ಜೆಜೆಎಂ ಕುಡಿಯುವ ನೀರಿನ ಯೋಜನೆಯಲ್ಲಿ ಕಳಪೆ ಕಾಮಗಾರಿ, ಅವ್ಯವಹಾರ : ಶಾಸಕ ಬಾಲಕೃಷ್ಣ ಆರೋಪ

| Published : Sep 03 2024, 01:47 AM IST / Updated: Sep 03 2024, 05:18 AM IST

ಸಾರಾಂಶ

ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಜೆಜೆಎಂ ಕುಡಿಯುವ ನೀರಿನ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿದ್ದಾರೆ. ಅವರು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಉತ್ತಮ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ.

 ಕುದೂರು : ನಾನು ಶಾಸಕನಾಗಿ ಬಂದ ಮೇಲೆ ಜೆಜೆಎಂ ಎಂಬ ಕುಡಿಯುವ ನೀರಿನ ಕಳಪೆ ಕಾಮಗಾರಿಗೆ ಮೂಗುದಾರ ಹಾಕಿದ್ದೇನೆ. ಈ ಹಿಂದೆ ಕಳಪೆ ಕಾಮಗಾರಿ ಮಾಡಿದ್ದ ಗುತ್ತಿಗೆದಾರರಿಗೆ ಒಳ್ಳೆಯ ರೀತಿ ಮಾಡಿ ಎಂದು ಒಂದು ವರ್ಷ ಅವಕಾಶ ಕೊಟ್ಟಿದ್ದೆ ಆದರೆ ಅವರೆಲ್ಲರೂ ಇದರಿಂದ ಪಲಾಯನ ಮಾಡಿದ್ದಾರೆ.

 ಈಗ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.ಕುದೂರು ಹೋಬಳಿ ಕಣ್ಣೂರು ಗ್ರಾಮದಲ್ಲಿ ಶಾಲೆ ಮತ್ತು ಓವರ್ ಹೆಡ್ ಟ್ಯಾಂಕ್, ರಸ್ತೆಯ ಉದ್ಘಾಟನೆ ಮತ್ತು ಜೆಜೆಎಂ ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಅಧಿಕಾರಿಗಳಿಗೆ ಸ್ಪಪ್ಟವಾಗಿ ಹೇಳಿದ್ದೇನೆ. 

ಹೀಗೆ ಕಳಪೆ ಕಾಮಗಾರಿ ಮಾಡಿರುವವರನ್ನು ಬ್ಲಾಕ್ ಲೀಸ್ಟ್ ಗೆ ಹಾಕಿಸಿ ಹೊಸ ಟೆಂಡರ್ ಕರೆಯಲು ತಿಳಿಸಿದ್ದೇನೆ. ಸುಗ್ಗನಹಳ್ಳಿ ಮತ್ತು ಕೆಂಕೆರೆಯಲ್ಲಿ ನಿವೇಶನಕ್ಕೆ ಜಾಗ ಗುರುತಿಸಲಾಗಿದೆ. ಇನ್ನು ಹದಿನೈದು ದಿನದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಈ ಮೂಲಕ ಬಡವರಿಗೆ ನಿವೇಶನ ನೀಡುವ ಕಾರ್ಯಕ್ರಮ ಮಾಡಲಾಗುವುದು ಎಂದರು.ಸಂಸದರಾದ ಡಾ.ಮಂಜುನಾಥ್ ರವರು ಕಾರ್ಯಕ್ರಮಗಳಿಗೆ ಬರುತ್ತಿಲ್ಲ. ಕಾರ್ಯಕ್ರಮ ಉದ್ಘಾಟಿಸಿದ ನಂತರ ಬರುತ್ತಾರೆ ಎಂಬ ದೂರು ಮಾಧ್ಯಮ ಮತ್ತು ಜನರಿಂದ ಇದೆ. ಇದರಿಂದ ಸಂಸದರಿಗೆ ಕ್ಷೇತ್ರದ ಬಗ್ಗೆ ಆಸಕ್ತಿ ಎಷ್ಟಿದೆ ಎಂಬುದು ಗೊತ್ತಾಗುತ್ತಿದೆ ಎಂದು ತಿಳಿಸಿದರು.

ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್ ಗೆ ಟಿಕೆಟ್: ಚನ್ನಪಟ್ಟಣ ಮಳೂರು ಜಿಲ್ಲಾಪಂಚಾಯ್ತಿ ವ್ಯಾಪ್ತಿಯನ್ನು ನನಗೆ ಜವಾಬ್ದಾರಿ ವಹಿಸಿದ್ದಾರೆ. ನಾನು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಮಾತನಾಡಿದಾಗ ಅವರುಗಳಿಂದ ಬಂದ ಸ್ಪಷ್ಟವಾದ ಉತ್ತರ ಈ ಬಾರಿ ಕಾಂಗ್ರೆಸ್ ನಿಂದ ಡಿ.ಕೆ.ಸುರೇಶ್ ರವರನ್ನು ಅಭ್ಯರ್ಥಿಯನ್ನಾಗಿ ಮಾಡುವುದಾದರೆ ನಾವು ನಿಮ್ಮ ಪಕ್ಷಕ್ಕೆ ಬರುತ್ತೇವೆ ಎಂಬುದಾಗಿ ಹೆಚ್ಚಾಗಿ ಕೇಳಿ ಬರುತ್ತಿದೆ. ನನ್ನ ಅಭಿಪ್ರಾಯವೂ ಕೂಡಾ ಇದೇ ಆಗಿದೆ. ಇದರ ಕುರಿತು ಹೈಕಮಾಂಡ್ ಏನು ಹೇಳುತ್ತದೆ ಎಂದು ಕಾದು ನೋಡಬೇಕಾಗಿದೆ ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಇಲ್ಲ:ಚನ್ನಪಟ್ಟಣದಲ್ಲಿ ಮೈತ್ರಿ ಮುರಿದು ಬಿದ್ದಿದೆ. ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ. ಯೋಗೇಶ್ವರ್ ರವರು ಬಿಎಸ್ಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಇದರಿಂದಾಗಿ ಚನ್ನಪಟ್ಟಣದಲ್ಲಿ ಮೈತ್ರಿ ಎಂಬುದೇ ಇಲ್ಲದಂತಾಗಿದೆ. ಈ ಚುನಾವಣೆಯ ಮೂಲಕ ಸಿ.ಪಿ.ಯೋಗೇಶ್ವರ್ ಅವರನ್ನು ಖಾಲಿ ಮಾಡುಸುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಣನೂರು ಗ್ರಾಮಪಂಚಾಯ್ತಿ ಅಧ್ಯಕ್ಷೆ ಮಹದೇವಮ್ಮ ಪುಟ್ಟರಾಜು, ಉಪಾಧ್ಯಕ್ಷ ಜಗದೀಶ್, ಸದಸ್ಯ ಜೈಶಂಕರ್, ಪ್ರಭುದೇವ್, ತ್ಯಾಗರಾಜ್, ಚಂದ್ರಣ್ಣ, ಮತ್ತಿತರರು ಹಾಜರಿದ್ದರು.