ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಗಡಿನಾಡು ಬೆಳಗಾವಿಯಲ್ಲಿ ಈ ಬಾರಿ ದೀಪಾವಳಿ ಹಬ್ಬದ ಸಂಭ್ರಮದೊಂದಿಗೆ ಕನ್ನಡದ ದೀಪ ಹಚ್ಚಲು ಗಡಿ ಕನ್ನಡಿಗರು ಉತ್ಸುಕರಾಗಿದ್ದಾರೆ. ನವೆಂಬರ್ 1 ರಂದು ನಡೆಯುಬ ಕನ್ನಡದ ಹಬ್ಬಕ್ಕೆ ಕುಂದಾನಗರಿ ಬೆಳಗಾವಿ ಸಜ್ಜುಗೊಂಡಿದೆ.ಎಲ್ಲಿ ನೋಡಿದ್ದಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಕನ್ನಡ ಬಾವುಟಗಳು, ಸ್ವಾಗತ ಕೋರುವ ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿವೆ. ಇಡೀ ನಗರ ಕನ್ನಡಮಯವಾಗಿ ಪರಿವರ್ತನೆಗೊಂಡಿದೆ. ದೀಪಾವಳಿ ಹಬ್ಬದ ಜೊತೆಗೆ ರಾಜ್ಯೋತ್ಸವ ಹಬ್ಬ ಒಟ್ಟಿಗೆ ಬಂದಿರುವುದರಿಂದ ಗಡಿನಾಡ ಕನ್ನಡಿಗರಲ್ಲಿ ಸಂಭ್ರಮ ಇಮ್ಮಡಿಗೊಳಿಸಿದೆ. ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ, ಪ್ರಾದೇಶಿಕ ಆಯುಕ್ತರ ಕಚೇರಿ ಸೇರಿದಂತೆ ನಗರದ ಪ್ರಮುಖ ಕಚೇರಿಗಳಿಗೆ ದೀಪಾಲಂಕಾರ ಮಾಡಲಾಗಿದೆ. ಜೊತೆಗೆ ನಗರದ ಹೊಟೆಲ್ ಗಳಿಗೂ ದೀಪಾಲಂಕಾರ ಮಾಡಲಾಗಿದ್ದು, ಇಡೀ ಜಗಮಗಿಸುತ್ತಿದೆ.
ಚನ್ನಮ್ಮ ವೃತ್ತಕ್ಕೆ ವಿಶೇಷ ಕಳೆ: ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಈ ಬಾರಿ ಕರ್ನಾಟಕ ರಾಜ್ಯೋತ್ಸವ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ಕಾರಣ ಚನ್ನಮ್ಮ ವೃತ್ತದಲ್ಲಿ ಹಳದಿ ಕೆಂಪು ಬಣ್ಣದ ದೀಪಾಲಂಕಾರ ಮಾಡಲಾಗಿದೆ. ಹಳದಿ, ಕೆಂಪು ಬಣ್ಣದಿಂದ ವಸ್ತ್ರಗಳನ್ನು ಉಪಯೋಗಿಸಿ ಅತ್ಯಾಕರ್ಷಕ ವೇದಿಕೆ ನಿರ್ಮಿಸಲಾಗಿದೆ. ಕನ್ನಡಿಗರನ್ನು ಸ್ವಾಗತಿಸಲು ಕಾಕತಿವೇಸ್ ರಸ್ತೆಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಮಂಟಪ ನಿರ್ಮಿಸಲಾಗಿದ್ದು, ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಕನ್ನಡಿಗರನ್ನು ಪುಷ್ಪವೃಷ್ಟಿ ಮೂಲಕ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಕನ್ನಡ ಸಾಹಿತ್ಯ ಭವನ, ಗಣಪತಿ ಗಲ್ಲಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಕನ್ನಡ ಧ್ವಜ ಹಾಗೂ ಕೊರಳು ವಸ್ತ್ರದ ಮಾರಾಟ ಭರದಿಂದ ಸಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಬಾವುಟಗಳು ರಾರಾಜಿಸುತ್ತಿವೆ.ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ನವೆಂಬರ್1ರಂದು ಬೆಳಗ್ಗೆ 10.30ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಲ. ಜಾರಕಿಹೊಳಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿ ದೇವಿಯ ಪೂಜೆ ಸಲ್ಲಿಸಿ ಕರ್ನಾಟಕ ರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ.
ಜಿಲ್ಲಾಡಳಿತ ವತಿಯಿಂದ ನವೆಂಬರ್ 2ರಂದು ಸಂಜೆ 5.30 ಗಂಟೆಗೆ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಉತ್ತರ ವಿಧಾನಸಭೆ ಶಾಸಕ ಆಸೀಫ್ (ರಾಜು) ಸೇಠ್, ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ, ನವದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ವಾಯವ್ಯ ಸಾರಿಗೆ ನಿಗಮ ಅಧ್ಯಕ್ಷ ಭರಮಗೌಡ ಕಾಗೆ, ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಉಪಸ್ಥಿತರಿರುವರು.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ಕರ್ನಾಟಕ ರಾಜ್ಯೋತ್ಸವ ದಿನವಾದ ನವೆಂಬರ್ 1 ರಂದು ಬೆಳಗ್ಗೆ 6 ರಿಂದ 7 ಗಂಟೆ ವರೆಗೆ ಸಾರ್ವಜನಿಕ ದೇವಾಲಯ, ಮಂದಿರ, ಮಸೀದಿ, ಚರ್ಚ್, ಗುರುದ್ವಾರ, ಬೌದ್ಧ ಮಂದಿರ, ಜೈನ್ ಬಸದಿ ಹಾಗೂ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.