, ಆಹಾರ ಧಾನ್ಯಗಳ ಗುಣಮಟ್ಟ ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.ಸಮಿತಿ ನಾಮ ನಿರ್ದೇಶಿತ ಸದಸ್ಯರು ಮಾತನಾಡಿ, ಹೆಚ್ಚುವರಿಯಾಗಿ ಬಿಪಿಎಲ್ ಕಾರ್ಡ್‌ಗಳಲ್ಲಿ ಸುಮಾರು 2 ಸಾವಿರ ನಕಲಿ ಕಾರ್ಡ್‌ಗಳಿರುವ ಬಗ್ಗೆ ಆರೋಪ ಬರುತ್ತಿದೆ. ಈ ಬಗ್ಗೆ ಸಮಿತಿ ಅಧ್ಯಕ್ಷರು, ಜಿಪಂ ಸಿಇಒ ಗಮನಹರಿಸಬೇಕು ಎಂದರು. ಅದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳ ಮಾತನಾಡಿ, ಈ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾತನಾಡಿ, ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗ ವ್ಯಾಪ್ತಿಯಲ್ಲಿ ಜೂನ್.11. 2023ರಿಂದ ಅಕ್ಟೋಬರ್ 2024 ರವರೆಗೆ ಒಟ್ಟು. 5,35,15,583 ಪ್ರಯಾಣಿಕರು ಸಂಚರಿಸಿದ್ದು, ಪ್ರಯಾಣ ವೆಚ್ಚವಾಗಿ ಒಟ್ಟು 146.14 ಕೋಟಿರು.ಗಳನ್ನು ಸರ್ಕಾರ ಭರಿಸುತ್ತಿದೆ ಎಂದು ತಿಳಿಸಿದರು.ಜಿಲ್ಲಾ ಮಟ್ಟದ ಅಧಿಕಾರಿಗಳು ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ 3,66,937 ಫಲಾನುಭವಿಗಳು ನೋಂದಣಿಯಾಗಿದ್ದು, ಇದರಲ್ಲಿ 3,69,677 ಫಲಾನುಭವಿಗಳಿಗೆ 357.42 ಕೋಟಿ ರು.ಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ.
ಯುವನಿಧಿಯಡಿ ಜನವರಿ 2024 ರಿಂದ ಜುಲೈವರೆಗೆ 19,539 ಜನ ಪದವಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ 5,86,17000 ರು.ಗಳನ್ನು ಹಾಗೂ 243 ಜನ ಡಿಪ್ಲೋಮಾ ಫಲಾನುಭವಿಗಳಿಗೆ 3,64,500 ರು.ಗಳನ್ನು ಪಾವತಿ ಮಾಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಚಾಲ್ತಿಯಲ್ಲಿರುವ 4,86,977 ಸ್ಥಾವರಗಳಲ್ಲಿ 4,34,002 ಸ್ಥಾವರಗಳ ಫಲಾನುಭವಿಗಳು ಅದರ ಲಾಭ ಪಡೆಯುತ್ತಿದ್ದು, 52,975 ಆರ್‌ಆರ್ ಸಂಖ್ಯೆ ಹೊಂದಿರುವ ಫಲಾನುಭವಿಗಳು ಮಾತ್ರ ಗೃಹಜ್ಯೋತಿ ಯೋಜನೆಗೆ ನೋಂದಣಿಯಾಗಿಲ್ಲ ಎಂದು ಸಮಿತಿ ಅಧ್ಯಕ್ಷರು, ಸಮಿತಿ ಸದಸ್ಯರಿಗೆ ವಿವರಿಸಿದರು.
ಸಮಿತಿ ಸದಸ್ಯರಾದ ಎಂ.ಜಿ.ಶಶಿಕಲಾ ಮೂರ್ತಿ, ಎಸ್.ಎಸ್.ಗಿರೀಶ ಮಾತನಾಡಿದರು. ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ನಂಜಾನಾಯ್ಕ, ಹಿರಿಯ ವಕೀಲ ಅನೀಸ್ ಪಾಷಾ, ಸಮಿತಿ ಸದಸ್ಯರಾದ ಡೋಲಿ ಚಂದ್ರು, ಸುಭಾನ್ ಸಾಬ್, ಆಹಾರ ಇಲಾಖೆ ಉಪ ನಿರ್ದೇಶಕ ಸಿದ್ದರಾಮ ಮಾರಿಹಾಳ್ ಹಾಗೂ ಅನುಷ್ಠಾನ ಸಮಿತಿಯ ಎಲ್ಲಾ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.