ನಿರಂತರ ಮಳೆಗೆ ಮಾವು, ತರಕಾರಿ ಬೆಳೆಗೆ ಹಾನಿ

| Published : May 19 2025, 12:27 AM IST / Updated: May 19 2025, 12:28 AM IST

ಸಾರಾಂಶ

ಮಳೆ ಮುಂದುವರೆದರೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಮಾವಿನ ಕಾಯಿಗೆ ನೀರಿನ ಅಂಶ ಹೆಚ್ಚಾಗಲಿದೆ. ಒಂದು ವೇಳೆ ಬಿರುಗಾಳಿ ಹೆಚ್ಚಾದಲ್ಲಿ ಕಾಯಿಗಳು ಉದುರಿ ಬೀಳಲಿವೆ. ನೀರಿನಾಂಶ ಹೆಚ್ಚಾದಂತೆ ತೋತಾಪುರಿ, ಬೇನಿಷಾ ಮುಂತಾದ ತಳಿಯ ಕಾಯಿಗಳ ಗುಣಮಟ್ಟ ಕುಸಿಯಲಿದೆ. ಅಲ್ಲದೆ ಟೊಮೆಟೊ ಬೆಳೆಗೆ ವೈರಸ್‌ ತಗುಲುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಕೋಲಾರ ಜಿಲ್ಲೆಯಲ್ಲಿ ಸತತವಾಗಿ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮಾವು, ಟೊಮೆಟೊ ಸೇರಿದಂತೆ ತರಕಾರಿ ಬೆಳೆಗಳಿಗೆ ತೇವಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ಟೊಮೆಟೊ ಬೆಳೆಗೆ ವೈರಸ್ ಕಾಟ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರ ಆತಂಕಕ್ಕೆ ಒಳಗಾಗಿದ್ದಾರೆ. ವಾರ್ಷಿಕ ಬೆಳೆಯಾದ ಮಾವು ಇನ್ನೇನು ಒಂದು ವಾರದಲ್ಲಿ ಮಾರುಕಟ್ಟೆ ಪ್ರವೇಶ ಮಾಡಲಿದೆ. ಮಳೆಯ ಆರ್ಭಟದ ಜೊತೆಗೆ ಬಿರುಗಾಳಿಯು ಬೀಸುತ್ತಿರುವುದರಿಂದ ಮಾವಿನಕಾಯಿಗಳು ಉದುರುವ ಸಾಧ್ಯತೆಗಳಿವೆ, ಈಗಾಗಲೇ ಬಿರುಗಾಳಿಗೆ ಅಲ್ಲಲ್ಲಿ ಮಾವು ನೆಲಕಚ್ಚುತ್ತಿರುವುದನ್ನು ಕಂಡು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.ಕಡಿಮೆ ಬೆಲೆಗೆ ಮಾವು ಮಾರಾಟ

ನೆಲಕಚ್ಚಿದ ಮಾವನ್ನು ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನೆಲಕಚ್ಚಿದ ಮಾವಿಗೆ ಮಾರುಕಟ್ಟೆಯ ಸೌಲಭ್ಯ ಇಲ್ಲದ ಕಾರಣ ದಲ್ಲಾಳಿಗಳು ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನೆಲಕಚ್ಚಿದ ಮಾವನ್ನು ಬೆಂಗಳೂರು ಸೇರಿದಂತೆ ಇತರೆ ನಗರ ಪ್ರದೇಶಗಳಲ್ಲಿ ಮಾವಿನ ಕಾಯಿಗಳನ್ನು ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ಇದನ್ನು ಉಪ್ಪಿನಕಾಯಿಗೆ ಖರೀದಿ ಮಾಡುತ್ತಿದ್ದಾರೆ. ಇದೇ ರೀತಿ ಮಳೆ ಮುಂದುವರೆದರೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಮಾವಿನ ಕಾಯಿಗೆ ನೀರಿನ ಅಂಶ ಹೆಚ್ಚಾಗಲಿದೆ. ಒಂದು ವೇಳೆ ಬಿರುಗಾಳಿ ಹೆಚ್ಚಾದಲ್ಲಿ ಕಾಯಿಗಳು ಉದುರಿ ಬೀಳಲಿವೆ. ನೀರಿನಾಂಶ ಹೆಚ್ಚಾದಂತೆ ತೋತಾಪುರಿ, ಬೇನಿಷಾ ಮುಂತಾದ ತಳಿಯ ಕಾಯಿಗಳ ಗುಣಮಟ್ಟ ಕುಸಿಯಲಿದೆ.

ಟೊಮೆಟೊ ಬೆಳೆಗೆ ವೈರಸ್‌ ಭೀತಿ

ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ಟೊಮೆಟೊಗೆ ಉತ್ತಮ ಬೆಲೆ ಬರುತ್ತದೆಂದು ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊವನ್ನು ಬೆಳೆಯುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಪ್ರತಿದಿನ ಮಳೆ ಸುರಿಯುತ್ತಿರುವುದರಿಂದ ಎಲ್ಲಿ ವೈರಸ್ ಬರುತ್ತದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಈಗಿನ ಪರಿಸ್ಥಿತಿಯಲ್ಲಿ ಟೊಮೆಟೊ ಬೆಳೆಗೆ ಮಳೆ ಬಂದರೆ ಮರುದಿನವೇ ಔಷಧಿ ಸಿಂಪಡಣೆ ಮಾಡಬೇಕು. ಪ್ರತಿದಿನ ಮಧ್ಯಾಹ್ನಕ್ಕೆ ಮಳೆ ಪ್ರಾರಂಭವಾಗುತ್ತಿರುವುದರಿಂದ ಔಷಧಿ ಸಿಂಪಡಣೆ ಮಾಡಲು ಸಾಧ್ಯವಾಗುತ್ತಿಲ್ಲ. ತೇವಾಂಶ ಹೆಚ್ಚಾಗುವುದರಿಂದ ಎಲೆ ಮುದುರುವುದು ಸೇರಿದಂತೆ ಬೆಂಕಿ ರೋಗ ಮುಂತಾದ ರೋಗಬಾಧೆಗಳು ಆವರಿಸುವ ಸಾಧ್ಯತೆ ಹೆಚ್ಚು ಎಂದು ರೈತರು ತಿಳಿಸಿದ್ದಾರೆ. ಆದರೂ ಸಹ ಮಳೆಯನ್ನು ನೋಡಿಕೊಂಡು ಔಷಧಿಗಳ ಸಿಂಪಡಣೆಗೆ ಮುಂದಾಗಿದ್ದಾರೆ. ಕೊಳೆಯುತ್ತಿರುವ ತರಕಾರಿ

ಕ್ಯಾಪ್ಸಿಕಂ, ಬಜ್ಜಿ ಮೆಣಸಿನಕಾಯಿ, ಬೀಟ್‌ರೋಟ್, ಮೂಲಂಗಿ, ಎಲೆಕೋಸು, ಕೊತ್ತಂಬರಿ ಸೊಪ್ಪು ಇವುಗಳಿಗೂ ಸಹ ತೇವಾಂಶ ಹೆಚ್ಚಾಗಿ ತರಕಾರಿಗಳು ಭೂಮಿಯಲ್ಲಿ ಕೊಳೆಯಲು ಪ್ರಾರಂಭಿಸುತ್ತವೆ. ಮಳೆ ಈಗಲೇ ಮುಂದುವರೆದರೆ ಎಲ್ಲಾ ತರಕಾರಿ ಬೆಳೆಗಳು ನೆಲಕಚ್ಚುವ ಸಾಧ್ಯತೆ ಇದೆ. ಜಿಲ್ಲೆಯ ಮಾವು ಇನ್ನೇನು ಒಂದು ವಾರದಲ್ಲಿ ಹಂತ ಹಂತವಾಗಿ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಉತ್ತಮ ಇಳುವರಿ ಇದ್ದರೂ ಗಾಳಿಯಿಂದಾಗಿ ನಷ್ಟ ಉಂಟಾಗಲಿದೆ. ಈ ವರ್ಷ ಶೇ.೩೦ ರಷ್ಟು ಮಾತ್ರ ಫಸಲು ಇರುವುದರಿಂದ ಇರುವ ಫಸಲು ಎಷ್ಟರ ಮಟ್ಟಿಗೆ ರೈತರ ಕೈ ಸೇರುತ್ತದೆಯೋ ಕಾದು ನೋಡಬೇಕಾಗಿದೆ.