ಕಾರ್ಕಳ: ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ನಗರದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ಮೊಣಕಾಲು (ಮಂಡಿ) ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.
63 ವರ್ಷದ ಮಹಿಳೆಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರು 2024ರಿಂದಲೇ ಡಾ. ಸುನಿಲ್ ಬಾಳಿಗಾ ಮತ್ತು ಡಾ. ಫ್ರಾಂಕ್ಲಿನ್ ನೇತೃತ್ವದ ಮೂಳೆ ಚಿಕಿತ್ಸಕರ ತಂಡದ ಆರೈಕೆಯಲ್ಲಿ ಇದ್ದರು. ಫಿಸಿಯೋಥೆರಪಿ ಸೇರಿದಂತೆ ಶಸ್ತ್ರಚಿಕಿತ್ಸೆಯೇತರ ಚಿಕಿತ್ಸೆಗಳು ಫಲಕಾರಿಯಾಗದ ಹಿನ್ನೆಲೆಯಲ್ಲಿ, ಸಮಗ್ರ ಮೌಲ್ಯಮಾಪನದ ಬಳಿಕ ಶಸ್ತ್ರಚಿಕಿತ್ಸೆಗೆ ಮುಂದಾಗಲಾಯಿತು.ಉಡುಪಿ ಟಿಎಂಎ ಪೈ ಆಸ್ಪತ್ರೆಯ ತಜ್ಞ ಡಾ. ಅರವಿಂದ್ ಶಾನಭಾಗ್ ಅವರು ಸ್ಥಳೀಯ ತಂಡದೊಂದಿಗೆ ಸೇರಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದರು. ಶಸ್ತ್ರಚಿಕಿತ್ಸೆ ನಂತರ ರೋಗಿಯನ್ನು ಎಚ್‌ಡಿಯುದಲ್ಲಿ ನಿಗಾದಲ್ಲಿ ಇರಿಸಲಾಗಿದ್ದು, ಮೊದಲ ದಿನವೇ ಫಿಸಿಯೋಥೆರಪಿಸ್ಟ್ ಮಾರ್ಗದರ್ಶನದಲ್ಲಿ ನಡೆದು ಚೇತರಿಕೆಯ ಸೂಚನೆ ನೀಡಿದರು.ಈ ಸಾಧನೆ ಕಾರ್ಕಳದಲ್ಲಿ ಸುಧಾರಿತ ಮೂಳೆ ಚಿಕಿತ್ಸಾ ಸೇವೆಗೆ ಮಹತ್ವದ ಹೆಜ್ಜೆಯಾಗಿದ್ದು, ಸ್ಥಳೀಯರು ದೂರದ ನಗರಗಳಿಗೆ ತೆರಳುವುದನ್ನು ಕಡಿಮೆ ಮಾಡಲಿದೆ.
ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ್ ಬಲ್ಲಾಳ ಅವರು ವೈದ್ಯರು, ನರ್ಸಿಂಗ್, ಅರಿವಳಿಕೆ ಹಾಗೂ ಫಿಸಿಯೋಥೆರಪಿ ತಂಡಗಳ ಒಗ್ಗಟ್ಟಿನ ಪ್ರಯತ್ನವನ್ನು ಶ್ಲಾಘಿಸಿ, ಮುಂದೆಯೂ ಉತ್ತಮ ಆರೋಗ್ಯ ಸೇವೆ ವಿಸ್ತರಣೆಗೆ ಬದ್ಧತೆ ವ್ಯಕ್ತಪಡಿಸಿದರು.