ಧಾರವಾಡ:

ರಾಜ್ಯ ಸರ್ಕಾರದ ₹ 5 ಕೋಟಿ ಅನುದಾನದಲ್ಲಿ ನಿರ್ಮಿಸುತ್ತಿರುವ ಶತಮಾನೋತ್ಸವ ಕಟ್ಟಡದ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಇನ್ಮುಂದೆ ಹವಾನಿಯಂತ್ರಿತ ಕಟ್ಟಡವನ್ನು ಬ್ಯಾಂಕ್ ಹೊಂದಲಿದೆ ಎಂದು ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.

ಕೆಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಬಸವ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ ಅವರು, ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಡುವಿನ ಅಂತರ ಕಡಿಮೆಗೊಳಿಸುವ ಮೂಲಕ ರೈತರು ಮತ್ತು ಗ್ರಾಹಕರಿಗೆ ಇನ್ನಷ್ಟು ಪರಿಣಾಮಕಾರಿ ಸೇವೆ ಒದಗಿಸಲು ಯೋಜನೆ ರೂಪಿಸಲಾಗಿದೆ. ಸಂಘಗಳಿಗೆ ಸದ್ಯದಲ್ಲೇ ಶೇರು ಸಹಾಯಧನ ಮತ್ತು ಡಿವಿಡೆಂಡ್ ನೀಡಲಾಗುವುದು ಎಂದರು.

ಬ್ಯಾಂಕ್ ಆಡಳಿತ ಮಂಡಳಿಯು "ಕಾಯಕವೇ ಕೈಲಾಸ " ತತ್ವದಡಿ ಹಾಕಿಕೊಂಡಿದ್ದ ಕ್ರಿಯಾಯೋಜನೆಯಂತೆ 2025-2026 ನೇ ಆರ್ಥಿಕ ವರ್ಷದಲ್ಲಿ ₹ 22 ಕೋಟಿ ಲಾಭ ಗಳಿಸಿದೆ. ಕಳೆದ ಐದು ವರ್ಷಗಳಲ್ಲಿ ಇದು ಅತಿ ಹೆಚ್ಚಿನ ಲಾಭದ ಪ್ರಮಾಣವಾಗಿದೆ‌. ಬ್ಯಾಂಕ್ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಸಹಕಾರ ಸಂಘಗಳ ಪ್ರಾಮಾಣಿಕ ಮತ್ತು ನಿರಂತರ ಪ್ರಯತ್ನದಿಂದ ಲಾಭ ಗಳಿಸಲು ಸಾಧ್ಯವಾಗಿದೆ. ಮುಂದಿನ ವರ್ಷದಲ್ಲಿ ಲಾಭದ ಪ್ರಮಾಣ ದ್ವಿಗುಣಗೊಳಿಸುವ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ‌ ಎಂದು ಹೇಳಿದರು.

ಬ್ಯಾಂಕ್‌ ಪ್ರಸ್ತುತ ಆಧುನಿಕ ಸೌಲಭ್ಯ ಅಳವಡಿಸಿಕೊಂಡು ಗ್ರಾಹರಿಗೆ ಶೀಘ್ರ ಸೇವೆ ಒದಗಿಸುತ್ತಿದೆ ಎಂದ ಅವರು, ಬಸವಜಯಂತಿ ಕಾರ್ಯಕ್ರಮವು ಬ್ಯಾಂಕಿನ ಎಲ್ಲ‌ 63 ಶಾಖೆಗಳಿಗೆ ನೇರ ಪ್ರಸಾರ ವ್ಯವಸ್ಥೆ ಮಾಡಿರುವುದು ನಿದರ್ಶನ ಎಂದರು.


ಇದೇ ವೇಳೆ ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬ್ಯಾಂಕಿನಿಂದ ಮಂಜೂರಾದ ವಾಹನ ಸಾಲವನ್ನು ಗ್ರಾಹಕರಿಗೆ ಹಸ್ತಾಂತರಿಸಿದರು. ಬ್ಯಾಂಕ್‌ ಸಿಇಒ ಡಾ. ಸುನೀತಾ ಸಿದ್ರಾಮ, ನಿರ್ದೇಶಕರಾದ ಸಿದ್ದಪ್ಪ‌ ಸಪೂರಿ, ನಾಗಪ್ಪ ಸಂಕದ, ಪ್ರಧಾನ ವ್ಯವಸ್ಥಾಪಕ ಎಸ್.ವಿ. ಹೂಗಾರ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಗ್ರಾಹಕರಿದ್ದರು.