ಸಾರಾಂಶ
ಶ್ರೀರಂಗಪಟ್ಟಣ: ಹಾಡಹಗಲೇ ಮನೆ ಬೀಗ ಒಡೆದು ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಕಳವು ಮಾಡಿರುವ ಘಟನೆ ತಾಲೂಕಿನ ಕಿರಂಗೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಕಳೆದ 6 ವರ್ಷಗಳಿಂದ ವಾಸವಾಗಿರುವ ವಿಂದ್ಯಾ ಎಂಬುವವರ ಮನೆ ಬೀಗ ಒಡೆದು ಬೀರುವಿನಲ್ಲಿದ್ದ ಸುಮಾರು 100 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ವಿಂದ್ಯಾ ದಂಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ಧಾರೆ. ವಿಂದ್ಯಾ ಅವರು ಮೈಸೂರಿನ ಐಟಿ ಕಂಪನಿ ಉದ್ಯೋಗಿಯಾಗಿದ್ದು, ತಮ್ಮ ಮಗುವನ್ನು ಮೈಸೂರಿನ ಶಾಲೆಗೆ ಸೇರಿಸಲು ತೆರಳಿದ ವೇಳೆ ಕಳ್ಳರು ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮನೆ ಬೀಗ ಒಡೆದು ದೋಚಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಎಎಸ್‌ಪಿ ಗಂಗಾಧರ ಸ್ವಾಮಿ ನೇತೃತ್ವದಲ್ಲಿ ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಮನೆ, ಬೀರು ಸೇರಿ ಸುತ್ತಮುತ್ತಲ ಪ್ರದೇಶವನ್ನು ಪರಿಶೀಲಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಶಾಂತಮಲ್ಲಪ್ಪ, ಇನ್ಸ್ ಪೆಕ್ಟರ್ ಪ್ರಕಾಶ್, ಎಸ್‌ಐ ಶಿವಲಿಂಗ ದಳವಾಯಿ ಸೇರಿ ಇತರರು ಸ್ಥಳದಲ್ಲಿದ್ದು, ಕಳವು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.