ಕಲಾವಿದರಲ್ಲಿ ಛಾಪು ಮೂಡಿಸಿದ ಕಲಾವಿದೆ ಬಿ. ಶಾರದಮ್ಮ

| Published : Mar 27 2024, 01:08 AM IST

ಸಾರಾಂಶ

ಮರಿಯಮ್ಮನಹಳ್ಳಿ ಬಿ. ಶಾರದಮ್ಮ ಸಹ ಹೊಟ್ಟೆಪಾಡಿಗಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿ ಕಳೆದ ಐದು ದಶಕಗಳಿಂದ ಉತ್ತಮ ಕಲಾವಿದೆಯಾಗಿ ಸೈ ಎನ್ನಿಸಿಕೊಂಡಿದ್ದಾರೆ.

ಸಿ.ಕೆ. ನಾಗರಾಜ ದೇವನಕೊಂಡ

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಸಾಕಷ್ಟು ಕಲಾವಿದರಿಗೆ ಬದುಕು ಕಟ್ಟಿಕೊಟ್ಟ ರಂಗಭೂಮಿ ಕಲಾವಿದರಿಗಾಗಿ ಒಂದು ದಿನದ ಸಂಭ್ರಮವನ್ನು ಆಚರಿಸಲು ಮಾ. 27ರಂದು ವಿಶ್ವ ರಂಗಭೂಮಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಂಗಭೂಮಿಯ ಕಲಾವಿದರ ಬದುಕು ಮತ್ತು ವರ್ತಮಾನದ ತಲ್ಲಣಗಳು ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದಾಗ, ಮರಿಯಮ್ಮನಹಳ್ಳಿ ಬಿ. ಶಾರದಮ್ಮ ಸಹ ಹೊಟ್ಟೆಪಾಡಿಗಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿ ಕಳೆದ ಐದು ದಶಕಗಳಿಂದ ಉತ್ತಮ ಕಲಾವಿದೆಯಾಗಿ ಸೈ ಎನ್ನಿಸಿಕೊಂಡಿದ್ದಾರೆ. ಮರಿಯಮ್ಮನಹಳ್ಳಿ ಮಹಿಳಾ ಕಲಾವಿದರಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.

12ನೇ ವರ್ಷ ವಯಸ್ಸಿನಲ್ಲಿಯೇ ಶಾಲೆಗೆ ಬಿಟ್ಟು ತಾಯಿ ತಿರುಮಲೆಮ್ಮೆ ಹಾಗೂ ರಂಗಭೂಮಿ ಗುರುಗಳಾದ ಜಿ. ಮೈಲಾರಪ್ಪ ಅವರಿಂದ ಪ್ರೇರಣೆ ಪಡೆದು ಐತಿಹಾಸಿಕ ಬಾಲಚಂದ್ರ ನಾಟಕದಲ್ಲಿ ಹುಡುಗನ ಪಾತ್ರದ ಮೂಲಕ ರಂಗಭೂಮಿಗೆ ಕಾಲಿಟ್ಟರು. ಅಲ್ಲಿಂದ ಇಲ್ಲಿ ವರೆಗೆ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಬೀದಿ ನಾಟಕ ಸೇರಿದಂತೆ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯಲ್ಲಿ ನಾಯಕಿ ನಟಿಯಾಗಿ ಅಭಿನಯಿಸುವ ಮೂಲಕ ಮರಿಯಮ್ಮನಹಳ್ಳಿಯ ರಂಗಪ್ರಿಯರ ಬಾಯಲ್ಲಿ ಅಭಿನಯ ಶಾರದೆ ಎಂದು ಹೆಸರು ಪಡೆದಿದ್ದಾರೆ.

ಶಾರದಮ್ಮ ಅವರ ತಾಯಿ ಜೊತೆಯಲ್ಲೇ ರತ್ನ ಮಾಂಗಲ್ಯ ನಾಟಕವೊಂದರಲ್ಲಿ ಮಗಳ ಪಾತ್ರ ನಿರ್ವಹಿಸಿದ್ದು ಎಂದೂ ಮರೆಯಲಾರದ ಅನುಭವ. ಶಾರದಮ್ಮ ಅವರು ಅಂದಿನಿಂದ ಇಂದಿನ ವರೆಗೂ ಸಕ್ರಿಯವಾಗಿ ನಾಟಕಗಳಲ್ಲಿ ಪಾತ್ರನಿರ್ವಹಿಸುತ್ತ ಪ್ರಬುದ್ಧ ಕಲಾವಿದೆಯಾಗಿ ಮೆರೆದಿದ್ದಾರೆ.

ರಕ್ತರಾತ್ರಿ, ಕುರುಕ್ಷೇತ್ರ, ಹೇಮರೆಡ್ಡಿ ಮಲ್ಲಮ್ಮ, ಜಗಜ್ಯೋತಿ ಬಸವೇಶ್ವರ, ವೀರ ಅಭಿಮನ್ಯು, ಕಾಡು ಕುದುರೆ, ಶೀಲಾವತಿ, ಬೆಳ್ಳಕ್ಕಿ ಹಿಂಡು ಬೆದರ್ಯಾವೋ, ಅವ್ವಣ್ಣೆವ್ವ, ಸಂಗ್ಯಾ-ಬಾಳ್ಯಾ, ಭಗವತಿ ಕಾಡು, ಕರಿಭಂಟ, ಕಾಲಜ್ಞಾನಿ ಕನಕ, ಶರೀಫ, ರತ್ನ ಮಾಂಗಲ್ಯ, ಅಣ್ಣತಂಗಿ, ಬಸ್‌ ಕಂಡಕ್ಟರ್‌, ಗೌರಿ ಗೆದ್ದಳು, ಆದರ್ಶ ಪ್ರೇಮ, ದೇವಮಾನವ, ಬಡವ ಬದುಕಲೇಬೇಕು. ಸುನಿತಾ ಸೂಳೆಯಲ್ಲ, ಸೋತು ಗೆದ್ದಳು, ಬರಗಲ್ಲು ಸೇರಿದಂತೆ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಹಿರಿಯ ರಂಗಕಲಾವಿದರಾದ ಡಿ. ದುರ್ಗಾದಾಸ್‌, ಸುಭದ್ರಮ್ಮ ಮನ್ಸೂರ್‌, ಕೆ. ನಾಗರತ್ನಮ್ಮ ಸೇರಿದಂತೆ ಹಿರಿಯ ರಂಗಕಲಾವಿದರೊಂದಿಗೆ ಪಾತ್ರ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.

ಪ್ರಶಸ್ತಿಗಾಗಿ ಅಲೆದಾಟ

ನಮಗೆ ರಂಗಭೂಮಿಯೇ ಬದುಕು, ಅದೇ ನನ್ನ ಜೀವ. ಕೊನೆಯ ಉಸಿರು ಇರುವ ವರೆಗೂ ಕಲಾವಿದೆಯಾಗಿ ಸೇವೆ ಸಲ್ಲಿಸುವೆ. ಪುರಸ್ಕಾರಗಳು ಅರ್ಹರಿಗೆ ಸಿಗುತ್ತಿಲ್ಲ. ಅಕಾಡೆಮಿ ಹಾಗೂ ಸರಕಾರದ ಪುರಸ್ಕಾರಗಳಿಗಾಗಿ ಅಲೆದಾಡುವಂತ ಸ್ಥಿತಿ ಬಂದಿದೆ. ಪ್ರಶಸ್ತಿ ಪುರಸ್ಕಾರಗಳು ನಮ್ಮಂತಹವರಿಗಲ್ಲ. ಈಗಾಗಲೇ ನನಗೆ 60 ವರ್ಷ ಆಗಿದೆ. ಕಲಾವಿದರ ಮಾಶಾಸನವೂ ಇಲ್ಲ. ಇನ್ನೂ ಪ್ರಶಸ್ತಿಗಳ ಮಾತು ದೂರನೇ ಉಳಿಯಿತು.

- ಬಿ. ಶಾರದಮ್ಮ, ಹಿರಿಯ ರಂಗಕಲಾವಿದೆ, ಮರಿಯಮ್ಮನಹಳ್ಳಿ.