ಕನ್ನಡಪ್ರಭ ವಾರ್ತೆ ಮದ್ದೂರು

ಮದ್ದೂರು ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಗ್ರಾಪಂ ಸೇರ್ಪಡೆ ವಿಚಾರದಲ್ಲಿ ಗ್ರಾಮಸ್ಥರು ನಡೆಸುತ್ತಿರುವ ಚಳವಳಿಯನ್ನು ಯಾವುದೇ ರಾಜಕಾರಣಿ ಅಥವಾ ಸಂಘ ಸಂಸ್ಥೆಗಳಿಂದ ಭಿಕ್ಷೆ ಬೇಡಿ ನಡೆಸುತ್ತಿಲ್ಲ ಎಂದು ರೈತ ಹೋರಾಟಗಾರ್ತಿ ಸುನಂದ ಜಯರಾಂ ಶಾಸಕ ಕೆ.ಎಂ.ಉದಯ್ ಗೆ ತಿರುಗೇಟು ನೀಡಿದರು.

ಮದ್ದೂರು ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಸೇರ್ಪಡೆ ವಿರೋಧಿಸಿ ಕಳೆದ 72 ದಿನಗಳಿಂದ ಧರಣಿ ನಡೆಸುತ್ತಿರುವ ಹೋರಾಟಗಾರರನ್ನು ಉದ್ದೇಶಿಸಿ, ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಚಳವಳಿಗೆ ವಿಪಕ್ಷದವರು, ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತ್ಯುತ್ತರ ನೀಡಿದರು.

ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದ ಬಚ್ಚ ಶಾಸಕ ಉದಯ್ ಗೆ ಹೋರಾಟಗಾರರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಗೆಜ್ಜಲಗೆರೆ ಗ್ರಾಮದ ಹೋರಾಟ ಇಡೀ ಕರ್ನಾಟಕದಲ್ಲಿ ಹೆಸರುವಾಸಿಯಾಗಿದೆ. ಗ್ರಾಮದ ಹೋರಾಟಕ್ಕೆ ಮತ್ತು ಚಳವಳಿಯನ್ನು ಯಾರಿಗೂ ಹಣಕ್ಕಾಗಿ ಒತ್ತೆ ಇಟ್ಟಿಲ್ಲ. ನಾವು ಸ್ವಂತ ಬೆಳೆದ ಬೆಳೆಗಳಿಂದ ಊಟ ಮಾಡಿ ಧರಣಿ ಮಾಡುತ್ತಿದ್ದೇವೆ ಎಂದರು.

ಶಾಸಕರು ರೈತರು ಮತ್ತು ಗ್ರಾಮಸ್ಥರನ್ನು ಗುಲಾಮರಾಗಿ ಮಾಡುತ್ತಿದ್ದಾರೆ. ತಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಶಾಸಕ ಉದಯ್ ಅವರಿಗೆ ನೈತಕತೆ ಇದ್ದರೆ ಗ್ರಾಮವನ್ನು ಪಂಚಾಯ್ತಿಯಾಗಿ ಉಳಿಸಿಕೊಳ್ಳಲಿ ಎಂದು ಸವಾಲು ಹಾಕಿದರು.


ನಿಮ್ಮ ರಾಜಕೀಯ ವಿಷಯ ನೀವು ಮಾತನಾಡಿಕೊಳ್ಳಿ. ಅದನ್ನು ಬಿಟ್ಟು ಹೋರಾಟಗಾರರನ್ನು ಏಕೆ ಎಳೆದುತರುತ್ತೀರಿ. ನಾವು ಯಾರನ್ನೂ ಕರೆದಿಲ್ಲ. ಬೇಡಿಲ್ಲ. ನಮ್ಮ ಹೋರಾಟವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.

ಗೆಜ್ಜಲಗೆರೆ ಗ್ರಾಪಂ ಮದ್ದೂರು ನಗರಸಭೆಗೆ ಸೇರ್ಪಡೆ ಮಾಡುವುದು ಬೇಡ ಎಂದು ಒಗ್ಗಟ್ಟಿನಂದ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಜನರ ವಿರೋಧವನ್ನೂ ಲೆಕ್ಕಿಸದೆ ನಾಲ್ಕು ಗ್ರಾಪಂಗಳನ್ನು ಸೇರ್ಪಡೆ ಮಾಡಿಕೊಂಡು ನಗರಸಭೆ ಮಾಡಲು ಹೊರಟಿದ್ದೀರಿ. ಹೋರಾಟಗಾರರು ಅನ್ಯಾಯದ ವಿರುದ್ಧ ಚಳವಳಿ ಮಾಡುತ್ತಿದ್ದಾರೆ ಎಂದರು.

6ನೇ ಹಂತದ ಯೋಜನೆಗೆ ಅನುಮೋದನೆ ಖಂಡನೀಯ:

ಕೆಆರ್ ಎಸ್ ಜಲಾಶಯದಿಂದ ಬೆಂಗಳೂರು ನಗರದ ಹೊರವಲಯಗಳಿಗೆ ಆರನೇ ಹಂತದಲ್ಲಿ ಕಾವೇರಿ ನೀರು ಪೂರೈಕೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದು ಖಂಡನೀಯ. ಶಾಸಕರು ಕೀಳು ಮಟ್ಟದ ರಾಜಕಾರಣ ಬಿಟ್ಟು ಮದ್ದೂರು ಕ್ಷೇತ್ರದ ಕೊನೆಯ ಭಾಗದ ಜಮೀನುಗಳಿಗೆ ಮೊದಲು ನೀರು ಹರಿಸುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

ಕೆ ಆರ್ ಎಸ್ ಅಣೆಕಟ್ಟು ನಿರ್ಮಾಣವಾಗಿ ನೂರು ವರ್ಷಗಳು ಸಂದಿವೆ. ಅಣೆಕಟ್ಟಿಗೆ ಸರ್ಕಾರ ಕಾವೇರಿ ಆರತಿ ಮಾಡುವುದನ್ನು ಬಿಟ್ಟು ಡ್ಯಾಮ್ ನ ಭದ್ರತೆ ಬಗ್ಗೆ ಚಿಂತಿಸಲಿ. ಅಣೆಕಟ್ಟು ಉಳಿಸುವ ನಿಟ್ಟಿನಲ್ಲಿ ನಾವು ವಿರೋಧ ಮಾಡಿದ್ದೇವೆಯೇ ಹೊರತು ಬೇರೆ ಉದ್ದೇಶಗಳಿಗೆ ಅಲ್ಲ. ಶಾಸಕ ಉದಯ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಮೋಜು, ಮಸ್ತಿ ಬಿಟ್ಟು ಅಣೆಕಟ್ಟು ಉಳಿಸುವ ನಿಟ್ಟಿನಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮೈಸೂರು ಮಹಾರಾಜರು ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿರುವುದು ರೈತರಿಗೆ ನೀರು ಕೊಡುವುದಕ್ಕೆ. ಬೇರೆ ಉದ್ದೇಶಗಳಿಗೆ ನೀರು ಕೊಡುವುದಕ್ಕೆ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದೇವೆ. ದಾಖಲೆ ಸಮೇತ ಕೊಡುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ರಾಧ, ಡೈರಿ ಅಧ್ಯಕ್ಷ ನಾಗಣ್ಣ, ಮುಖಂಡರಾದ ಬಿ.ಟಿ.ಚಂದ್ರಶೇಖರ್ , ಲಿಂಗಪ್ಪ, ಮುತ್ತುರಾಜು, ನಾಗಣ್ಣ, ಜಯರಾಂ, ವೈರಮುಡಿ, ಶಾಂತಮ್ಮ, ಲಕ್ಷ್ಮಣ, ಜಿ.ಪಿ.ಯೋಗೇಶ್ , ವೀರಪ್ಪ ಹಲವರು ಇದ್ದರು.