ಕನಕದಾಸರು ಇಂದಿಗೂ ಪ್ರಸ್ತುತರು: ಅಜಿತ್ ಕುಮಾರ್ ಹೆಗ್ಡೆ ಶಾನಾಡಿ

| Published : Nov 21 2024, 01:01 AM IST

ಕನಕದಾಸರು ಇಂದಿಗೂ ಪ್ರಸ್ತುತರು: ಅಜಿತ್ ಕುಮಾರ್ ಹೆಗ್ಡೆ ಶಾನಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಜಂಟಿ ಆಶ್ರಯದಲ್ಲಿ ಕನಕ ಜಯಂತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಸುಮಾರು ೫೦೦ ವರ್ಷಗಳಿಗೂ ಹಿಂದೆ ಜೀವಿಸಿದ್ದ ಕನಕದಾಸರು ಇಂದೂ ನಮಗೆ ಪ್ರಸ್ತುತ. ಎಲ್ಲ ದಾಸರು ಕೀರ್ತನೆಗಳನ್ನು ಬರೆದಿದ್ದರೂ ಕನಕದಾಸರು ಅವರಲ್ಲಿ ಶ್ರೇಷ್ಠರಾಗಿ ಕಂಡು ಬರುತ್ತಾರೆ. ಅದಕ್ಕೆ ಕಾರಣ ಕನಕದಾಸರು ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವುದಕ್ಕೆ ಮಾಡಿದ ಪ್ರಯತ್ನ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದು ಬೆಂಗಳೂರು ಬಿಬಿಎಂಪಿಯ ಹೆಚ್ಚುವರಿ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಹೇಳಿದರು.

ಅವರು ಸೋಮವಾರ ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಜಂಟಿ ಆಶ್ರಯದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕನಕದಾಸರ ಸಾಹಿತ್ಯ ರತ್ನಗಳಾದ ನಳಚರಿತ್ರೆ, ರಾಮಧಾನ್ಯಚರಿತ್ರೆ, ಮೋಹನ ತರಂಗಿಣಿ ಹಾಗೂ ಹರಿಭಕ್ತಿಸಾರ ಅದ್ಭುತ ಕೊಡುಗೆಗಳು. ಅವರ ಹರಿಭಕ್ತಿ ಸಾರದ ೧೦೮ ಭಾಮಿನಿ ಷಟ್ಪದಿ ಪದ್ಯಗಳಿಗೆ ಇತ್ತೀಚೆಗೆ ವಿದ್ವಾಂಸರೊಬ್ಬರು ೨೦೦೦ ಪುಟಗಳ ವಿವರಣೆ ನೀಡಿರುವುದು ಅದರ ಶ್ರೇಷ್ಟತೆಗೆ ಸಾಕ್ಷಿ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಭಾಸ್ಕರ್ ಶೆಟ್ಟಿ ವಹಿಸಿದ್ದರು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಶೈಲಜಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ರಾಧಾಕೃಷ್ಣ ವಂದಿಸಿದರು.ಕಾರ್ಯಕ್ರಮಕ್ಕೆ ಮೊದಲು ರಾಜೇಶ್ ಶ್ಯಾನುಭೋಗ್ ಹಾಗೂ ಬಳಗದವರಿಂದ ಕನಕ ಕೀರ್ತನೆ ಪ್ರಸ್ತುತಗೊಂಡಿತು.