ಕಾಳಿನದಿ ನೀರಾವರಿ ಯೋಜನೆ ಪರೀಕ್ಷಾರ್ಥ ಕಾರ್ಯಾಚರಣೆ ಶೀಘ್ರ: ದೇಶಪಾಂಡೆ

| Published : Sep 30 2025, 12:00 AM IST

ಕಾಳಿನದಿ ನೀರಾವರಿ ಯೋಜನೆ ಪರೀಕ್ಷಾರ್ಥ ಕಾರ್ಯಾಚರಣೆ ಶೀಘ್ರ: ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹತ್ವಾಕಾಂಕ್ಷೆಯ ಕಾಳಿನದಿ ನೀರಾವರಿ ಯೋಜನೆಯ ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ಯೋಜನೆಯ ಪರೀಕ್ಷಾರ್ಥ ಕಾರ್ಯಾಚರಣೆ (ಟ್ರೈಯಲ್ ರನ್) ಅತೀ ಶೀಘ್ರದಲ್ಲಿಯೇ ನಡೆಯಲಿದೆ.

ಹಳಿಯಾಳ-ದಾಂಡೇಲಿ ಕುಡಿಯುವ ನೀರು, ಬಹುಗ್ರಾಮ ಕುಡಿಯುವ ನೀರು ಯೋಜನೆ ಅಂತಿಮ ಹಂತಕ್ಕೆಕನ್ನಡಪ್ರಭ ವಾರ್ತೆ ಹಳಿಯಾಳ

ಮಹತ್ವಾಕಾಂಕ್ಷೆಯ ಕಾಳಿನದಿ ನೀರಾವರಿ ಯೋಜನೆಯ ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ಯೋಜನೆಯ ಪರೀಕ್ಷಾರ್ಥ ಕಾರ್ಯಾಚರಣೆ (ಟ್ರೈಯಲ್ ರನ್) ಅತೀ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

ಸೋಮವಾರ ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಹಳಿಯಾಳ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿರುವ ಕಾಮಗಾರಿಗಳು, ಲೋಕಾರ್ಪಣೆಗೆ ಸಿದ್ಧವಾಗಿರುವ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಕಾಳಿನದಿ ನೀರಾವರಿ ಯೋಜನೆ:

ಕಾಳಿನದಿ ನೀರಾವರಿ ಯೋಜನೆ ಯಾವತ್ತೋ ಆರಂಭವಾಗಬೇಕಾಗಿತ್ತು ಎಂದ ದೇಶಪಾಂಡೆ, ಯೋಜನೆಯ ಅನುಷ್ಠಾನದಲ್ಲಿ ಎದುರಾದ ಆಡಳಿತಾತ್ಮಕ ತೊಡಕುಗಳು, ಲಾಕ್ ಡೌನ್ ಸೇರಿದಂತೆ ಇತರ ಕಾರಣಗಳಿಂದ ಯೋಜನೆ ಕಾಮಗಾರಿ ನಿರೀಕ್ಷಿತ ಪ್ರಮಾಣದಲ್ಲಿ ನಡೆಯದಿರುವುದನ್ನು ಕಂಡು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಈ ಯೋಜನೆಯ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಬೆನ್ನ ಹಿಂದೇ ನಾನು ಬಿದ್ದ ಪರಿಣಾಮ ಯೋಜನೆಯ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ ಎಂದರು. ₹ 220 ಕೋಟಿ ವೆಚ್ಚದ ಈ ಯೋಜನೆಯಡಿಯಲ್ಲಿ 46 ಕೆರೆಗಳನ್ನು, 19 ಬಾಂದಾರು ತುಂಬಿಸಿ 7 ಸಾವಿರ ಹೆಕ್ಟರ್ (18 ಸಾವಿರ ಎಕರೆ) ಕೃಷಿ ಭೂಮಿಗೆ ನೀರಾವರಿಯ ಸೌಲಭ್ಯ ದೊರೆಯಲಿದೆ ಎಂದರು.

ಕುಡಿಯುವ ನೀರಿನ ಯೋಜನೆಗಳು:

₹116 ಕೋಟಿ ವೆಚ್ಚದ ಈ ಯೋಜನೆಯಲ್ಲಿ 113 ಗ್ರಾಮಗಳಿಗೆ ದಾಂಡೇಲಿಯ ಕಾಳಿನದಿಯಿಂದ ಕುಡಿಯುವ ನೀರನ್ನು ಪೂರೈಸಲಾಗುವ ಬಹುಗ್ರಾಮ ಯೋಜನೆ ಕಾಮಗಾರಿಯು ಅಂತೀಮ ಹಂತಕ್ಕೆ ತಲುಪಿದೆ. ಅಮೃತ ಯೋಜನೆಯಲ್ಲಿ ಹಳಿಯಾಳ ಪಟ್ಟಣಕ್ಕೆ ₹59.31 ಕೋಟಿ ಹಾಗೂ ದಾಂಡೇಲಿ ನಗರಕ್ಕೆ ₹60.90 ಕೋಟಿ ವೆಚ್ಚದ ಕಾಳಿನದಿಯಿಂದ ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಯೋಜನೆ ಕಾರ್ಯಾರಂಭಿಸಲಿದೆ ಎಂದರು.ಜೋಯಿಡಾಕ್ಕೆ 3 ಸೇತುವೆ:

ಲೋಕೋಪಯೋಗಿ ಇಲಾಖೆಯಡಿಯಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರಕ್ಕೆ 3 ಸೇತುವೆ ಮಂಜೂರಾಗಿವೆ. ಜೋಯಿಡಾ ತಾಲೂಕಿನ ಉಳವಿ-ಡಿಗ್ಗಿ-ಗೋವಾ ಗಡಿ ರಸ್ತೆಯಲ್ಲಿ ₹75 ಲಕ್ಷ ವೆಚ್ಚದಲ್ಲಿ, ಜೋಯಿಡಾ ತಾಲೂಕಿನ ಮುಂಡಗೋಡ-ಅಣಸಿ ರಸ್ತೆಯಲ್ಲಿ ₹80 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ, ಪೋಟೋಳಿ-ಕುಳಗಿ ರಸ್ತೆಯಲ್ಲಿ ₹66ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಸಲಾಗುವುದೆಂದರು

ಕಾವಲವಾಡ ಗ್ರಾಮಸ್ಥರ ಬೇಡಿಕೆಯಂತೆ ಸರ್ಕಾರಿ ಉರ್ದುಶಾಲೆಯನ್ನು 9ನೇ ತರಗತಿಯವರೆಗೆ ವಿಸ್ತರಿಸಿ, ಪ್ರೌಢಶಾಲೆಯನ್ನಾಗಿ ಉನ್ನತಿಕರಿಸಲು ಸರ್ಕಾರ ಮಂಜೂರಾತಿ ನೀಡಿದೆ. ಮುಖ್ಯಮಂತ್ರಿಗಳ ಆರೋಗ್ಯ ಸಹಾಯ ಪರಿಹಾರ ನಿಧಿಯಲ್ಲಿ ಅನುದಾನ ಬಿಡುಗಡೆಯಾಗಿದೆ ಎಂದರು.ಶೀಘ್ರ ರೈಲು ಸಂಚಾರ ಪುನರಾರಂಭ:

ಅಳ್ನಾವರ-ಅಂಬೆವಾಡಿ(ದಾಂಡೇಲಿ) ಪ್ರಯಾಣಿಕರ ರೈಲು ಸಂಚಾರ ಶೀಘ್ರ ಪುನಾರಂಭಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಅವರು ನನಗೆ ಭರವಸೆ ನೀಡಿದ್ದಾರೆ. ಈ ಭಾಗದ ಜನರ ಅಪೇಕ್ಷೆಯನ್ನು ಸಚಿವರ ಗಮನಕ್ಕೆ ತಂದಿದ್ದು, ರೈಲು ಸಂಚಾರ ಪುನರಾರಂಭಗೊಳ್ಳುವುದರಿಂದ ಈ ಭಾಗದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಇನ್ನುಷ್ಟು ಅನುಕೂಲಕರವಾಗಲಿದೆ ಎಂದರು. ಜನರ ಬೇಡಿಕೆಯಂತೆ ರೈಲ್ವೆ ನಿಲ್ದಾಣಕ್ಕೆ ಅಂಬೇವಾಡಿ ಬದಲು ದಾಂಡೇಲಿ ಎಂದು ಹೆಸರಿಡಲಾಯಿತು, ಬ್ರಾಡಗೇಜ್ ಕಾರ್ಯ, ವಿದ್ಯುತ್ ತಂತಿ ಅಳವಡಿಕೆ, ರೈಲು ನಿಲ್ದಾಣ ಇತ್ಯಾದಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು, ಈ ರೈಲು ಸಂಚಾರದ ಸದುಪಯೋಗವನ್ನು ಈ ಭಾಗದ ಜನ ಪಡೆದುಕೊಳ್ಳಬೇಕು ಎಂದರು.

ಅಗತ್ಯವಾದ ಪ್ರಮಾಣದಲ್ಲಿ ಪ್ರಯಾಣಿಕರ ಲಭ್ಯವಾಗದೇ ಇರುವುದರಿಂದ ಅಳ್ನಾವರ-ದಾಂಡೇಲಿ ರೈಲು ಸಂಚಾರ ಸ್ಥಗಿತಗೊಂಡಿತು ಮತ್ತೇ ಹೀಗಾಗದಂತೆ ಸಾರ್ವಜನಿಕರು ನೋಡಿಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ವಿ.ಆರ್.ಡಿ.ಎಂ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇದ್ದರು.