ಮಂಗಳೂರು: ಕರ್ಣಾಟಕ ಬ್ಯಾಂಕ್‌ ಮಂಗಳೂರಿನ ತನ್ನ ಮುಖ್ಯ ಕಚೇರಿಯಲ್ಲಿ ಥರ್ಡ್ ಪಾರ್ಟಿ ಪ್ರಾಟಕ್ಟ್ (ಟಿಪಿಪಿ) ಸಮ್ಮೇಳನ ಆಯೋಜಿಸಿ, 2026–27ನೇ ಹಣಕಾಸು ವರ್ಷದ ಕಾರ್ಯತಂತ್ರ ರೂಪುರೇಷೆಗಳ ಕುರಿತು ಹಿರಿಯ ಅಧಿಕಾರಿಗಳು, ಪ್ರಾದೇಶಿಕ ತಂಡಗಳು ಹಾಗೂ ಚಾನೆಲ್ ಪಾಲುದಾರರೊಂದಿಗೆ ಸಮಗ್ರ ಚರ್ಚೆ ನಡೆಸಿದರು.ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಎಸ್.ಭಟ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಒಂದು ದಶಕದಲ್ಲಿ ವಿಮಾ ಕ್ಷೇತ್ರದಲ್ಲಿ ಸಂಭವಿಸಿರುವ ಮಹತ್ವದ ಬದಲಾವಣೆಗಳು ಶುಲ್ಕ ಆಧಾರಿತ ಆದಾಯ ಹೆಚ್ಚಿಸುವಲ್ಲಿ ತೃತೀಯ ಪಕ್ಷ ಉತ್ಪನ್ನಗಳ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯ ತಿಳಿಸಿದರು.

ಗ್ರಾಹಕರ ರಕ್ಷಣೆ, ಪಾರದರ್ಶಕತೆ ಮತ್ತು ಸುಶಾಸನಕ್ಕೆ ನಿಯಂತ್ರಣ ಸಂಸ್ಥೆಗಳು ಹೆಚ್ಚಿನ ಮಹತ್ವ ನೀಡುತ್ತಿದೆ. ಜೊತೆಗೆ ನೈತಿಕ ಹಾಗೂ ಗ್ರಾಹಕರ ಅಗತ್ಯ ಆಧಾರಿತ ಮಾರಾಟ ಪದ್ಧತಿಗಳನ್ನು ಅನುಸರಿಸುವುದು ಮತ್ತು ತಂತ್ರಜ್ಞಾನ ಅಳವಡಿಕೆ ಹಾಗೂ ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವಿಕೆಯ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದರು.

ಸಮ್ಮೇಳನದಲ್ಲಿ ವಿಮಾ ಕ್ಷೇತ್ರದ ಉದಯೋನ್ಮುಖ ಪ್ರವೃತ್ತಿಗಳು, ಮಾರುಕಟ್ಟೆ ಅವಕಾಶಗಳು, ನಿಯಂತ್ರಣಾತ್ಮಕ ಬೆಳವಣಿಗೆಗಳು, ಅನುಸರಣೆ ನಿರೀಕ್ಷೆಗಳು, ಗ್ರಾಹಕ ಕೇಂದ್ರಿತ ಮಾರಾಟ ಪದ್ಧತಿಗಳು, ಯಶಸ್ವಿ ವ್ಯವಹಾರ ಮಾದರಿಗಳು, ಪ್ರದೇಶವಾರು ಹಾಗೂ ಉತ್ಪನ್ನವಾರು ಬೆಳವಣಿಗೆ ತಂತ್ರಗಳು, ಉತ್ಪನ್ನಗಳ ಕಸ್ಟಮೈಸೇಶನ್, ಗ್ರಾಹಕ ತೊಡಗಿಸಿಕೊಳ್ಳುವಿಕೆ, ತಂತ್ರಜ್ಞಾನ ಮತ್ತು ವಿಶ್ಲೇಷಣೆಯ ಬಳಕೆ ಸೇರಿದಂತೆ ಹಲವು ಮಹತ್ವದ ಕುರಿತುಚರ್ಚೆ ನಡೆಯಿತು.