ನಿಮ್ಮ ಸೇವಕನಾಗಿ ನಾನು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯಬೇಕು.

ಖಾರಲ್ಯಾಂಡ್ ಕಾಮಗಾರಿಗಳ ಲೋಕಾರ್ಪಣೆ, ವಿವಿಧ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮ

ಕನ್ನಡ ಪ್ರಭ ವಾರ್ತೆ ಭಟ್ಕಳನಿಮ್ಮ ಸೇವಕನಾಗಿ ನಾನು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯಬೇಕು. ಜನರು ಸದಾ ನನ್ನನ್ನು ನೆನಪಿಸಿಕೊಳ್ಳುವಂತಹ ಗುಣಮಟ್ಟದ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇನೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.ಮುರ್ಡೇಶ್ವರದ ಕಾಯ್ಕಿಣಿ ಭಾಗದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ೨೦೨೪-೨೫ನೇ ಸಾಲಿನ ೪೭೦೨ ಪಶ್ಚಿಮ ವಾಹಿನಿ ಯೋಜನೆ ಅಡಿಯಲ್ಲಿ ಮಂಜೂರಾದ ಒಟ್ಟು ₹೧೯ ಕೋಟಿ ಮೊತ್ತದ ಎಡದಂಡೆ ಹಾಗೂ ಬಲದಂಡೆ ಖಾರಲ್ಯಾಂಡ್ ಕಾಮಗಾರಿಗಳ ಲೋಕಾರ್ಪಣೆ ಹಾಗೂ ವಿವಿಧ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.ಈ ಭಾಗದಿಂದ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಆಯ್ಕೆಆಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಇಂದಿಗೂ ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಭಟ್ಕಳ ಬಸ್ ನಿಲ್ದಾಣ, ಮಿನಿ ವಿಧಾನಸೌಧ ಸೇರಿ ಅನೇಕ ಜನಪರ ಕಾರ್ಯಗಳು ತನ್ನ ಅವಧಿಯಲ್ಲಿ ಆಗಿವೆ. ಬಸ್ ನಿಲ್ದಾಣದ ಬಳಿಯ ಜಾಗವನ್ನು ಹಿಂದಿನ ಬಿಜೆಪಿ ಸರ್ಕಾರ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡದೇ ಇದ್ದಿದ್ದರೆ, ಅಲ್ಲಿ ಭವ್ಯ ಸೂಪರ್ ಮಾರ್ಕೆಟ್ ನಿರ್ಮಾಣವಾಗುತ್ತಿತ್ತು ಎಂದು ಹೇಳಿದರು.ಚುನಾವಣಾ ವೇಳೆ ನೀಡಿದ ಭರವಸೆಗಳಂತೆ ಐದು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೊಳಿಸಿದ್ದೇವೆ. ನಿಮ್ಮ ಮತದ ಬೆಂಬಲದಿಂದ ಆಯ್ಕೆಯಾಗಿ, ನೀವು ಕಟ್ಟಿದ ತೆರಿಗೆಯಿಂದಲೇ ಈ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಖಾರಲ್ಯಾಂಡ್ ಯೋಜನೆ ಕುರಿತು ಮಾತನಾಡಿದ ಅವರು, ೮೧೦ ಮೀಟರ್ ಉದ್ದದ ಈ ಯೋಜನೆಯನ್ನು ಗುಣಮಟ್ಟದಿಂದ ಮಾಡಬೇಕು ಎಂದು ಹಠದಿಂದ ಕೈಗೊಂಡಿದ್ದು, ಇಂದು ಈ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ನಮ್ಮ ಸರ್ಕಾರದಲ್ಲಿ ಅಭಿವೃದ್ಧಿಗೆ ಅಗತ್ಯವಾದ ಹಣವಿದೆ. ಜನರಿಂದ ಬಂದ ಎಲ್ಲಾ ಮನವಿಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.ರಸ್ತೆ, ಸೇತುವೆ, ಸಮುದಾಯ ಭವನ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕಾಯ್ಕಿಣಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಯು ಕಾಲೇಜು ಮಂಜೂರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುವವರು ಜನಸೇವೆಗೆ ಮುಂದಾಗಲಿ. ನನ್ನ ಬಗ್ಗೆ ನಿಂದನೆ ಮಾಡುವವರ ಮಾತನ್ನು ಜನರು ನಂಬುವುದಿಲ್ಲ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಸದಸ್ಯರು, ಗ್ರಾಮಸ್ಥರು ಸಚಿವರನ್ನು ಸನ್ಮಾನಿಸಿ ಗೌರವಿಸಿದರು. ವೆಂಕಟ್ರಮಣ ನಾಯ್ಕ ಸ್ವಾಗತಿಸಿದರು. ವೆಂಕಟೇಶ ನಾಯ್ಕ ದುಗ್ಗೆಮನೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಾಹಕ ಅಭಿಯಂತರ ಎಂ. ನಾಗರಾಜ, ಮಾಸ್ತಪ್ಪ ಜಟ್ಟಾ ನಾಯ್ಕ, ಕೊಲ್ಕರ ಕುಪ್ಪಯ್ಯ ನಾಯ್ಕ, ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾಜಿ ಅಧ್ಯಕ್ಷ ರಾಘವೇಂದ್ರ ಗೊಯ್ದಪ್ಪ ನಾಯ್ಕ, ಗ್ಯಾರಂಟಿ ಮಾಜಿ ಅಧ್ಯಕ್ಷ ರಾಜು ನಾಯ್ಕ, ಮಾವಳ್ಳಿ ಮಹೇಶ ನಾಯ್ಕ, ಸಿಂಧೂ ಭಾಸ್ಕರ ನಾಯ್ಕ, ಮಂಜುನಾಥ ನಾಯ್ಕ ಬಿದ್ರಮನೆ, ತಿಮ್ಮಪ್ಪ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.