ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಪ್ರಚಾರಕ್ಕೆ ಪೂಜಾರಿ ಚಾಲನೆ

| Published : Mar 27 2024, 01:08 AM IST

ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಪ್ರಚಾರಕ್ಕೆ ಪೂಜಾರಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಕಚೇರಿ ಉದ್ಘಾಟನೆಯ ಬಳಿಕ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಆಗಮಿಸಿದ ಪದ್ಮರಾಜ್‌, ದೇವರ ದರ್ಶನ ಪಡೆದು, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ತನ್ನ ಶಿಷ್ಯ ಪದ್ಮರಾಜ್‌ ಆರ್‌. ಅವರ ಚುನಾವಣಾ ಕಚೇರಿಯನ್ನು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಮಂಗಳವಾರ ಉದ್ಘಾಟಿಸಿದರು.ವಯೋಸಹಜ ವೃದ್ಧಾಪ್ಯದಲ್ಲಿರುವ ಪೂಜಾರಿ, ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಪಕ್ಕದಲ್ಲಿರುವ ಚುನಾವಣಾ ಕಚೇರಿಗೆ ವಿಧ್ಯುಕ್ತ ಚಾಲನೆ ನೀಡಿದರು. ಕಾರಿನಿಂದಿಳಿದ ಜನಾರ್ದನ ಪೂಜಾರಿ, ಶಿಷ್ಯ ಪದ್ಮರಾಜ್‌ ಹೆಗಲಿಗೆ ಕೈಹಾಕಿ ಚುನಾವಣಾ ಕಚೇರಿಗೆ ನಡೆದುಕೊಂಡು ಆಗಮಿಸಿದರು. ಜಿಲ್ಲೆಯ ಹಿರಿಯ ನಾಯಕರೊಂದಿಗೆ ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು.ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ದ.ಕ. ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಬಿ. ರಮಾನಾಥ ರೈ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ, ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ರಾಜ್ಯ ವಕ್ತಾರರಾದ ಎಂ.ಜಿ. ಹೆಗಡೆ, ಪ್ರತಿಭಾ ಕುಳಾಯಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್‌ ಪಿಂಟೊ ಹಾಗೂ ನೂರಾರು ಕಾರ್ಯಕರ್ತರು ಈ ಸಂದರ್ಭ ಹಾಜರಿದ್ದರು.ಕುದ್ರೋಳಿ ಕ್ಷೇತ್ರದಿಂದ ಪ್ರಚಾರ ಆರಂಭಚುನಾವಣಾ ಕಚೇರಿ ಉದ್ಘಾಟನೆಯ ಬಳಿಕ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಆಗಮಿಸಿದ ಪದ್ಮರಾಜ್‌, ದೇವರ ದರ್ಶನ ಪಡೆದು, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ಜನಾರ್ದನ ಪೂಜಾರಿ ಅವರು ಕಾಂಗ್ರೆಸ್ ಧ್ವಜವನ್ನು ಅಭ್ಯರ್ಥಿ ಪದ್ಮರಾಜ್ ಅವರಿಗೆ ಹಸ್ತಾಂತರಿಸುವ ಮೂಲಕ ಪ್ರಚಾರಕ್ಕೆ ಹಸಿರು ನಿಶಾನೆ ತೋರಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿ, ಪದ್ಮರಾಜ್‌ ಗೆಲ್ಲುವ ಬಗ್ಗೆ ಯಾವ ಸಂಶಯವೂ ಬೇಡ. ಪದ್ಮರಾಜ್‌ ಗೆಲ್ಲೋದು ಗ್ಯಾರಂಟಿ ಎಂದು ಭವಿಷ್ಯ ನುಡಿದರು.