ಶ್ರೀಮಂಗಲ: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಪಟ್ಟಣದಲ್ಲಿ 5 ಗ್ರಾಮಗಳನ್ನೊಳಗೊಂಡ ಮಾಜಿ ಸೈನಿಕರು, ತಮ್ಮದೇ ಹಣದಲ್ಲಿ ನಿರ್ಮಿಸಿ 2025ನೇ ಅಕ್ಟೋಬರ್ ತಿಂಗಳಿನಲ್ಲಿ ಲೋಕಾರ್ಪಣೆಗೊಂಡ ಅಮರ್ ಜವಾನ್ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಹಾಗೂ ಹುತಾತ್ಮ ಯೋಧರಿಗೆ ಗೌರವಾರ್ಪಣೆಯನ್ನು, ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಹುದಿಕೇರಿ ಗ್ರಾಮದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಲ್ಯಮಿದೇರೀರ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ ಅವರು ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಕಾರ್ಗಿಲ್ ಯುದ್ಧ ಯುದ್ಧವೇ ಆಗಿರಲಿಲ್ಲ, ಅದೊಂದು ಆಪರೇಷನ್ ವಿಜಯ್ ಆಗಿತ್ತು. ಕೊಡಗು ಜಿಲ್ಲೆ 3800 ರಿಂದ 4700 ಅಡಿ ಎತ್ತರ ಇದೆ, ನಮ್ಮ ವಾತಾವರಣವನ್ನು ನಮಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ, ಆದರೆ ಕಾರ್ಗಿಲ್ ಡ್ರಾಸ್ ಮತ್ತು ಬಾಲ್ಜಿತ್ ಬೆಟ್ಟಗಳು 16,000 ದಿಂದ 18000 ಅಡಿ ಎತ್ತರ ಇದೆ. ಅಲ್ಲಿ ನಮ್ಮ ಸೈನಿಕರು ಹೇಗೆ ಯುದ್ಧ ಮಾಡಿರಬಹುದು, ಹೇಗೆ ಜೀವಿಸಿರಬಹುದು ಎಂದು ನೆನಪಿಸಿಕೊಂಡರು.ಕೊಡಗಿನ ನಾಪೋಕ್ಲು ಭಾಗದ ಬಾಳೆಯಡ ಮುತ್ತಣ್ಣ ಅವರ ಮಗ ಬಿ. ಎಂ ಕಾರ್ಯಪ್ಪ ಅವರು ಯುದ್ಧ ಮಾಡಿದ ರೀತಿಯನ್ನು ಈ ಸಂದರ್ಭ ತಿಳಿಸಿದರು. ಯುದ್ಧ ಆಗಲಿ, ಸೈನ್ಯದಲ್ಲಾಗಲಿ, ಭಾಗವಹಿಸಲು ಹಣೆಯಲ್ಲಿ ಬರೆದಿರಬೇಕು. ಆಗಿನ ಕಾಲದಲ್ಲಿ ಕೊಡಗಿನಲ್ಲಿ 13 ಕ್ಕೆ ಒಂದು ಜನ ರಕ್ಷಣಾ ಪಡೆಯಲ್ಲಿ ಇದ್ದರು, ಪಂಜಾಬಿನಲ್ಲಿ 19ಕ್ಕೆ ಒಂದು ಇದ್ದರೂ ಆದರೆ ಈಗಿನ ಕಾಲದಲ್ಲಿ ನೂರಕ್ಕೆ ಒಬ್ಬರು ಸೇನೆಯಲ್ಲಿ ಸೇರುವುದು ಕಷ್ಟ ಅದರಿಂದ ಯುವಕರನ್ನು ಆದಷ್ಟು ಸೇನೆಗೆ ಸೇರಿಸಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹುದಿಕೇರಿ ಗ್ರಾಮದ ಮಾಜಿ ಸೈನಿಕ ಸಂಫದ ಅಧ್ಯಕ್ಷ ಬಲ್ಯಮಿದೇರಿರ ಪ್ರಕಾಶ್ ಅವರು, ಹುದಿಕೇರಿ ಗ್ರಾಮದಲ್ಲಿ ಸ್ಮಾರಕ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ನೀಡಿದರಲ್ಲದೆ, ಸೈನ್ಯದಲ್ಲಿದ್ದಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ಆಗಿದೆ, ಆದರೆ ಸಮವಸ್ತ್ರ ಧರಿಸಿದಾಗ ನಮಗಿರುವ ಧೈರ್ಯ ಈಗ ಇರುವುದಿಲ್ಲವೆಂದರಲ್ಲದೆ ಮುಂದಿನ ದಿನಗಳಲ್ಲಿ ಬರುವಂತಹ ರಾಷ್ಟ್ರೀಯ ಹಬ್ಬಗಳನ್ನು ಈ ಭಾಗದ ಮಾಜಿ ಸೈನಿಕರು ಹಾಗೂ ಸಾರ್ವಜನಿಕರು ಒಗ್ಗೂಡಿ ಆಚರಣೆ ಮಾಡಿಕೊಂಡು ಬರುವ ಎಂದು ಮನವಿ ಮಾಡಿಕೊಂಡರು.

ಮತ್ತೋರ್ವ ಮುಖ್ಯ ಅತಿಥಿ ಹಾಗೂ ನಿವೃತ್ತ ಎಡಿಎಲ್‌ಆರ್ ಬಾನಂಗಡ ಅರುಣ್ ಮಾತನಾಡಿ, ಗ್ರಾಮದಲ್ಲಿ ಸ್ಮಾರಕ ನಿರ್ಮಾಣ ಮಾಡಿರುವುದು ಗ್ರಾಮಸ್ಥರಿಗೆ ಹೆಮ್ಮೆಯ ವಿಷಯ, ಅಲ್ಲದೆ ಸರ್ಕಾರದಿಂದ ದೊರೆಯುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ತನ್ನ ಅಧಿಕಾರ ಅವಧಿಯಲ್ಲಿ ಸಂಘದ ಅಧ್ಯಕ್ಷರು ಮನವಿ ಮಾಡಿಕೊಂಡ ಮೇರೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿ 10 ಸೆಂಟ್ ಜಾಗದ ಸರ್ವೆ ಕಾರ್ಯ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ದಾಖಲೆಗಳನ್ನು ಕಳಿಸಿರುತ್ತೇನೆ. ಮುಂದಿನ ದಿನಗಳಲ್ಲಿ ಸಂಘಕ್ಕೆ ಜಾಗ ದೊರೆಯಲಿದೆ ಎಂದರು.

ಈ ಸಂದರ್ಭ ಹುದಿಕೇರಿ ಮಾಜಿ ಸೈನಿಕರ ಸಂಘದ ವತಿಯಿಂದ ವೀರ ಹುತಾತ್ಮ ಯೋಧ ಕೋಳೆರ ಸವೀನ್ ಅವರ ತಾಯಿ ನಂಜಮ್ಮ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಂಜಮ್ಮ ಅವರು ಕಾರ್ಯಕ್ರಮದಲ್ಲಿ ನೆರೆದವರಿಗೆ ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.ಸಂಘಟನಾ ಕಾರ್ಯದರ್ಶಿ ಕಿರಿಯಮಾಡ ಎ. ಮಿಲನ್ ಗಣಪತಿ ಅವರು ಹುತಾತ್ಮ ಯೋಧರಲ್ಲಿ ಒಬ್ಬರಾದಂತಹ ಕ್ಯಾಪ್ಟನ್ ವಿಕ್ರಂ ಅವರ ಸಾಧನೆ ಹಾಗೂ ಜೀವನ ಚರಿತ್ರೆಯನ್ನು ನೆರೆದಿದ್ದವರಿಗೆ ವಿವರಿಸಿದರು. ಮಂಡೇಚಂಡ ದಿನೇಶ್ ಬೆಳ್ಳಿಯಪ್ಪ ಅವರು ಕಾರ್ಯಕ್ರಮದಲ್ಲಿ ನಡೆದಿದ್ದವರನ್ನು ಸ್ವಾಗತಿಸಿ, ವಂದಿಸಿದರು. ಈ ಸಂದರ್ಭ ಹುದಿಕೇರಿ ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಚೆಕ್ಕೇರ ಎಂ. ರಮೇಶ್, ಕಾರ್ಯದರ್ಶಿ ಬೊಜ್ಜಂಗಡ ಎಂ. ತಿಮ್ಮಯ್ಯ, ಸಂಘಟನಾ ಕಾರ್ಯದರ್ಶಿ ಕಿರಿಯಮಾಡ ಎ. ಮಿಲನ್ ಗಣಪತಿ, ಖಜಾಂಚಿ ಬೊಳ್ಳಜೀರ ಪಿ. ಕಿಶೋರ್, ಜಂಟಿ ಕಾರ್ಯದರ್ಶಿ ಬೊಳ್ಳಿಮಾಡ ಪಿ. ಬಿನು ಕುಮಾರ್, ನಿರ್ದೇಶಕ ಮುಲ್ಲೇಂಗಡ ಜಯ ಉತ್ತಯ್ಯ, ಹುದಿಕೇರಿ ಪೊಲೀಸ್ ಉಪಠಾಣೆಯ ಎಎಸ್‌ಐ ಆಂಜಪಂಡ ಕೆ ಸುಕುಮಾರ್, ವಿ ಎಸ್ ಎಸ್ ಏನ್ ಬ್ಯಾಂಕ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ್ ಮುತ್ತಪ್ಪ, ಸಂಘದ ಸಲಹೆಗಾರ ಬಯವಂಡ ಯು. ವಿಶ್ವ ಕಾಳಪ್ಪ, ಹಿರಿಯರಾದ ಮಂಡಂಗಡ ಪೂವಯ್ಯ, ಸಂಘದ ಮಾಜಿ ಸೈನಿಕರು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು, ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.