ಸಾರಾಂಶ
ಮೂಲ್ಕಿ: ಯಕ್ಷಗಾನ ಕ್ಷೇತ್ರದಲ್ಲಿ ಅತೀ ಹೆಚ್ಚು ಆರು ಮೇಳಗಳನ್ನು ಹೊಂದಿರುವ ಸುಮಾರು 25 ವರ್ಷಗಳವರೆಗೆ ಮುಂಗಡ ಬುಕ್ಕಿಂಗ್ ಆಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ದಶಾವತಾರ ಯಕ್ಷಗಾನ ಮಂಡಳಿಯ ಎಲ್ಲ ಆರು ಮೇಳಗಳ 2024-25 ರ ಸಾಲಿನ ತಿರುಗಾಟಕ್ಕೆ ನ.25ರಂದು ಚಾಲನೆ ನೀಡಲಾಗುತ್ತದೆ.
ಎಲ್ಲ ಆರು ಮೇಳದ ಕಲಾವಿದರು ದೇವಿಯ ಸನ್ನಿಧಿಯಲ್ಲಿ ಗೆಜ್ಜೆಕಟ್ಟಿ ಯಕ್ಷಯಾನಾರಂಭ ನಡೆದು ಬಳಿಕ ರಾತ್ರಿ ಕ್ಷೇತ್ರದ ರಥಬೀದಿಯಲ್ಲಿ ಒಂದೇ ರಂಗಸ್ಥಳದಲ್ಲಿ ಎಲ್ಲ ಆರು ಮೇಳಗಳ ದೇವರ ಚೌಕಿಪೂಜೆ ಹಾಗೂ ಆರೂ ಮೇಳದ ಕಲಾವಿದರ ಕೂಡುವಿಕೆಯಲ್ಲಿ ಸೇವೆಯಾಟ ‘ಪಾಂಡವಾಶ್ವಮೇಧ’ ಪ್ರಸಂಗ ಪ್ರದರ್ಶನಗೊಳ್ಳಲಿದೆ.ಈ ಬಾರಿಯ ತಿರುಗಾಟವು ನವಂಬರ್ 26 ರಿಂದ ಆರಂಭಗೊಳ್ಳಲಿದ್ದು 2025ರ ಮೇ 25ರ ಪತ್ತನಾಜೆವರೆಗೆ ಏಪ್ರಿಲ್ ತಿಂಗಳ ವರ್ಷಾವಧಿ ಜಾತ್ರೆಯ ಆರಟದ ದಿನದ ರಜೆ ಹೊರತುಪಡಿಸಿ ಒಟ್ಟು 180 ದಿನಗಳ ಯಕ್ಷಯಾನ ನಿಗದಿಯಾಗಿದೆ. ಕಳೆದ ವರ್ಷ ಆರಂಭದಲ್ಲಿ ಒಂದು ತಿಂಗಳಲ್ಲಿ ಕಾಲಮಿತಿ ನಡೆದಿದ್ದು ರಾತ್ರಿಯಿಡೀ ಯಕ್ಷಗಾನ ನಡೆಯಬೇಕೆಂದು ಕೆಲವರು ನ್ಯಾಯಾಲಯದ ಮೆಟ್ಟಲೇರಿದ್ದರಿಂದ ಕಲಾವಿದರನ್ನು ಮತ್ತು ಸೇವಾಕರ್ತರನ್ನು ಗೊಂದಲಕ್ಕೀಡು ಮಾಡಿತ್ತು. ಶಬ್ದ ಮಾಲಿನ್ಯ ನಿಯಮಾವಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದಂತೆ ದ.ಕ. ಜಿಲ್ಲಾಧಿಕಾರಿಯವರು ಆಜ್ಞೆಯನ್ನು ಹೊರಡಿಸಿದ್ದರು. ಈ ಬಗ್ಗೆ ಪೊಲೀಸ್ ಇಲಾಖೆಯಿಂದಲೂ ದೇವಳದ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿತ್ತು. ಬಳಿಕ ದೇವಳದ ಆಡಳಿತ ಮಂಡಳಿಯ ನಿರ್ಧಾರದಂತೆ ಕಾಲಮಿತಿಯಲ್ಲಿ ಯಕ್ಷಗಾನ ಪ್ರದರ್ಶನ ಮುಂದುವರಿದಿತ್ತು. ಈ ಬಾರಿ ಕೂಡ ಕಳೆದ ವರ್ಷದಂತೆ ಯಥಾಪ್ರಕಾರ ಕಾಲಮಿತಿಯಲ್ಲೇ ತಿರುಗಾಟ ನಡೆಯಲಿದೆ.
ಪ್ರತಿ ವರ್ಷದಲ್ಲಿ ಎಲ್ಲ ಆರು ಮೇಳಗಳಲ್ಲಿ ಕೆಲವೊಂದು ಬದಲಾವಣೆ ನಡೆಯುತ್ತಿದ್ದು ಈ ಬಾರಿ ಆಂತರಿಕ ಬದಲಾವಣೆಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಹಿಮ್ಮೇಳ- ಮುಮ್ಮೇಳ ಸೇರಿದಂತೆ ಕೆಲವು ಕಲಾವಿದರು ಹೊಸದಾಗಿ ಅಥವಾ ಈ ಹಿಂದೆ ಮೇಳದಲ್ಲಿದ್ದವರು ಸೇರ್ಪಡೆಯಾಗುವ ಸಾಧ್ಯತೆ ಇದೆ ತಿಳಿದುಬಂದಿದೆ.ಪ್ರಸ್ತುತ ಸಾಲಿನ ತಿರುಗಾಟದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ. ದೇವರ ಇಚ್ಛೆಯೂ ಕಾಲಮಿತಿಯೇ ಆಗಿದ್ದರೆ ಅಭ್ಯಂತರವಿಲ್ಲ ಎಂದು ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವೇದಮೂರ್ತಿ ವಾಸುದೇವ ಆಸ್ರಣ್ಣ ತಿಳಿಸಿದ್ದಾರೆ.
;Resize=(128,128))
;Resize=(128,128))