ಮಂಗಳೂರು: ಮಳೆ ಆರಂಭಕ್ಕೆ ಮೊದಲೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿದ್ದರೂ, ಮಂಗಳೂರು ನಗರದ ಹಲವೆಡೆ ಕಾಮಗಾರಿ ಈಗಲೂ ನಡೆಯುತ್ತಿದ್ದು, ಇದೀಗ ಮಳೆ ಆರಂಭಗೊಂಡಿದ್ದು, ಪರಿಣಾಮ ಈ ಮಳೆಗಾಲದಲ್ಲೂ ನಗರದ ವಿವಿಧೆಡೆ ಕೃತಕ ನೆರೆ ಸಹಿತ ಸಮಸ್ಯೆಗಳು ಉಂಟಾಗುವ ಆತಂಕ ವ್ಯಕ್ತವಾಗಿದೆ.
ಪ್ರತೀ ಮಳೆಗಾಲದಲ್ಲಿ ಸಮಸ್ಯೆ ಎದುರಿಸುತ್ತಿರುವ ನಗರದ ಪಂಪ್‌ವೆಲ್‌ನಲ್ಲಿ ಸರ್ವಿಸ್ ರಸ್ತೆ ಮುಳುಗಡೆಯಾಗುತ್ತಿರುವ ಸಮಸ್ಯೆಗೆ ಪರಿಹಾರದ ಭಾಗವಾಗಿ ರಸ್ತೆ ಎತ್ತರಿಸುವ, ಚರಂಡಿ ವಿಸ್ತರಣೆ ಯೋಜನೆ ರೂಪಿಸಲಾಗಿತ್ತು. ಆದರೆ ಕಾಮಗಾರಿ ಆರಂಭಗೊಂಡರೂ ಇನ್ನೂ ಪೂರ್ಣಗೊಂಡಿಲ್ಲ. ಚರಂಡಿಯನ್ನು 2 ಫೀಟ್‌ನಿಂದ 10 ಫೀಟ್ ಅಗಲಗೊಳಿಸಿ ವಿಸ್ತರಿಸುವ ಕಾಮಗಾರಿ ನಡೆಸಲಾಗಿದ್ದರೂ ಪೂರ್ಣಪ್ರಮಾಣದಲ್ಲಿ ಮುಗಿದಿಲ್ಲ. ಇನ್ನೊಂದೆಡೆ ಸರ್ವಿಸ್ ರಸ್ತೆ ಎತ್ತರಿಸುವ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಕೆಲವು ದಿನಗಳು ಕಾಮಗಾರಿ ಮುಗಿಯಲು ಬೇಕಾಗಬಹುದು.ಅಲ್ಲದೇ ಪಂಪ್‌ವೆಲ್ ಸರ್ವಿಸ್ ರಸ್ತೆ ಭಾಗದಲ್ಲಿ ನಡೆಯುತ್ತಿರುವ ಅರೆಬರೆ ಕಾಮಗಾರಿ ಈ ಮಳೆಗಾಲದಲ್ಲೂ ರಸ್ತೆ ಮುಳುಗಡೆ, ಬಾರೀ ಮಳೆ ಸಂದರ್ಭದಲ್ಲಿ ಅವಾಂತರಗಳನ್ನು ತಂದೊಡ್ಡಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ರಸ್ತೆ ಬದಿಯ ಚರಂಡಿ ಭಾಗಕ್ಕೆ ಇನ್ನಷ್ಟು ಸುರಕ್ಷತಾ ತಡೆ ವಹಿಸಬೇಕಾಗಿದೆ. ಶೀಘ್ರವಾಗಿ ಕಾಮಗಾರಿ ಮುಗಿಸಲು ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಪಡೀಲ್ ಅಂಡರ್‌ಪಾಸ್‌ನಲ್ಲಿ ಪಂಪಿಂಗ್!: ಪಡೀಲ್-ಬಜಾಲ್ ಮಾರ್ಗವಾಗಿ ಉಳ್ಳಾಲ, ತಲಪಾಡಿ ಮತ್ತು ಕೇರಳ ಭಾಗಗಳಿಗೆ ಸಂಪರ್ಕಿಸುವ ಪಡೀಲ್ ಎಂಬಲ್ಲಿನ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಲ್ಲುವುದನ್ನು ತಡೆಯಲು ಅಂಡರ್ ಪಾಸ್‌ನಿಂದಲೇ ನೀರು ಹೊರಕ್ಕೆ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಆದರೂ ಜೋರು ಮಳೆ ಸಂದರ್ಭದಲ್ಲಿ ಅಂಡರ್‌ಪಾಸ್ ಮುಳುಗಡೆ ಭೀತಿ ಎದುರಾಗಿದೆ. ಪಂಪ್ ವ್ಯವಸ್ಥೆ ಅಳವಡಿಸಿ ನೀರನ್ನು ಹೊರಹಾಕುವ ಯೋಜನೆ ರೂಪಿಸಲಾಗಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ರಸ್ತೆ ಜಲಾವೃವಗುವ ಆತಂಕ !: ನಗರದಲ್ಲಿ ಪ್ರತೀ ವರ್ಷ ರಸ್ತೆ ಜಲಾವೃತಗೊಳ್ಳುವ ಕಡೆಗಳಲ್ಲಿ ತಕ್ಕಮಟ್ಟಿನ ಪರಿಹಾರ ಕಾಮಗಾರಿ ನಡೆಸಿದರೂ, ಸಮರ್ಪಕ ಕಾಮಗಾರಿ ಇನ್ನೂ ನಡೆಯದೇ ಪೂರ್ಣಗೊಂಡಿಲ್ಲ. ನಗರದ ಹಲವೆಡೆ ರಸ್ತೆಗಳಿಗೆ ನೀರು ನುಗ್ಗುವ ಭೀತಿ ಈ ವರ್ಷವೂ ಮುಂದುವರಿದಿದೆ. ಅಸಮರ್ಪಕ ಚರಂಡಿ ವ್ಯವಸ್ಥೆ, ರಾಜಕಾಲುವೆ ದುಸ್ಥಿತಿ, ಅರ್ಧಂಬರ್ಧ ಕಾಮಗಾರಿ, ರಸ್ತೆ ಅಗೆತ ಮೊದಲಾದ ಕಾರಣಗಳಿಂದ ಈ ವರ್ಷವೂ ನಗರದಲ್ಲಿ ಮಳೆಗಾಲ ಸಮಸ್ಯೆ ಉಂಟಾಗಿದೆ. ಮಳೆ ನೀರು ಹರಿದು ಹೋಗಲು ನಗರದ ಹಲವೆಡೆ ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವುದೇ ನಗರದಲ್ಲಿ ಮಳೆಗಾಲದಲ್ಲಿ ಸಮಸ್ಯೆ ಉಂಟಾಗಲು ಕಾರಣವಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.ಈಗಾಗಲೇ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಗರದ ಹಲವೆಡೆ ಸಮಸ್ಯೆಗಳು ಕಂಡುಬಂದಿದ್ದು, ಮುಂದಿನ ದಿನದ ಬಾರೀ ಮಳೆಗೆ ಇನ್ನಷ್ಟು ಸಮಸ್ಯೆಗಳ ಭೀತಿ ಶುರುವಾಗಿದೆ. ಚರಂಡಿ ನೀರು ರಸ್ತೆ ನುಗ್ಗುವುದು, ರಸ್ತೆ ಜಲಾವೃತ, ರಸ್ತೆ ಕಾಮಗಾರಿ ಪ್ರದೇಶಗಳಲ್ಲಿ ಸಮಸ್ಯೆಗಳು ಜೀವಂತವಾಗಿಯೇ ಉಳಿದಿದೆ.**ನಗರದ ಪಂಪ್‌ವೆಲ್‌ನಲ್ಲಿ ಚರಂಡಿ ವಿಸ್ತರಣೆ ಕಾಮಗಾರಿ ನಡೆದಿದೆ. ರಸ್ತೆ ಎತ್ತರಿಸುವ ಕಾಮಗಾರಿ ನಡೆಯುತ್ತಿದೆ. ನಂತೂರು ಸರ್ವೀಸ್ ರಸ್ತೆಯ ಸೇತುವೆ ಎತ್ತರಿಸುವ ಕಾಮಗಾರಿಗೆ ಟೆಂಡರ್ ಆಗಿದೆ. ಈ ಕಾಮಗಾರಿ ಆದಲ್ಲಿ ಸಮಸ್ಯೆಗಳು ಬಹುತೇಕ ಪರಿಹಾರ ಆಗಲಿದೆ.
- ಸಂದೀಪ್ ಗರೋಡಿ, ಮಾಜಿ ಕಾರ್ಪೋರೇಟರ್