ಧಾರವಾಡ:
ಉಪ್ಪಿನ ಬೆಟಗೇರಿಯ ಶ್ರೀಗುರು ವಿರೂಪಾಕ್ಷೇಶ್ವರ ಅಂಗವಾಗಿ ಜರುಗುತ್ತಿರುವ ಶರಣರ ಜೀವನ ದರ್ಶನ ಪ್ರವಚನದಲ್ಲಿ 2026ನೇ ಸಾಲಿನ ಲವಣಗಿರಿ ಪ್ರಶಸ್ತಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿಗೆ ನೀಡಿ ಗೌರವಿಸಲಾಯಿತು.ಗೌರವ ಸ್ವೀಕರಿಸಿ ಮಾತನಾಡಿದ ನ್ಯಾಯಮೂರ್ತಿ, ಮನುಷ್ಯ ನ್ಯಾಯದ ಮಾರ್ಗ ಬಿಟ್ಟು ಸಂಪಾದಿಸಿದ ಹಣ, ಆಸ್ತಿಗಳೆಲ್ಲವು ಆತನ ಅವನತಿಗೆ ಆಹ್ವಾನ ನೀಡಿದಂತಾಗುತ್ತದೆ. ಸಮಾಜದಲ್ಲಿ ಉಂಟಾದ ಅನ್ಯಾಯ ಸರಿಪಡಿಸುವ ಕ್ರಾಂತಿ ಬಸವಣ್ಣನವರ ಕಾಲದಲ್ಲಿ ನಡೆಯಿತು. ಶಿವಶರಣರ ವಚನಾಮೃತ ಕೇಳುವುದರಿಂದ ಮನಸ್ಸಿನ ದುರ್ಗುಣ ನಿವಾರಣೆಯಾಗಿ ಸದ್ಗುಣಗಳು ಲಭಿಸುತ್ತವೆ ಎಂದು ಹೇಳಿದರು.
ತಂದೆ, ತಾಯಿ, ಗುರುವಿನ ಮಾರ್ಗದಲ್ಲಿ ನಡೆದು, ಅವರನ್ನು ಗೌರವದಿಂದ ಕಾಣಬೇಕು. ಮಕ್ಕಳಿಗೆ ರಾಷ್ಟ್ರ ಪ್ರೇಮ, ಉದಾತ್ತ ವಿಚಾರ ತಿಳಿಸಬೇಕು. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿಸ್ವಾರ್ಥ ಭಾವದಿಂದ ಸೇವೆ ಮಾಡಬೇಕು ಎಂದರು.ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಬಸವಾದಿ ಶಿವಶರಣರ ಜೀವನ ಚರಿತ್ರೆ ಅಧ್ಯಯನ ಮಾಡಿ ಅಳವಡಿಸಿಕೊಂಡರೆ ಜೀವನ ಪಾವನವಾಗಲಿದೆ ಎಂದು ತಿಳಿಸಿದರು.
ಘಟಪ್ರಭಾ-ಮೂಡಲಗಿ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ವೀರೇಶ್ವರ ಶಾಸ್ತ್ರೀಗಳು ಅಲ್ಲಮ ಪ್ರಭುದೇವರ ಪ್ರವಚನ ಹೇಳಿದರು. ವಕೀಲ ಎ.ಸಿ. ಚಾಕಲಬ್ಬಿ ಅಧ್ಯಕ್ಷತೆ ವಹಿಸಿದ್ದರು. ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ, ನ್ಯಾಯವಾದಿ ರವೀಂದ್ರ ಯಲಿಗಾರ, ಪಿ.ಎಚ್. ನೀರಲಕೇರಿ, ಮಹದೇವ ಕುಡವಕ್ಕಲಿಗೇರ, ರವಿ ತೋರಣಗಟ್ಟಿ ಶಶಿಧರ ಸಾಲಿ, ಸಿದ್ದಣ್ಣ ಕಂಬಾರ, ಎಸ್.ಎನ್. ಮೇಟಿ, ಅನಿಲ ನಂದೂರ, ಜಾನಪದ ಕಲಾವಿದ ರಮೇಶ ಕುರುಬಗಟ್ಟಿ ಸೇರಿದಂತೆ ಕಲ್ಲೂರ, ಕೊಟಬಾಗಿ, ಜೀರಿಗಿವಾಡ ಗ್ರಾಮಗಳ ಭಕ್ತರಿದ್ದರು. ಎಸ್.ಕೆ. ಕೊಡಿ, ರಮೇಶ ಮಡಿವಾಳರ ನಿರ್ವಹಿಸಿದರು.