ಮಂಗಳೂರು: ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಸಕಾಲದಲ್ಲಿ ರಕ್ತದಾನ ಮಾಡುವುದರಿಂದ ರೋಗಿಯ ಜೀವ ಉಳಿಸಲು ಸಾಧ್ಯವಿದೆ. ಪ್ರತಿಯೋಬ್ಬರು ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು. ಈ ಮೂಲಕ ಸಮಾಜದಲ್ಲಿ ರಕ್ತದ ಕೊರತೆಯಾಗದಂತೆ ಮಾಡಬಹುದು ಎಂದು ಶ್ರೀ ಭಾರತಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೃಷ್ಣ ನೀರಮೂಲೆ ಹೇಳಿದರು.

ಅವರು ಭಾನುವಾರ ಭಾರತಿ ಸಮೂಹ ಸಂಸ್ಥೆಗಳು, ರೋಟರಿ ಕ್ಲಬ್ ಹಿಲ್‌ಸೈಡ್ ಮಂಗಳೂರು, ಚೂಂತಾರು ಪ್ರತಿಷ್ಠಾನ ಮತ್ತು ಮಂಗಳೂರು ಹವ್ಯಕ ಸಭಾದ ಆಶ್ರಯದಲ್ಲಿ ನಗರದ ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತೇಜಸ್ವಿನಿ ಆಸ್ಪತ್ರೆಯ ಸಂದರ್ಶಕ ವೈದ್ಯ ಡಾ.ಮುರಲೀ ಮೋಹನ್ ಚೂಂತಾರು ಮಾತನಾಡಿ, ಪ್ರತಿ ಆರೋಗ್ಯವಂತ ಪುರುಷ 18 ವರ್ಷದ ಬಳಿಕ 65 ವರ್ಷದ ವರೆಗೆ ವರ್ಷದ ನಾಲ್ಕು ಬಾರಿ ರಕ್ತದಾನ ಮಾಡಬಹುದು. ದೇಹದಲ್ಲಿ ಹಿಮೋಗ್ಲೋಬಿನ್ ಅಂಶ 12 ಕ್ಕಿಂತ ಜಾಸ್ತಿ ಇದ್ದು ದೇಹದ ತೂಕ ೪೫ ಕೆ.ಜಿ.ಗಿಂತ ಜಾಸ್ತಿ ಇರಬೇಕು. ಮಹಿಳೆಯರು ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬಹುದು ಎಂದು ಮಾಹಿತಿ ನೀಡಿದರು.ಹವ್ಯಕ ಸಭಾ ಮಂಗಳೂರು ಅಧ್ಯಕ್ಷೆ ಗೀತಾ ದೇವಿ ಚೂಂತಾರು ಉದ್ಘಾಟಿಸಿದರು. ಸೇಡಿಯಾಪು ಚೈತ್ರ ನಾರಾಯಣ ಭಟ್ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು.ಹವ್ಯಕ ಸಭಾ ಮಂಗಳೂರು ಅಧ್ಯಕ್ಷೆ ಗೀತಾ ಗಣೇಶ, ರೋಟರಿ ಕ್ಲಬ್ ಹಿಲ್‌ಸೈಡ್‌ ಕಾರ್ಯದರ್ಶಿ ವಾಸುದೇವ ಶೆಟ್ಟಿಗಾರ್, ತೇಜಸ್ವಿನಿ ಆಸ್ಪತ್ರೆಯ ವೈದ್ಯ ಡಾ.ಸಬೀಹ ಮತ್ತಿತರರು ಇದ್ದರು. ತೇಜಸ್ವಿನಿ ಆಸ್ಪತ್ರೆಯ ತಂತ್ರಜ್ಞರು ಶಿಬಿರ ನಡೆಸಿಕೊಟ್ಟರು. ದಂತ ವೈದ್ಯೆ ಡಾ. ರಾಜಶ್ರೀ ಮೋಹನ್ ಸ್ವಾಗತಿಸಿದರು. ರೋಟರಿ ಕ್ಲಬ್‌ ಹಿಲ್‌ಸೈಡ್‌ ಅಧ್ಯಕ್ಷ ಪೀಟರ್ ಆಂಟೋನಿ ವಂದಿಸಿದರು. ಸುಮಾರು ೨೨ ಮಂದಿ ರಕ್ತದಾನ ಮಾಡಿದರು.