ಈರುಳ್ಳಿ ಬೆಲೆ ಕುಸಿತ; ಬೆಲೆ ನಾಶ ಮಾಡಿದ ರೈತ

| Published : Sep 30 2025, 12:00 AM IST

ಸಾರಾಂಶ

ಅತ್ತ ಮಳೆ ಕಾಟ, ಇತ್ತ ಭರಪೂರಾಗಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.

ಹೂವಿನಹಡಗಲಿ: ಅತ್ತ ಮಳೆ ಕಾಟ, ಇತ್ತ ಭರಪೂರಾಗಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ತಾಲೂಕಿನ ತಳಕಲ್ಲು ಗ್ರಾಮದ ರೈತನೋರ್ವ ರೋಟಾವೇಟರ್‌ ಮೂಲಕ ತನ್ನ ಹೊಲದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನಾಶ ಮಾಡಿದ್ದಾನೆ.

ಅತಿಯಾದ ಮಳೆಯಿಂದಾಗಿ ಜಮೀನಿನಲ್ಲಿರುವ ಈರುಳ್ಳಿ ಬೆಳೆ ಕಟಾವು ಮಾಡದೇ ಬಿಟ್ಟರೆ ಕೊಳೆ ರೋಗದಿಂದ ಹಾನಿಯಾಗುತ್ತದೆ. ಕಟಾವು ಮಾಡಿದರೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೇ ತಾಲೂಕಿನ ತಳಕಲ್ಲು ಗ್ರಾಮದ ಈರುಳ್ಳಿ ಬೆಳೆಗಾರ ಬಾಬುಸಾಬ್‌ ಪಿರಿ ಎಂಬ ರೈತ ಈರುಳ್ಳಿ ಬೆಳೆಯನ್ನು ಟ್ರ್ಯಾಕ್ಟರ್‌ ಮೂಲಕ ರೋಟಾವೇಟರ್‌ಯಿಂದ ಬೆಳೆ ನಾಶ ಮಾಡಿದ್ದಾನೆ.

ಈರುಳ್ಳಿ ಮಾರಾಟದಿಂದ ಬರುವ ಹಣ ಬೆಳೆ ಕಟಾವು, ದೂರದೂರಿಗೆ ಸಾಗಣೆ ವೆಚ್ಚಕ್ಕೂ ಸಾಲುತ್ತಿಲ್ಲ. ಇದನ್ನರಿತ ರೈತ ಕಟಾವು ಹಂತದಲ್ಲಿದ್ದ ಎರಡು ಎಕರೆ ಈರುಳ್ಳಿ ಬೆಳೆಯನ್ನು ನಾಶ ಮಾಡಿದ್ದಾನೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಎ-ಗ್ರೇಡ್ ಈರುಳ್ಳಿ ಕ್ವಿಂಟಲ್ ಗೆ ₹600ರಿಂದ ₹1,400ರವರೆಗೆ ಮಾರಾಟವಾಗಿದೆ. ಸಣ್ಣ ಗಾತ್ರದ ಈರುಳ್ಳಿಯನ್ನು ಕೇಳುವವರೇ ಇಲ್ಲದಾಗಿದೆ. ಇದರಿಂದ ಮನನೊಂದು ಕಣ್ಣೀರು ಹಾಕುತ್ತಾ ತಾನು ಬೆಳೆದ ಫಸಲನ್ನು ನಾಶ ಮಾಡಿದ್ದಾನೆ. ಬೆಲೆ ಕುಸಿತದಿಂದಾಗಿ ಬೆಳೆ ನಿರ್ವಹಣೆಯ ಖರ್ಚು ಹಿಂತಿರುಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಎರಡು ಎಕರೆ ಈರುಳ್ಳಿ ಬಿತ್ತನೆ, ನಿರ್ವಹಣೆ ಮತ್ತು ಈರುಳ್ಳಿ ಕಟಾವು ಮಾಡಿ ಮಾರುಕಟ್ಟೆಗೆ ಕಳಿಸಲು ಕನಿಷ್ಠ ಒಂದು ಲಕ್ಷ ರು ವರೆಗೂ ಖರ್ಚು ಬರುತ್ತದೆ. ಮತ್ತೆ ಸಾಲ ಮಾಡಿಕೊಂಡು ಫಸಲು ಮಾರಾಟಕ್ಕೆ ಹೋದರೆ ಇಷ್ಟು ಹಣವೂ ಹಿಂದಿರುವುದಿಲ್ಲ. ಬೇರೆ ಬೆಳೆಗಳ ಬಿತ್ತನೆಗೆ ಭೂಮಿ ಹದಗೊಳಿಸಲು ಈರುಳ್ಳಿ ಹೊಲವನ್ನು ರೋಟಾವೇಟರ್ ಹೊಡೆಸಿದ್ದೇವೆ. ಕಷ್ಟಪಟ್ಟು ಬೆಳೆಸಿದ ಬೆಳೆ ನಾಶಪಡಿಸಿದ್ದು ಮನಸ್ಸಿಗೆ ನೋವಾಗಿದೆ ಎನ್ನುತ್ತಾರೆ ರೈತ ಬಾಬುಸಾಬ್‌.

ಮಾರುಕಟ್ಟೆ ಸಮಸ್ಯೆಯಿಂದ ಹಾಕಿದ ಬಂಡವಾಳವೂ ಮರಳಿ ಬಾರದಂತಾಗಿದೆ. ನಷ್ಟಕ್ಕೀಡಾಗಿರುವ ರೈತರಿಗೆ ಮಾರುಕಟ್ಟೆ ಬೆಲೆ ವ್ಯತ್ಯಾಸ ಪಾವತಿ (ಪಿಡಿಪಿಎಸ್) ಯೋಜನೆಯಡಿ ಸರ್ಕಾರ ನೆರವು ನೀಡಬೇಕು ಎಂದು ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎಂ. ಸಿದ್ದೇಶ್‌ ಒತ್ತಾಯಿಸಿದ್ದಾರೆ.