ಕನ್ನಡಪ್ರಭ ವಾರ್ತೆ ಸಕಲೇಶಪುರ
ಶಿಕ್ಷಕರ ಕಳ್ಳಾಟಕ್ಕೆ ಬ್ರೇಕ್ ಹಾಕಲು ಸರಕಾರ ಹೊಸದಾಗಿ ಜಾರಿಗೊಳಿಸಿರುವ ನಿಯಮಗಳು ತಾಲೂಕಿನ ಶಿಕ್ಷಕರ ಪಾಲಿಗೆ ಉರುಳಾಗಿ ಪರಿಣಮಿಸಿವೆ.ಪ್ರಸ್ತುತ ಶೈಕ್ಷಣಿಕ ವರ್ಷದ ಮಾರ್ಚ್ ತಿಂಗಳಿನಿಂದ ಜಾರಿಗೊಳಿಸಿರುವ ಕರ್ತವ್ಯ ಆ್ಯಪ್ ಹಾಗೂ ನಿರಂತರ ಆಪ್‌ಗಳು ಮಲೆನಾಡಿನ ಶಿಕ್ಷಕರ ಮನೋಸ್ಥೈರ್ಯವನ್ನು ಕುಸಿಯುವಂತೆ ಮಾಡಿವೆ.ಶಿಕ್ಷಕರ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿರುವುದನ್ನು ದೃಢಪಡಿಸಲು ಸರಕಾರ ಜಾರಿಗೊಳಿಸಿರುವ ಕರ್ತವ್ಯ ಆ್ಯಪ್ ಮೂಲಕ ಹಾಜರಾತಿಯನ್ನು ಹಾಕಬೇಕಿದೆ. ಆದರೆ, ಇದು ಮಲೆನಾಡಿನ ಗ್ರಾಮೀಣ ಭಾಗದ ಶಿಕ್ಷಕರ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದರೆ, ಮಕ್ಕಳ ಹಾಜರಾತಿ ದಾಖಲಿಸಲು ಜಾರಿಗೊಳಿಸಿರುವ ನಿರಂತರ ಆ್ಯಪ್ ಸಹ ಶಿಕ್ಷಕರ ಬೋಧನ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂಬ ಆರೋಪ ದಟ್ಟವಾಗಿ ಕೇಳಿಬರುತ್ತಿದೆ. ಶಿಕ್ಷಕರು ಬೆಳಿಗ್ಗೆ ೯.೪೫ಕ್ಕೆ ಶಾಲೆಗೆ ಕರ್ತವ್ಯಕ್ಕೆ ಆಗಮಿಸಿ ಆನ್‌ಲೈನ್ ಮೂಲಕ ಹಾಜುರಾತಿ ದಾಖಲಿಸಬೇಕಿದೆ. ಆದರೆ, ಹಾಜುರಾತಿ ಹಾಕುವುದು ಐದು ನಿಮಿಷ ವಿಳಂಬವಾದರೂ ಗೈರುಹಾಜರಿ ದಾಖಲಾಗುವುದರಿಂದ ಕರ್ತವ್ಯದಲ್ಲಿದ್ದರೂ ಸಂಬಳವಿಲ್ಲದೆ ಕೆಲಸ ಮಾಡಬೇಕಿದೆ. ಇದು ಶಿಕ್ಷಕರ ಒತ್ತಡ ಹೆಚ್ಚಿಸುತ್ತಿದೆ. ತಾಲೂಕಿನ ೧೫೦ ಪ್ರಾಥಮಿಕ ಶಾಲೆಗಳ ಪೈಕಿ ಶೇ. ೯೫ರಷ್ಟು ಶಾಲೆಗಳು ಗ್ರಾಮೀಣ ಭಾಗದಲ್ಲಿವೆ. ಅದರಲ್ಲೂ ಪಶ್ಚಿಮಘಟ್ಟದಂಚಿನ ಕುಗ್ರಾಮಗಳಲ್ಲಿ ಶೇ. ೩೦ರಷ್ಟು ಶಾಲೆಗಳಿದ್ದು, ಈ ಶಾಲೆಗಳಿಗೆ ತಲುಪಲು ಇಂದಿಗೂ ಸರ್ಕಾರಿ ಸಾರಿಗೆ ಇಲ್ಲದೆ ಇರುವುದರಿಂದ ನಾಲ್ಕರಿಂದ ಐದು ಕಿ. ಮೀ. ನಡೆದು ಶಾಲೆಗಳನ್ನು ತಲುಪಬೇಕಿದೆ. ಅಲ್ಲದೆ ಸಾರಿಗೆ ವ್ಯವಸ್ಥೆ ಇದ್ದರು ಶಾಲೆಯ ಸಮಯಕ್ಕೆ ಬಸ್‌ಗಳಿಲ್ಲದೆ ಇರುವುದು, ಇದ್ದರೂ ಸರಿಯಾದ ಸಮಯಕ್ಕೆ ಬಸ್ಸುಗಳು ಆಗಮಿಸದಿರುವುದರಿಂದ ಶಿಕ್ಷಕರು ಶಾಲೆಗೆ ತಲುಪುವುದು ವಿಳಂಭವಾಗುತ್ತಿದೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದ್ದು ಮಳೆಗಾಲದ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬೀಳುವ ಮರಗಳು ಸಹ ಸಮಸ್ಯೆ ತಂದೊಡ್ಡುತ್ತಿವೆ. ಇದರಿಂದಾಗಿ ವಾರದ ಕನಿಷ್ಠ ಎರಡರಿಂದ ಮೂರು ದಿನಗಳು ಶಿಕ್ಷಕರ ಗೈರನ್ನು ತೊರುತ್ತಿದೆ.
ಮಹಿಳಾ ಶಿಕ್ಷಕಿಯರ ಕಣ್ಣೀರು:ಅದರಲ್ಲೂ ಮಹಿಳಾ ಶಿಕ್ಷಕರ ಗೋಳು ಹೇಳತೀರದಾಗಿದ್ದು, ಮಳೆಗಾಲದಲ್ಲಿ ದ್ವಿಚಕ್ರವಾಹನದಲ್ಲಿ ಸಂಚರಿಸುವುದು ಅಸಾಧ್ಯ. ಸಾರಿಗೆ ಬಸ್‌ಗಳು ಸಹ ಸಕಾಲಕ್ಕೆ ಬಾರದೆ ಇರುವುದರಿಂದ ಮಹಿಳಾ ಶಿಕ್ಷಕರು ಕಣ್ಣೀರು ಹಾಕುತ್ತಿದ್ದಾರೆ. ಹರಸಾಹಸ ಪಟ್ಟು ಸಕಾಲಕ್ಕೆ ಶಾಲೆ ತಲುಪಿದರು ವಾರಗಳ ಕಾಲ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವೆತ್ಯಾಯದಿಂದ ನೆಟ್‌ವರ್ಕ್ ಸಮಸ್ಯೆ ತಲೆದೊರುತ್ತಿದ್ದು ನೆಟ್‌ವರ್ಕ್ ಸಮಸ್ಯೆಯಿಂದ ಆನ್‌ಲೈನ್ ಮೂಲಕ ಹಾಜರಾತಿ ಹಾಕಲು ಸಾಧ್ಯವಾಗುತ್ತಿಲ್ಲ. ಸಂಜೆ ೪.೩೦ ಕ್ಕೆ ಮತ್ತೆ ಕರ್ತವ್ಯದಿಂದ ಬಿಡುಗಡೆ ಹಾಜರಾತಿ ಹಾಕಬೇಕಿದೆ. ಆದರೆ, ಸಾಕಷ್ಟು ಗ್ರಾಮೀಣ ಶಾಲೆಗಳ ನೆಟ್‌ವರ್ಕ್ ಸಮಸ್ಯೆಯಿಂದ ಹಾಜುರಾತಿ ಹಾಕಲು ತೀರ ವಿಳಂಬವಾಗುತ್ತಿದ್ದು, ತಾಲೂಕಿನ ಅಚ್ಚನಹಳ್ಳಿ ಶಾಲೆಯಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಕಳೆದೊಂದು ವಾರದಿಂದ ಸಂಜೆ ಆರು ಗಂಟೆಯಾದರೂ ಹಾಜರಾತಿ ಹಾಕಲು ಸಾಧ್ಯವಾಗದೆ ಶಿಕ್ಷಕರು ಪರದಾಟ ನಡೆಸಿದ್ದು ಹಾಜರಾತಿ ಹಾಕದೆ ತೆರಳಿದರೆ ಸಂಬಳ ಕಡಿತಗೊಳ್ಳುವ ಭಯ ಕಾಡುತ್ತಿದೆ. ಅಚ್ಚನಹಳ್ಳಿ ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ಸಂಜೆ ೪.೩೦ಕ್ಕೆ ಬಸ್ಸಿನ ವ್ಯವಸ್ಥೆ ಇದೆ. ಆದರೆ ಶಿಕ್ಷಕರಿಗೆ ಹಾಜುರಾತಿ ಹಾಕಲು ವಿಳಂಬವಾಗುವುದರಿಂದ ಬಸ್ ಸಹ ಮಿಸ್ ಆಗುವುದರಿಂದ ಶಿಕ್ಷಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ರೀತಿಯಾದ ಸಮಸ್ಯೆ ಬಹುತೇಕ ಗ್ರಾಮೀಣ ಭಾಗದ ಶಿಕ್ಷಕರನ್ನು ಕಾಡುತ್ತಿದೆ. ವಿದ್ಯಾರ್ಥಿಗಳ ಹಾಜರಾತಿ ಕಷ್ಟ:
ಶಿಕ್ಷಕರ ಕರ್ತವ್ಯ ಹಾಜರಾತಿ ಹಾಕಿದರು ವಿದ್ಯಾರ್ಥಿಗಳ ಹಾಜುರಾತಿಗೆ ನೆಟ್‌ವರ್ಕ್ ಸಮಸ್ಯೆಯಿಂದ ಹಾಜರಾತಿ ವಿಳಂಬವಾಗುತ್ತಿದ್ದು ಶಾಲೆಯ ಪ್ರತಿ ತರಗತಿಯ ವಿದ್ಯಾರ್ಥಿಗಳ ಹಾಜರಾತಿಯನ್ನು ಹಾಕಲು ಕನಿಷ್ಠ ಗಂಟೆಗಳ ಕಾಲ ಸಮಯ ಹಿಡಿಯುವುದರಿಂದ ಭೋದನೆಗೆ ಸಮಯವೇ ದೊರೆಯುತ್ತಿಲ್ಲ. ಗಂಟೆಗಳ ಕಾಲ ಕೈಯಲ್ಲಿ ಮೊಬೈಲ್ ಹಿಡಿದು ಕೆಲಸ ಮಾಡ ಬೇಕಿರುವುದರಿಂದ ಸರಕಾರದ ಮೊಬೈಲ್ ಇಡಿ ಪುಸ್ತಕ ಹಿಡಿ ಎಂಬ ತತ್ವ ಪಾಲಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ಸರಕಾರದ ೧೦ಕ್ಕೂ ಅಧಿಕ ಆ್ಯಪ್ ಮೂಲಕ ನಿರಂತರವಾಗಿ ಇಲಾಖೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸ ಬೇಕಿರುವುದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತಿದ್ದು ಶಿಕ್ಷಕರ ವೃತ್ತಿ ಹೊರತುಪಡಿಸಿ ಬೇರೆ ಎಲ್ಲ ಕೆಲಸ ಮಾಡಲು ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆಳಲು ಶಿಕ್ಷಕ ವರ್ಗದ್ದು. ಸರಕಾರ ೯.೪೫ ಕ್ಕೆ ಶಾಲೆ ತಲುಪಿ ಹಾಜುರಾತಿ ಹಾಕಬೇಕು ಎಂಬ ನಿಯಮ ಕಡ್ಡಾಯಗೊಳಿಸಿದೆ. ಈ ಮಧ್ಯೆ ಶಿಕ್ಷಕರು ಶಾಲೆಯ ಬಿಸಿಯೂಟಕ್ಕೆ ಬೇಕಿರುವ ತರಕಾರಿ ಹಾಗೂ ಮೊಟ್ಟೆಗಳನ್ನು ಖರೀದಿಸಿ ಶಾಲೆ ತಲುಪ ಬೇಕಿರುವುದರಿಂದ ಶಿಕ್ಷಕರ ಒತ್ತಡವನ್ನು ದ್ವಿಗುಣಗೊಳಿಸಿದೆ. ಕರ್ತವ್ಯ, ನಿರಂತರ ಹಾಗೂ ಇತರೆ ಆ್ಯಪ್ ಬಳಕೆಯನ್ನು ಶಿಕ್ಷಕರು ತಮ್ಮ ಸ್ವಂತ ಮೊಬೈಲ್‌ಗಳ ಮೂಲಕ ಮಾಡಬೇಕಿದೆ. ಇದಕ್ಕೆ ವೆಚ್ಚವಾಗುವ ಖರ್ಚನ್ನು ಶಿಕ್ಷಕರೆ ಭರಿಸಬೇಕಿದ್ದು ಕನಿಷ್ಠ ಟ್ಯಾಬ್ ವ್ಯವಸ್ಥೆ ಕಲ್ಪಿಸಿ ಎಂಬ ಶಿಕ್ಷಕರ ಬೇಡಿಕೆಗೂ ಯಾವುದೇ ಬೆಲೆ ಇಲ್ಲ ಎಂಬ ಬೇಸರ ಶಿಕ್ಷಕರದ್ದು.ಮೊಟ್ಟೆ ಹೊರೆ
ವಿದ್ಯಾರ್ಥಿಗಳಿಗೆ ಬಿಸಿಯೂಟದೊಂದಿಗೆ ನೀಡಲಾಗುವ ಮೊಟ್ಟೆಗೆ ಸರಕಾರ ೫.೩೦ ರು. ಗಳನ್ನು ನೀಡುತ್ತಿದೆ. ಆದರೆ, ಕಳೆದ ಒಂದು ವರ್ಷದ ಹಿಂದೆಯೆ ಮೊಟ್ಟೆಯ ಬೆಲೆ ಪರಿಷ್ಕರಣೆಗೊಂಡಿದೆ. ಪಟ್ಟಣದಲ್ಲಿ ಪ್ರತಿಮೊಟ್ಟೆಯ ಬೆಲೆ ೮ ರೂಗಳಾಗಿದ್ದರೆ ಗ್ರಾಮೀಣ ಪ್ರದೇಶದಲ್ಲಿ ೯ ರೂಗಳಾಗಿದೆ. ಆದ್ದರಿಂದ ಪ್ರತಿಮೊಟ್ಟೆಗೆ ಶಿಕ್ಷಕರು ೩ ರೂಗಳಿಂದ ೪ ರೂಗಳನ್ನು ಹೆಚ್ಚುವರಿಯಾಗಿ ತಮ್ಮ ಸಂಬಳದ ಹಣದಿಂದ ಪಾವತಿಸಬೇಕಿದೆ. ಕನಿಷ್ಠ ೧೦೦ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುವ ಶಾಲೆಯಲ್ಲಿ ಮೊಟ್ಟೆಗಾಗಿ ಶಿಕ್ಷಕರು ತಮ್ಮ ಹಣದಿಂದ ಮುನ್ನೂರುರೂಗಳಿಂದ ನಾಲ್ಕನೂರುರೂಗಳವರಗೆ ಪ್ರತಿದಿನ ಪಾವತಿಸ ಬೇಕಿರುವುದು ಶಿಕ್ಷಕರಿಗೆ ಹೊರೆಯಾಗಿ ಪರಿಣಮಿಸಿದೆ.
ಬಾಕ್ಸ್:: ಕಾಡಾನೆ ಸಮಸ್ಯೆ:ತಾಲೂಕಿನ ಹಾನುಬಾಳ್, ಹೆತ್ತೂರು,ಯಸಳೂರು ಹಾಗೂ ಬೆಳಗೋಡು ಹೋಬಳಿಯಲ್ಲಿ ಕಾಡಾನೆ ಕಾಟ ಅತಿಯಾಗಿದ್ದು ಮುಸ್ಸಾಂಜೆ ಮುನ್ನವೆ ರಸ್ತೆಗೆ ಕಾಡಾನೆಗಳು ಲಗ್ಗೆ ಇಡುತ್ತಿವೆ. ಶಿಕ್ಷಕರು ತಮ್ಮ ಕರ್ತವ್ಯ ಮಗಿಸಿ ಮನೆಗೆ ತೆರಳುವ ವೇಳೆಗೆ ಮುಸ್ಸಂಜೆಯಾಗುತ್ತಿದ್ದು ಕಾಡಾನೆ ಕಾಟದ ನಡುವೆ ಜೀವಭಯದಲ್ಲಿ ನಿತ್ಯ ಕರ್ತವ್ಯ ನಿರ್ವಹಿಸ ಬೇಕಿದೆ. ಕಾರಿನ ವ್ಯವಸ್ಥೆ: ತಾಲೂಕಿನ ಬೆಳಗೋಡು ಹೋಬಳಿಯ ಹಳೇಕೆರೆ ಗ್ರಾಮ ಕಾಫಿತೋಟದ ನಡುವೆ ಅವೃತ್ತಗೊಂಡಿದ್ದು ಕಾಡಾನೆ ತವರು ಎಂದು ಈ ಗ್ರಾಮ ಖ್ಯಾತಿ ಪಡೆದಿದ್ದು ಕಳೆದ ಅರ್ಧ ದಶಕದಲ್ಲಿ ಈ ಗ್ರಾಮದ ಇಬ್ಬರು ಕಾಡಾನೆಗೆ ಬಲಿಯಾಗಿರುವುದು ಗ್ರಾಮದಲ್ಲಿ ಕಾಡಾನೆ ಹಾವಳಿಯ ಪ್ರಮಾಣವನ್ನು ಸೂಚಿಸುತ್ತಿದೆ. ಇದೆ ಕಾರಣಕ್ಕೆ ಇಲ್ಲಿರುವ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತ ತಲುಪಿತ್ತು. ಶಾಲೆಯನ್ನು ಉಳಿಸಿ ಕೊಳ್ಳಲೇ ಬೇಕು ಎಂಬ ಪಣ ತೊಟ್ಟ ಶಾಲೆಯ ತಮ್ಮಣ್ಣಶೆಟ್ಟಿ ಮತ್ತೊರ್ವ ಶಿಕ್ಷಕರು ತಮ್ಮ ಸ್ವಂತ ಹಣದಿಂದ ಕಾರು ಖರೀಧಿಸಿ ಹಳೇಕೆರೆ ಗ್ರಾಮ ಸಮೀಪದ ಗ್ರಾಮಗಳಿಂದ ಮಕ್ಕಳನ್ನು ಕರೆತರುವ ಮೂಲಕ ಶಾಲೆ ಉಳಿವಿಗೆ ಕಾರಣಿಭೂತರಾಗಿದ್ದಾರೆ.
=== ಹೇಳಿಕೆ:ರಾಜ್ಯಾದ್ಯಂ ತ ಜಾರಿಯಾಗಿರುವ ನಿಯಮವನ್ನು ನಮ್ಮ ತಾಲೂಕಿಗೆ ಸಡಿಲಗೊಳಿಸಿ ಎನ್ನಲು ಸಾದ್ಯವಿಲ್ಲ. ಕೆಲವೊಂದು ಸಮಸ್ಯೆಗಳಿದ್ದು ಮುಂದಿನ ದಿನಗಳಲ್ಲಿ ಸರಿಹೋಗುವ ಆಶಾಭಾವನೆ ಇದೆ. ಹಾಜರಾತಿಯಾಗದಿದ್ದರೆ ಸಂಬಳ ಕಡಿತಗೊಳ್ಳಲಿದೆ ಎಂಬದಕ್ಕೆ ಇದುವರಗೆ ಪುರಾವೆ ದೊರೆಯದಾಗಿದೆ.
ಪುಷ್ಪ, ಕ್ಷೇತ್ರಶಿಕ್ಷಣಾಧಿಕಾರಿ ಸಕಲೇಶಪುರ.ಹೇಳಿಕೆ 2ಸರಕಾರ ಹೊಸದಾಗಿ ಜಾರಿಮಾಡಿರುವ ಕರ್ತವ್ಯ ಹಾಗೂ ನಿರಂತ ಆಪ್‌ಗಳು ಮಲೆನಾಡಿನ ಆದರಲ್ಲೂ ಗ್ರಾಮೀಣ ಭಾಗದ ಶಿಕ್ಷಕರ ಮನಸ್ಥೈರ್ಯವನ್ನು ಕಸಿಯುತ್ತಿದೆ. ದಯವಿಟ್ಟು ಮಲೆನಾಡಿಗೆ ಈ ನಿಯಮದಿಂದ ವಿನಾಯಿತಿ ನೀಡ ಬೇಕು.
ಪ್ರವೀಣ್‌ಕುಮಾರ್. ಅಧ್ಯಕ್ಷರು. ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘ.