ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರಕುಟುಂಬದ ಯಾರೇ ತಪ್ಪು ಕೆಲಸ ಮಾಡಿದರೂ, ಆ ದೋಷದ ಪಾಲು ಇಡೀ ಕುಟುಂಬಕ್ಕೆ ಬರುತ್ತದೆ. ಕುಟುಂಬದ ಯಾರೊಬ್ಬರು ಪುಣ್ಯದ ಕೆಲಸ ಮಾಡಿದರೂ ಅದರ ಫಲ ಕೂಡ ಇಡೀ ಕುಟುಂಬಕ್ಕೆ ಸಿಗುತ್ತದೆ. ಹಾಗಾಗಿಯೇ ಯಾರೂ ತಪ್ಪು ಮಾಡದ ರೀತಿ ಸಂಸ್ಕಾರ ನೀಡುವುದು ನಮ್ಮೆಲ್ಲರ ಕುಟುಂಬದ ಪ್ರತಿಯೊಬ್ಬರ ಜವಾಬ್ದಾರಿ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.ತಾಲೂಕಿನ ಮಂಚಾಲೆ ಕಾನಗೋಡಲ್ಲಿ ಗುರುವಾರ ಏರ್ಪಡಿಸಿದ್ದ ಗುರುಪಾದುಕಾ ಪೂಜೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ್ದ ಅವರು ಆಶೀರ್ವಚನ ಸಂದೇಶದಲ್ಲಿ ತಿಳಿಸಿದರು.ಕುಟುಂಬ ಎನ್ನುವುದು ಸಮುಷ್ಠಿ, ಅದು ಪ್ರತ್ಯೇಕವಲ್ಲ. ತಪ್ಪು ಮಾಡಿದ ವ್ಯಕ್ತಿಗೆ ಅಶುಭದ ಫಲ ಹೆಚ್ಚಿರಬಹುದು. ಆದರೆ ಉಳಿದವರಿಗೆ ಅದು ಇಲ್ಲ ಎನ್ನುವುದಿಲ್ಲ. ಎಲ್ಲರು ಸ್ವಲ್ಪವಾದರೂ ಅದನ್ನು ಅನುಭವಿಸಲೇಬೇಕು.. ಪುಣ್ಯ ಕಾರ್ಯದಲ್ಲೂ ಅದನ್ನು ಮಾಡಿದವನಿಗೆ ಹೆಚ್ಚು ಫಲ ದೊರೆಯಬಹುದು. ಉಳಿದಂತೆ ಎಲ್ಲರಿಗೂ ಫಲ ಸಿಗಲಿದೆ. ಹಾಗಾಗಿಯೇ ಸಮಾಜ ಸೇವೆಯಲ್ಲಿ ಪ್ರತಿಯೊಬ್ಬರೂ ಒಳ್ಳೆಯ ಕೆಲಸಗಳನ್ನು ಮಾಡುವಂತಾಗಬೇಕು ಎಂದರು.ಸೇವೆಯ ಭಾಗ್ಯವೂ ಎಲ್ಲ ಸಂದರ್ಭದಲ್ಲಿಯೂ ಭಗವಂತ ಒದಗಿಸುವುದಿಲ್ಲ ಮತ್ತು ಸ್ವೀಕರಿಸುವುದಿಲ್ಲ. ಇದಕ್ಕೆ ರಾಮಾಯಣವೇ ಉದಾಹರಣೆ. ಅನೇಕ ಸಂದರ್ಭದಲ್ಲಿ ರಾಮನ ಮುಂದೆ ಸೇವೆಗಾಗಿ ಭರತ, ಗುಹ, ಸುಗ್ರೀವ, ವಿಭೀಷಣ ಮೊದಲಾದವರು ಅವಕಾಶಕ್ಕೆ ಕಾದರೂ, ಸೇವಾಭಾಗ್ಯ ಸಿಗದಿರುವುದು ಕಂಡು ಬರುತ್ತದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಾಗಮ್ಮ ಮಂಜಪ್ಪ ಕುಟುಂಬದ ಪರವಾಗಿ ಗುರುಪಾದುಕಾ ಸೇವೆ ನಡೆಯಿತು. ರಮೇಶ್ ಕಾನಗೋಡು ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಮಧ್ಯಸ್ತ ನಿರೂಪಿಸಿದರು.