ಗದಗ: ನಗರದ ಕರಿಯಮ್ಮದೇವಿಯ 97ನೇ ವರ್ಷದ ಜಾತ್ರಾ ಮಹೋತ್ಸವವು ಮಾ. 18ರಿಂದ 20ರ ವರೆಗೆ ಸಡಗರ, ಸಂಭ್ರಮದಿಂದ ಜರುಗಲಿದೆ ಎಂದು ಜಾತ್ರಾ ಸಮಿತಿಯ ಗೌರವಾಧ್ಯಕ್ಷ ಎಲ್.ಡಿ. ಚಂದಾವರಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ. 18ರಂದು ಬೆಳಗ್ಗೆ 8ಕ್ಕೆ ಕರಿಯಮ್ಮದೇವಿ ಬೆಳ್ಳಿ ಉತ್ಸವ ಮೂರ್ತಿ ಸಾರ್ವಜನಿಕರಿಗೆ ದರ್ಶನಕ್ಕೆ ಇಡಲಾಗುವುದು. ನಂತರ ಚಂಡಿಕಾ ಹೋಮ ಹಾಗೂ ಜಾತ್ರಾ ಪ್ರಾರಂಭೋತ್ಸವ ಬೆಳಗ್ಗೆ 10ಕ್ಕೆ ಜರುಗಲಿದೆ. ಕಾರ್ಯಕ್ರಮವನ್ನು ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಉದ್ಘಾಟಿಸಲಿದ್ದಾರೆ. ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ರಂಗೋಲಿ, ಚಿತ್ರಕಲಾ ಮತ್ತು ವಚನಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಬಿ. ಹಡಗಲಿ ಹಾಗೂ ತಂಡದವರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಂಜೆ 6ಕ್ಕೆ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಜಾತ್ರಾ ಸಮಿತಿ ಅಧ್ಯಕ್ಷ ಶಂಕರ ಹಾನಗಲ್ಲ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ, ಅಭಿಯಂತರ ಲಕ್ಷ್ಮಣ ಜೋಗದಂಡಕರ, ನಗರಸಭೆ ಸದಸ್ಯೆ ವಿಜಯಲಕ್ಷ್ಮಿ ದಿಂಡೂರ, ನಿಂಗನಗೌಡ ಮರಿಗೌಡ್ರ ಆಗಮಿಸುವರು. ರಾಜಶೇಖರ ಹಾಗೂ ಸಂಗಡಿಗರಿಂದ ಸಂಗೀತ ಸೇವೆ ಜರುಗಲಿದೆ.ಮಾ. 19ರಂದು ಸಂಜೆ 6ಕ್ಕೆ ಕರಿಯಮ್ಮದೇವಿಯ ಮಹಾ ರಥೋತ್ಸವ ಜರುಗಲಿದ್ದು, ಇದಕ್ಕೂ ಮೊದಲು, ಮಧ್ಯಾಹ್ನ 2.30ಕ್ಕೆ ಕರಿಯಮ್ಮದೇವಿಯ ಪಾಲಕಿ ಉತ್ಸವ, ಕುಂಭಮೇಳ ಹಾಗೂ ವಿವಿಧ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ಆರಂಭವಾಗಲಿದೆ. ಸಂಜೆ 7.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಕರಿಯಮ್ಮದೇವಿ ಸಮುದಾಯ ಭವನ ಮತ್ತು ಸಂಕೀರ್ಣದ ಶಂಕುಸ್ಥಾಪನೆ ನೆರವೇರಿಸುವರು. ಅತಿಥಿಗಳಾಗಿ ಮಾಜಿ ಸಚಿವ ಸಿ.ಸಿ. ಪಾಟೀಲ, ನಗರಸಭೆ ಮಾಜಿ ಅಧ್ಯಕ್ಷ ಎಲ್.ಡಿ. ಚಂದಾವರಿ, ಪರುಶುರಾಮ ಖಟವಟೆ ಮುಂತಾದವರು ಪಾಲ್ಗೊಳ್ಳುವರು. ರಾತ್ರಿ 8ಕ್ಕೆ ದಾನಿಗಳಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮಾ. 20ರಂದು ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ನೆರವೇರಲಿದೆ. ದತ್ತಾ ಡೆವಲಪರ್ಸ್‌ನ ಕಿರಣ ಭೂಮಾ ಉದ್ಘಾಟಿಸುವರು. ಸಂಜೆ 6ಕ್ಕೆ ಜಾತ್ರೆಯ ವಿಶೇಷ ಆಕರ್ಷಣೆಯಾದ ಕಡುಬಿನ ಕಾಳಗ ಜರುಗಲಿದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.
ಅಧ್ಯಕ್ಷತೆಯನ್ನು ಕರಿಯಮ್ಮದೇವಿ ಬಡಾವಣೆ ಸುಧಾರಣಾ ಸಮಿತಿ ಅಧ್ಯಕ್ಷ ಸಿ.ಕೆ. ಮಾಳಶೆಟ್ಟಿ ವಹಿಸುವರು. ಅತಿಥಿಗಳಾಗಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ನಗರಸಭೆ ಮಾಜಿ ಸದಸ್ಯ ರಾಮಕೃಷ್ಣ ಪಾಂಡ್ರೆ, ಬಾಪುಗೌಡ ಕರಿಸೋಮನಗೌಡ್ರ ಆಗಮಿಸುವರು. ಇದೇ ಸಂದರ್ಭದಲ್ಲಿ ದಾನಿಗಳಿಗೆ ಸನ್ಮಾನ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಸಿ.ಕೆ. ಮಾಳಶೆಟ್ಟಿ, ಜಾತ್ರಾ ಸಮಿತಿ ಅಧ್ಯಕ್ಷ ಶಂಕರ ಹಾನಗಲ್ಲ, ಉಪಾಧ್ಯಕ್ಷ ಜಿ.ಕೆ. ತಮ್ಮಣ್ಣವರ, ಎಚ್.ಬಿ. ಶಿರಗುಂಪಿ, ಪ್ರಧಾನ ಕಾರ್ಯದರ್ಶಿ ಜೆ.ಬಿ. ಗಾರವಾಡ ಹಾಗೂ ಪದಾಧಿಕಾರಿಗಳಾದ ಬಿ.ಎಸ್. ಕಂಠಿ, ವಿಜಯಲಕ್ಷ್ಮಿ ದಿಂಡೂರ, ಜಗದೀಶ ಪೂಜಾರ, ಶಶಿಧರ ದಿಂಡೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.