ಕನ್ನಡಪ್ರಭ ವಾರ್ತೆ ಕೊರಟಗೆರೆ

ಯೋಗಿ ನಾರೇಯಣ ಯತೀಂದ್ರರು ಕಾಲಜ್ಞಾನಿಗಳೆಂದೇ ಲೋಕ ವಿಖ್ಯಾತರಾಗಿದ್ದು, ಅವರು ತಮ್ಮ ಅಪೂರ್ವವಾದ ಸಾಧಕ ಶಕ್ತಿಯಿಂದ ಭಗವಂತನನ್ನು ಒಲಿಸಿಕೊಂಡು ಆಧ್ಯಾತ್ಮದ ಹಾದಿಯಲ್ಲಿ ಜನರ ಬದುಕಿಗಾಗಿ ಶ್ರಮಿಸಿದರು ಎಂದು ಗ್ರೇಡ್-೨ ತಹಸೀಲ್ದಾರ್ ರಾಮಪ್ರಸಾದ್ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕು ಬಲಿಜ ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ಯಂತ್ರೀಂದ್ರರ ೩೦೦ನೇ ಜಯಂತ್ಯುತ್ಸವದ ಆಧ್ಯಕ್ಷತೆ ವಹಿಸಿ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ತಾತಯ್ಯನವರ ತತ್ವ ಆದರ್ಶ ಇಂದಿಗೂ ಪ್ರಸ್ತುತ. ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು, ಯೋಗಿ ನಾರೇಯಣ ಯಂತ್ರೀಂದ್ರರ ಆದರ್ಶಗಳನ್ನು ಜನರಿಗೆ ತಲುಪಿಸಲು ಇಂತಹ ಜಯಂತಿಗಳು ಸಹಕಾರಿ. ಬಲಿಜ ಸಮಾಜಕ್ಕೆ ಸರ್ಕಾರ ಶೈಕ್ಷಣಿಕ, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ನೀಡಿದೆ, ಕೃಷಿಕರೇ ಹೆಚ್ಚಿರುವ ಈ ಸಮಾಜದ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಕಾಣಬೇಕು ಎಂದು ತಿಳಿಸಿದರು.

ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್. ಪದ್ಮನಾಭ್ ಮಾತನಾಡಿ ಕರ್ನಾಟಕ ಸರ್ಕಾರ ಬಲಿಜ ಜನಾಂಗದ ಒತ್ತಾಸೆಯ ಮೇರೆಗೆ ಕಳೆದ ನಾಲ್ಕು ವರ್ಷಗಳಿಂದ ಕೈವಾರ ತಾತಯ್ಯನವರ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿದೆ, ಈ ಬಾರಿ ತಾತಯ್ಯನವರ ೩೦೦ ನೇ ಜಯಂತಿ ಆಚರಿಸಲಾಗುತ್ತಿದೆ. ಅದರೆ ರಾಜ್ಯ ಸರ್ಕಾರ ಕಳೆದ ೪೦ ವರ್ಷಗಳಿಂದ ಮೀಸಲಾತಿಯಲ್ಲಿ ೨ಎ ಯಿಂದ ೩ಎಗೆ ಬದಲಿಸಿ ಅನ್ಯಾಯ ಮಾಡಿದ್ದು ಇಲ್ಲಿಯವೆರಗೂ ಸರಿಪಡಿಸಿಲ್ಲ ಹಾಗೂ ಬಲಿಜ ನಿಗಮ ರಚಿಸಿ ಹಣ ಬಿಡುಗಡೆ ಮಾಡದೆ ನಿರ್ಲಕ್ಷಿಸುತ್ತಿದೆ ಎಂದು ಹೇಳಿದರು.

ಪಪಂ ಮುಖ್ಯಾಧಿಕಾರಿ ಉಮೇಶ್ ಮಾತನಾಡಿ, ತಾತಯ್ಯನವರು ತಮ್ಮ ಜೀವನ ಸಂದೇಶವನ್ನು ಜನರಿಗೆ ತಲುಪಿಸಲು ಶಕ್ತಿಮೀರಿ ಪ್ರಯತ್ನಿಸಿದವರು. ನಾಡಿಗೆ ಉತ್ತಮ ಸಂದೇಶದೊಂದಿಗೆ ಕಾಲಜ್ಞಾನ ನೀಡಿ ಹಾಗೂ ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ಸೌಹಾರ್ದತೆಗಾಗಿ ಶ್ರಮಿಸಿದ ಕೈವಾರ ತಾತಯ್ಯನವರ ತತ್ವ, ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಆಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನಂತರಾಜು ಮಾತನಾಡಿ, ಹಿಂದುಳಿದ ವರ್ಗಗಳ ಸಮುದಾಯಕ್ಕೆ ಇಲಾಖೆಯಿಂದ ದೊರೆಯುವ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿದರು.

ತಾಲೂಕು ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಪ.ಪಂ ಮಾಜಿ ಸದಸ್ಯ ಕೆ.ಎಲ್.ಆನಂದ್, ಅಧಿಕಾರಿಗಳಾದ ಮಧುಸೂದನ್, ಬಸವರಾಜು, ನಕುಲ್, ರುದ್ರಪ್ಪ, ಯಮುನಾ, ಕಾಂತರಾಜು, ಶೃತಿ, ಪ್ರೇಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಬೆನಕಾವೆಂಕಟೇಶ್, ಪತ್ರಕರ್ತರಾದ ಕೆ.ಬಿ. ಲೋಕೇಶ್, ದೇವರಾಜು, ತಿಮ್ಮರಾಜು, ಮುಖಂಡರಾದ ವೆಂಕಟೇಗೌಡ, ಗಿರಿಜಮ್ಮ ಕೃಷ್ಣಪ್ಪ, ಮಂಜುಳಾ ಗೋವಿಂದರಾಜು, ಕಿರಣ್‌ಕುಮಾರ್, ಕುಂಭಿ ನರಸಿಂಹಯ್ಯ, ನಾರಾಯಣ್, ಸಿದ್ದಾರ್ಥ ಸೇರಿದಂತೆ ಇತರರು ಇದ್ದರು.