ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೆ.ವಿ ಸುಬ್ಬಣ್ಣ ದೇಶಕಂಡ ಅಪ್ರತಿಮ ರಂಗಕರ್ಮಿ ಎಂದು ಶಿಕ್ಷಣ ತಜ್ಞ ಮತ್ತು ನಾಟಕಕಾರ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ಧರಾಮೇಶ್ವರ ವಸತಿ ಪ್ರೌಢಶಾಲಾ ವಿದ್ಯಾರ್ಥಿ ನಿಲಯದ ಆವರಣದಲ್ಲಿ ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಂಯುಕ್ತ ಆಶ್ರಯದಲ್ಲಿ ಹೆಗ್ಗೋಡಿನ ನೀನಾಸಂ ಸಂಸ್ಥಾಪಕ ಸದಸ್ಯ, ಕೆ.ವಿ.ಸುಬ್ಬಣ್ಣ ಸ್ಮರಣೋತ್ಸವದ ಅಂಗವಾಗಿ ಕನ್ನಡ ಗೀತಗಾಯನ ತರಬೇತಿ ಕಾರ್ಯಾಗಾರ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.

ಪರಿಣಾಮಕಾರಿ ರಂಗಭೂಮಿಯ ಸಂವಹನ ಮಾಧ್ಯಮವಾಗಿಸಿದ ಕೀರ್ತಿ ಸುಬ್ಬಣ್ಣನವರಿಗೆ ಸಲ್ಲುತ್ತದೆ ಎಂದರು.

ಬೋಧನಾ ವಿಧಾನದಲ್ಲಿ ರಂಗಕೌಶಲ್ಯ, ಕಲೆ ಮತ್ತು ವಿಜ್ಞಾನ, ಸಂಕೀರ್ಣ ನಾಟಕಗಳ ಮೂಲಕ ಪ್ರೇಕ್ಷಕರಲ್ಲಿ ಹೊಸ ರಂಗಚಿಂತನೆ ಮತ್ತು ಮೌಲ್ಯಾಧಾರಿತ ಬದುಕನ್ನು ಹುಟ್ಟುಹಾಕುತ್ತಾರೆ. ಸುಬ್ಬಣ್ಣನವರ ರಂಗ ಮಾದರಿಗಳನ್ನು ಪರಿಚಯಿಸಿ ಮಕ್ಕಳಲ್ಲಿ ಸದಭಿರುಚಿಯ ಕನಸುಗಳನ್ನು ಬಿತ್ತಬೇಕು. ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ರಂಗ ಆಯಾಮಗಳನ್ನು ಬೋಧನೆ ಮತ್ತು ಅನ್ವೇಷಣೆಯ ಮಾದರಿಯಲ್ಲಿ ಅಳವಡಿಸಿದರೆ ಉತ್ತಮ ಕಲಿಕಾ ಬೋಧನೆಯಾಗುತ್ತದೆ ಎಂದರು.


ಹಿರಿಯ ಪತ್ರಕರ್ತ ಎಂ.ಎನ್.ಯೋಗೀಶ್ ಮಾತನಾಡಿ, ರಂಗಭೂಮಿ ಸಮಾಜದ ಕೈಗನ್ನಡಿ. ನೀನಾಸಂ ನಾಟಕಗಳು ಸಮಾಜವನ್ನು ಪ್ರತಿನಿಧಿಸುತ್ತದೆ. ವೃತ್ತಿಪರ ರಂಗಭೂಮಿ ಜೀವನಕ್ಕೆ ಭಿನ್ನವಿಭಿನ್ನವಾದ ದೃಷ್ಠಿಕೋನವನ್ನು ನೀಡುತ್ತದೆ. ಕೆ.ವಿ.ಸುಬ್ಬಣ್ಣ ಸ್ನೇಹಿತರೊಡಗೂಡಿ ಕಟ್ಟಿದ ನೀನಾಸಂ ಸಂಸ್ಥೆಯು ರಂಗಭೂಮಿ ಮುಖೇನ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನ ಅಲಂಕರಿಸಿದೆ ಎಂದರು.

ಮುಖ್ಯಶಿಕ್ಷಕ ಆನಂದ ತಳವಾರ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಗೌನಹಳ್ಳಿ ಗೋವಿಂದಪ್ಪ, ಈ.ಮಹೇಶ್‌ ಬಾಬು, ಚಳ್ಳಕೆರೆ ಎರ‍್ರಿಸ್ವಾಮಿ, ನಿವೃತ್ತ ವಿಜ್ಞಾನ ಶಿಕ್ಷಕ ಹೆಚ್‌ಎಸ್‌ಟಿ ಸ್ವಾಮಿ, ಹಿರಿಯ ರಂಗಭೂಮಿ ಕಲಾವಿದರಾದ ಮರಡಿ ರಾಜು, ಗಾಯಕ ಎಂ.ಕೆ.ಹರೀಶ್, ರಂಗಸೌರಭ ಕಲಾ ಸಂಘದ ಅಧ್ಯಕ್ಷ ಡಾ.ಕೆ ಮೋಹನ್‌ಕುಮಾರ್, ವಾದ್ಯ ಕಲಾವಿದ ಸಂಡೂರು ಹೇಮಂತ್, ಶಾರದಾ ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕ ಹೆಚ್.ಹನುಮಂತಪ್ಪ ಇದ್ದರು. ಇದೇ ಸಂದರ್ಭದಲ್ಲಿ ಡಿವಿಜಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಶ.ಮಂಜುನಾಥ ಹಾಗೂ ಕಥಾಸ್ಪರ್ಧೆ ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತ ಕೆ.ಪಿ.ಓಂಕಾರಮೂರ್ತಿ ಅವರನ್ನು ಸನ್ಮಾನಿಸಲಾಯಿತು. ನೀನಾಸಂ ಪದವೀಧರ ಹಾಗೂ ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಕನ್ನಡ ಗೀತಗಾಯನ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.