ಸಾರಾಂಶ
ಕನ್ನಡಪ್ರಭ ವಾರ್ತೆ ಕಡೂರು
ಶಾಸಕನಾಗಿ ಆಯ್ಕೆಯಾದ ಒಂದೇ ವರ್ಷದಲ್ಲಿ ಕ್ಷೇತ್ರದ ಚೌಳಹಿರಿಯೂರು, ಯಗಟಿ ಮತ್ತು ಪಂಚನಹಳ್ಳಿಗಳಲ್ಲಿ ತಲಾ ₹22 ಕೋಟಿ ವೆಚ್ಚದ ಮೂರು ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ₹66 ಕೋಟಿ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಕೆಎಸ್. ಆನಂದ್ ಹೇಳಿದರು.ಅವರು ಕಡೂರು ವಿಧಾನಸಭಾ ಕ್ಷೇತ್ರದ ಚೌಳಹಿರಿಯೂರು ಗ್ರಾಮದಲ್ಲಿ ₹22 ಕೋಟಿ ವೆಚ್ಚದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಬಾಡಿಗೆ ಕಟ್ಟಡದಲ್ಲಿ ಈ ವಸತಿ ಶಾಲೆ ನಡೆಯುತ್ತಿರುವುದನ್ನು ಮನಗಂಡು, ಸರ್ಕಾರದ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ಮಾಡಿ, ನಮ್ಮ ಸಚಿವರಾದ ಮಹದೇವಪ್ಪನವರನ್ನು ಭೇಟಿ ಮಾಡಿ, ಅಧಿಕಾರಿ ಮಣಿವಣ್ಣನ್ ಬಳಿ ಮನವಿ ಇಟ್ಟಾಗ ಬೇರೆಡೆಗೆ ಮಂಜೂರಾಗಿದ್ದ ಕಟ್ಟಡವನ್ನು ಚೌಳಹಿರಿಯೂರಿಗೆ ಮಾಡಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹10 ಕೋಟಿ ಬಿಡುಗಡೆ ಆಗಿದ್ದು, ಎರಡನೇ ಹಂತದಲ್ಲಿ ₹12 ಕೋಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.ನಾನು ಶಾಸಕನಾಗಿ ಒಂದೇ ವರ್ಷದಲ್ಲಿ ಕ್ಷೇತ್ರದ ಚೌಳ ಹಿರಿಯೂರು ಅಂಬೇಡ್ಕರ್ ವಸತಿ ಶಾಲೆಗೆ ₹22 ಕೋಟಿ, ಯಗಟಿ ಹೋಬಳಿಯ ಸಣ್ಣೇನಹಳ್ಳಿ ಮತ್ತು ಗಡಿ ಗ್ರಾಮ ಪಂಚನಹಳ್ಳಿಯಲ್ಲಿ ₹22 ಕೋಟಿ, ಮುರಾರ್ಜಿವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ₹66 ಕೋಟಿ ಮಂಜೂರು ಮಾಡಿಸಿ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.
ಮುರಾರ್ಜಿ ವಸತಿ ಶಾಲೆಗಳ ಪರಿಕಲ್ಪನೆ ರಾಜ್ಯದ ಶೋಷಿತ ಬಡವರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿಕೆ ಆಗಿದೆ. ಪ್ರತಿಷ್ಠಿತ ಖಾಸಗಿ ಶಾಲೆಗಳಿಗಿಂತ ನಮ್ಮ ಶಿಕ್ಷಕರು ನೀಡುವ ಗುಣಮಟ್ಟದ ಶಿಕ್ಷಣದಿಂದ ಶಾಲೆಯ ಮಕ್ಕಳು ಇಡೀ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಅಭಿನಂದನಾರ್ಹ. ನಮ್ಮ ಮಕ್ಕಳು ಬಡತನದಲ್ಲಿ ಬೆಳೆಯಬಾರದು ಎಂದು ಮಕ್ಕಳನ್ನು ಇಂತಹ ವಸತಿ ಶಾಲೆಗೆ ಪೋಷಕರು ಸೇರಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣದ ಗುತ್ತಿಗೆದಾರ ರವಿಶಂಕರ್ ಉತ್ತಮವಾಗಿ ಈ ಕಟ್ಟಡ ಕಟ್ಟಲಿದ್ದಾರೆ ಎಂದರು.ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಮತಿ ಮಾಲತಿ ಮಾತನಾಡಿ, ರಾಜ್ಯ ಸರಕಾರವು ಶಿಕ್ಷಣಕ್ಕೆ ಆದ್ಯತೆ ನೀಡಿ ವಸತಿ ಶಾಲೆಗಳನ್ನು ತೆರೆಯುತ್ತಿದೆ. ವಿದ್ಯಾರ್ಥಿಗಳು ಕೂಡ ಪೈಪೋಟಿ ಮೂಲಕ ಕಠಿಣ ಅಭ್ಯಾಸ ಮಾಡಿ ಭವಿಷ್ಯ ರೂಪಿಸಿ ಕೊಳ್ಳುತಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ನಾವು ಚಿಂತನೆ ಮಾಡಬೇಕು. ಈ ಶಾಲೆಯ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.
ಈ ವೇಳೆ ಚೌಳಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಮೂರ್ತಪ್ಪ, ಮಾಜಿ ಗ್ರಾ.ಪಂ.ಅ ಧ್ಯಕ್ಷ ಕೃಷ್ಣಮೂರ್ತಿ, ಜಿ. ಅಶೋಕ್, ಕ್ರೈಸ್ ಸಂಸ್ಥೆಯ ಎಇಇ ರಾಮು, ಧನರಾಜ್, ಪಿಎಸ್ಐ ಮಂಜುನಾಥ್, ಶ್ರೀಕಂಠ ಒಡೆಯರ್, ಗುತ್ತಿಗೆದಾರ ಪ್ರಕಾಶ್, ಕಲ್ಕೆರೆ ರೇವಣ್ಣ, ಬಳ್ಳೇಕೆರೆ ಪ್ರಭು, ಅಜ್ಜಯ್ಯ ಒಡೆಯರ್, ದೊಡ್ಡಯ್ಯ ಸೇರಿದಂತೆ ವಿವಿಧ ಗ್ರಾಮಗಳ ಜನ ಹಾಜರಿದ್ದರು.ಈ ವರ್ಷ ಬೀರೂರು, ಮುಂದಿನ ವರ್ಷ ಪಂಚನಹಳ್ಳಿಯಲ್ಲೂ ಮುರಾರ್ಜಿ ವಸತಿ ಶಾಲೆ ನಿರ್ಮಾಣವಾಗಲಿದೆ. ಸಿಂಗಟಗೆರೆ ಹೋಬಳಿಯ ಬಿ. ಮಲ್ಲೇನಹಳ್ಳಿ ವಸತಿ ಶಾಲೆಯ ಕಾಮಗಾರಿ ಮುಗಿದಿದ್ದು, ಶೀಘ್ರ ಉದ್ಘಾಟನೆ ಆಗಲಿದೆ. ಚೌಳಹಿರಿಯೂರಿಗೆ ಎಂವಿಎಸ್ಎಸ್ ವಿದ್ಯುತ್ ರಿಸೀವಿಂಗ್ ಸ್ಟೇಷನ್ ಶೀಘ್ರದಲ್ಲೇ ಮಂಜೂರಾಗಲಿದೆ. ₹2.40 ಕೋಟಿ ವೆಚ್ಚದ ಕೆರೆ ಸುತ್ತ ಚರಂಡಿ ನಿರ್ಮಾಣ, ಗ್ರಾಮದ ದೇವಾಲಯಗಳ ಅಭಿವೃದ್ಧಿಗೆ ₹30 ಲಕ್ಷ , ಸುಮಾರು 50 ಲಕ್ಷ ವೆಚ್ಚದ ರಸ್ತೆಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ.
ಕೆ.ಎಸ್ ಆನಂದ್, ಶಾಸಕ