ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಆಯೋಜಿಸಿರುವ ಜೇಸಿಯಾನ- ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮವು ಸೋಮವಾರ ಸಂಭ್ರಮದ ಚಾಲನೆ ದೊರೆಯಿತು.ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ನಟ ವಸಿಷ್ಟ ಸಿಂಹ ಅವರು, ಹಾಡು ಹಾಗೂ ಡೈಲಾಗ್ ಗಳ ಮೂಲಕ ರಂಜಿಸಿದರು, ಕಿರಿಕ್ ಪಾರ್ಟಿ ಸಿನೆಮಾದ ನೀಚ ಸುಳ್ಳು ಸುತ್ತೊ ನಾಲಿಗೆ, ದಯವಿಟ್ಟು ಗಮನಿಸಿ ಚಿತ್ರದ ಮರೆತೆ ಹೋದೆನು ಹೊರಟ ಕಾರಣ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳ ಮನರಂಜಿಸಿದರು.
ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಪದವೀಧರರು ಹೊರ ಬರುತ್ತಾರೆ. ನೀವು ಅವರಲ್ಲಿ ಒಬ್ಬರಾಗದೆ, ಕೌಶಲ ಹಾಗೂ ಜ್ಞಾನದ ಮೂಲಕ ಹೆಗ್ಗುರುತು ಮೂಡಿಸಬೇಕು. ಕೆಲಸಕ್ಕಾಗಿ ಅಲೆಯುವ ಬದಲು ಕೆಲಸ ನೀಡುವವರಾಗಿ ಬೆಳೆಯಿರಿ. ಕಾಲೇಜು ಜೀವನವನ್ನು ಸಂಭ್ರಮಿಸಿ, ಜೊತೆಗೆ ನಾಳೆ ಬಗ್ಗೆ ಚಿಂತೆ ಇರಲಿ ಎಂದು ಕಿವಿಮಾತು ಹೇಳಿದರು.ಯುವ ಸಮೂಹ ನೆಲ, ಜಲ, ಭಾಷೆ ಕಾಯುವ ಕೆಲಸ ಮಾಡಬೇಕಿದೆ. ನಾವು ನಮ್ಮ ಭಾಷೆ ಮಾತನಾಡಿದರೆ, ಅದನ್ನು ನೋಡಿ ಉಳಿದವರೂ ಕಲಿಯುತ್ತಾರೆ. ಅದರ ಬದಲಾಗಿ ನಮ್ಮ ಭಾಷೆ ಮಾತನಾಡಿಲ್ಲ ಎಂದು ದೂಷಿಸುವುದು ಬೇಡ ಎಂದರು.
ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಡಾಎ.ಎನ್. ಸಂತೋಷ್ ಕುಮಾರ್, ಕುಲಸಚಿವ ಡಾ.ಬಿ. ಹರೀಶ್, ಪ್ರಾಂಶುಪಾಲ ಡಾ.ಸಿ. ನಟರಾಜು, ಡೀನ್ ಡಾ.ಎಂ.ಎನ್. ನಾಗೇಂದ್ರಪ್ರಸಾದ್ ಮೊದಲಾದವರು ಇದ್ದರು.