ಸಾರಾಂಶ
ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ್ದ ಕನ್ನಡ ನಾಡು ಕಾಲಕ್ರಮೇಣ ವಿವಿಧ ಭಾಷಾ ಪ್ರಭಾವಗಳಿಗೆ ಒಳಗಾಗಿ ಹಂಚಿಹೋಗಿತ್ತು
ಕನ್ನಡಪ್ರಭ ವಾರ್ತೆ ಮೈಸೂರು
ಮಾತೃಭಾಷೆಯ ಮಹತ್ವವನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಾಡು- ನುಡಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಹೇಳಿದರು.ಜೆ.ಪಿ. ನಗರದ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ್ದ ಕನ್ನಡ ನಾಡು ಕಾಲಕ್ರಮೇಣ ವಿವಿಧ ಭಾಷಾ ಪ್ರಭಾವಗಳಿಗೆ ಒಳಗಾಗಿ ಹಂಚಿಹೋಗಿತ್ತು. ಅನೇಕ ಹೋರಾಟಗಾರರ, ಸಾಹಿತಿಗಳ ಮತ್ತು ಕನ್ನಡ ಕಟ್ಟಾಳುಗಳ ಅವಿರತ ಪ್ರಯತ್ನದ ಫಲವಾಗಿ ಕರ್ನಾಟಕ ರಾಜ್ಯವಾಗಿ ನಾಮಕರಣಗೊಂಡಿತು ಎಂದರು.
ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ, ಪರಂಪರೆ, ಇತಿಹಾಸ ಮತ್ತು ರಾಜಮನೆತನಗಳ ಕೊಡುಗೆಯನ್ನು ಅರಿತುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.ಪತ್ರಕರ್ತ ರಘುರಾಮ ಮಾತನಾಡಿ, ಕನ್ನಡ ಎಂಬುದು ಕೇವಲ ಲಿಪಿ, ಭಾಷೆ ಮಾತ್ರವಾಗದೆ ನಮ್ಮ ಸಮಗ್ರ ಬದುಕಿನ ವಿಕಸನದ ಸಾಂಸ್ಕೃತಿಕ ಬುನಾದಿಯಾಗಿದೆ. ಶಿಕ್ಷಣ ಪಡೆಯುವ ಉದ್ದೇಶದಿಂದ ಭಾಷೆ ಯಾವುದಾದರೂ ನಮ್ಮ ನೆಲದ ನುಡಿಯಾದ ಕನ್ನಡದ ಬಗ್ಗೆ ಅಪಾರವಾದ ಕಾಳಜಿ ಮತ್ತು ಕಳಕಳಿಯನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದು ಸಲಹೆ ನೀಡಿದರು.
ಜೆಎಸ್ಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಸ್ಮಿತಾ, ಉಪ ಪ್ರಾಂಶುಪಾಲೆ ಸುನೀತಾ, ವಿದ್ಯಾರ್ಥಿ ನಾಯಕರಾದ ಹೃತಿಕ್, ತೇಜಸ್, ಸಾನ್ವಿ, ಶ್ರೇಯಾ, ಲೇಖನಾ ಇದ್ದರು.