ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಗುಂಡಿ ಮುಚ್ಚುವ ತೇಪೆ ಕೆಲಸ ಸಾಕು ಮಾಡ್ರಪ್ಪಾ, ಹೊಸ ರಸ್ತೆ ಮಾಡಿಕೊಟ್ಟು ನೆಮ್ಮದಿಯಿಂದ ಅಡ್ಡಾಡೋಕೆ ಅವಕಾಶ ಮಾಡಿಕೊಡಿ.

ಇದು ಚಳ್ಳಕೆರೆ ಹೊರವಲಯದ ನಗರಂಗೆರೆ ಗ್ರಾಮಸ್ಥರ ಅಹವಾಲು. ಈ ಸಂಬಂಧ ಹೊಸ ರಸ್ತೆಗಾಗಿ ಬೀದಿಗಿಳಿದ ಅವರು ಪಾದಯಾತ್ರೆ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಅಳಲು ತೋಡಿಕೊಂಡರು. ಕಳಪೆ ಕಾಣಕ್ಕೆ ಗುಣಮಟ್ಟದಿಂದ ಹಾಳಾಗಿರುವ ನಗರಂಗೆರೆ ಗ್ರಾಮದ ರಸ್ತೆಯನ್ನು ತಾತ್ಕಾಲಿಕವಾಗಿ ಗುಂಡಿ ಮುಚ್ಚದೇ, ಸಂಪೂರ್ಣ ಹೊಸ ಗುಣಮಟ್ಟದ ರಸ್ತೆಯನ್ನಾಗಿ ನಿರ್ಮಿಸಿಕೊಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ನಗರಂಗೆರೆ ಮಹೇಶ್, ನಗರಂಗೆರೆ ಗ್ರಾಮವು ಚಳ್ಳಕೆರೆ ನಗರಕ್ಕೆ ತೀರಾ ಹೊಂದಿಕೊಂಡಿದ್ದರೂ ಕಳೆದ ಹಲವು ವರ್ಷಗಳಿಂದ ಗ್ರಾಮದ ಮುಖ್ಯ ರಸ್ತೆಯು ಅತ್ಯಂತ ಕಳಪೆ ಗುಣಮಟ್ಟದಿಂದಾಗಿ ಸಂಪೂರ್ಣವಾಗಿ ಹಾಳಾಗಿದೆ. ರಸ್ತೆಯುದ್ದಕ್ಕೂ ಬಿದ್ದಿರುವ ಬೃಹತ್ ಗುಂಡಿಗಳಿಂದಾಗಿ ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಗರ್ಭಿಣಿಯರು ಹಾಗೂ ವಾಹನ ಚಾಲಕರು ಪ್ರಾಣ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಶಾಸಕರು ಸ್ವತಃ ಈ ಗ್ರಾಮದಲ್ಲಿ ಹಲವು ಬಾರಿ ಓಡಾಡಿದ್ದರೂ, ಕಣ್ಣೆದುರೇ ಇರುವ ಈ ಗಂಭೀರ ಸಮಸ್ಯೆಯ ಕಡೆಗೆ ಗಮನ ಹರಿಸದೇ ಇರುವುದು ಇಡೀ ಗ್ರಾಮಸ್ಥರಲ್ಲಿ ತೀವ್ರ ಬೇಸರ ಮತ್ತು ಆಕ್ರೋಶವನ್ನು ಉಂಟುಮಾಡಿದೆ ಎಂದರು.

ಕೇವಲ ಒಂದುವರೆ ಕಿಮೀ ಉದ್ದದ ಈ ರಸ್ತೆಯು ಇಡೀ ಗ್ರಾಮದ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಹೊಸ ರಸ್ತೆ ನಿರ್ಮಿಸುವುದು ಅನಿವಾರ್ಯ. ಹಳೇ ರಸ್ತೆಗೆ ತೇಪೆ ಹಾಕುವ ಕೆಲಸವ ನಾವು ವಿರೋಧಿಸುತ್ತೇವೆ. ಶಾಶ್ವತ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವ ಕಡೆಗೆ ಅಧಿಕಾರಿಗಳು ಮುಂದೆಬರಬೇಕು. ಕಣ್ಣೋರೆಸುವ ತಂತ್ರವಾಗಿ ತಾತ್ಕಾಲಿಕವಾಗಿ ಮಣ್ಣು ಅಥವಾ ಜಲ್ಲಿ ಹಾಕಿ ಗುಂಡಿ ಮುಚ್ಚುವ ನಾಟಕೀಯ ಕೆಲಸವನ್ನು ಮಾಡಬಾರದು. ದೀರ್ಘಕಾಲ ಬಾಳಿಕೆ ಬರುವಂತೆ ಸಂಪೂರ್ಣ ಹೊಸ ರಸ್ತೆ ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದರು.


ಗುಂಡಿ ಮುಕ್ತ ರಸ್ತೆ ಮಾಡಿದರೆ ಸಾರ್ವಜನಿಕ ಅನುಕೂಲಕ್ಕೆ ಯೋಗ್ಯವಾಗಲಿದೆ. ವಾಹನ ಸವಾರರು ಮತ್ತು ಸಾರ್ವಜನಿಕರು ನಿರಂತರವಾಗಿ ಅಪಘಾತಕ್ಕೀಡಾಗುವುದನ್ನು ತಪ್ಪಿಸಲು ತಕ್ಷಣವೇ ಶಾಶ್ವತ ಪರಿಹಾರ ಕಲ್ಪಿಸಬೇಕು. ಅನೇಕ ವರ್ಷಗಳಿಂದ ಅನುಭವಿಸುತ್ತಿರುವ ಈ ನರಕಯಾತನೆಗೆ ಬೇಸತ್ತು, ಇಂದು ನಾವು ಪ್ರತಿಭಟನಾ ಪಾದಯಾತ್ರೆಯ ಮೂಲಕ ನಿಮ್ಮ ಕಚೇರಿಗೆ ಬಂದು ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ. ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾಮಗಾರಿ ಆರಂಭಿಸದಿದ್ದರೆ, ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಒಟ್ಟಾಗಿ ಉಗ್ರ ಸ್ವರೂಪದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ಕೃಷ್ಣೇಗೌಡ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು.ರಂಗಣ್ಣ, ರಘು, ದಾದಾಫೀರ್, ಪ್ರತಾಪ್ ಸೇರಿದಂತೆ ಗ್ರಾಮಸ್ಥರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಮನವಿ ಸಲ್ಲಿಸಿದರು.