ಕೊಪ್ಪಳ: ಭಾರತದಲ್ಲಿ ಜಾತ್ಯಾತೀತ ಪರಿಕಲ್ಪನೆ ಮೂಡಿಸಿದ್ದೇ ಕಲ್ಯಾಣ ಎಂದು ಹಿರಿಯ ಸಾಹಿತಿ ಡಾ. ವಿ.ಎಸ್. ಮಾಳಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ನಗರಸಭೆ, ಬಸವ ಜಯಂತ್ಯುತ್ಸವ ಸಮಿತಿ ಕೊಪ್ಪಳ ಮತ್ತು ಬಸವಾನುಯಾಯಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಶ್ರೀ ಗವಿಸಿದ್ದೇಶ್ವರ ಮಠದ ಬಯಲ ಆವರಣದಲ್ಲಿ ನಡೆದ ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿದರು.ಕಲ್ಯಾಣದಲ್ಲಿ ಉದಯಿಸಿದ ಬೆಳಕು ಇಂದು ಜಗತ್ತನ್ನೇ ಬೆಳಗುತ್ತಿದೆ. ಕಲ್ಯಾಣದ ಬೆಳಕು ಕನ್ನಡದ ಬೆಳಕು. ಕನ್ನಡದ ಸಾಹಿತ್ಯ ಅಕ್ಷಯ ಸಾಹಿತ್ಯ. ಬಸವಣ್ಣ ಕನ್ನಡದ ಅಸ್ಮಿತೆ, ವಚನ ಸಾಹಿತ್ಯ ಕನ್ನಡದ ಅನನ್ಯತೆ ಎಂದರು.
ಕಲ್ಯಾಣ ಅಂದರೆ ಅದು ಕೇವಲ ಸ್ಥಳ ಅಲ್ಲ; ಪ್ರಭುತ್ವವನ್ನು ಪ್ರಶ್ನಿಸುವ ಎಲ್ಲ ಕಾರ್ಯವೂ ಅದು ಕಲ್ಯಾಣ; ಕಲ್ಯಾಣ ಕಾರ್ಯ ಎಂದು ತಿಳಿಯಬೇಕು ಎಂದರು.ಕೂಡಲ ಸಂಗಮನ ಗೋತ್ರ ಎಂದರೆ ಅದು ಮಾದರ ಚನ್ನಯ್ಯನ ಗೋತ್ರವೆಂದು ತಿಳಿಯಲು ಬಸವಣ್ಣ ಹೇಳುತ್ತಾರೆ. ಇಂತಹ ವೃತ್ತಿ ಘನತೆ, ಸಮಾನತೆಯು 12ನೇ ಶತಮಾನದಲ್ಲಿ ಕಲ್ಯಾಣದಲ್ಲಿತ್ತು. ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ ಎಂದು ಆಗಿನ ಶರಣರು ತಮ್ಮ ತಮ್ಮ ವೃತ್ತಿ ಮೂಲಕ ಗುರುತಿಸಿಕೊಳ್ಳುವ ಹಾಗೆ ವೃತ್ತಿಗೆ ಘನತೆಯನ್ನು ತಂದುಕೊಟ್ಟವರು ಬಸವಣ್ಣ ಎಂದರು.
ಅರಮನೆಗೆ ಪರ್ಯಾಯವಾಗಿ ಬಸವಣ್ಣನವರು ಮಹಾಮನೆ ಕಟ್ಟಿದರು. ಜಗತ್ತಿನ ಎಲ್ಲ ಮನೆಗಳು ಮಹಾಮನೆಗಳಾಗಬೇಕು ಎಂಬುದು ಬಸವಣ್ಣನವರ ಅಪೇಕ್ಷೆಯಾಗಿತ್ತು. ಅನುಭವ ಮಂಟಪ ಎಲ್ಲಿತ್ತು ಎಂದು ಹುಡುಕುವುದಲ್ಲ; ಅದು ಸ್ಥಾವರವಲ್ಲ; ಜಂಗಮದ ಪರಿಕಲ್ಪನೆ. ಸಿಂಹಾಸನ ಅಂದರೆ ಕಾಡಿನ ನ್ಯಾಯ. ಶೂನ್ಯಪೀಠವೆಂದರೆ ಅದು ನಾಡಿನ ನ್ಯಾಯ; ಸಾಮಾಜಿಕ ನ್ಯಾಯ ಎಂದು ಅರಿಯಬೇಕು. ವಿಪರ್ಯಾಸ ಎಂದರೆ ನಾವು ಬಸವಣ್ಣನವರು ಹೇಳಿದ್ದನ್ನು ಸರಿಯಾಗಿ ಪರಿಪಾಲನೆ ಮಾಡುತ್ತಿಲ್ಲ ಎಂದರು.
ಕಟ್ಟಿದ್ದು ಒಂದು ದಿನ ಬೀಳೋದೆ. ಹುಟ್ಟಿದ್ದು ಒಂದು ದಿನ ಸಾಯೋದೆ. ಬೀಳಲಿ, ಸಾಯಲಿ ಆದರೆ ಬಿದ್ದಿರೋದನ್ನು ಕಟ್ಟಬೇಕು ಎಂಬುದೇ ಕಲ್ಯಾಣದ ಸಂದೇಶವಾಗಿದೆ. ನಾವೆಲ್ಲರೂ ಮತ್ತೆ ಮತ್ತೆ ಕಲ್ಯಾಣ ಕಟ್ಟೋಣ ಎಂದು ಚಿಂತಕರಾದ ಮಾಳಿ ಅವರು ತಿಳಿಸಿದರು.
ಕೊಪ್ಪಳದ ಸಪ್ಪಳ ಅಂದರೆ ಅದು ಕನ್ನಡದ ಸಪ್ಪಳ. ಕೊಪ್ಪಳ ನೆಲದ ಬಗ್ಗೆ ಕವಿ ರನ್ನ ಹಾಡಿದ್ದಾನೆ. ಹಲವು ಧರ್ಮಗಳ ಬೀಡು ಕೊಪ್ಪಳ ಎಂದು ಅವರು ತಿಳಿಸಿದರು.