ಸಾರಾಂಶ
ಚಂದ್ರಮೌಳಿ ಎಂ.ಆರ್.
ಕನ್ನಡ ಪ್ರಭ ವಾರ್ತೆ, ಶಬರಿಮಲೆ (ನಿಲಕ್ಕಲ್)ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಭಕ್ತಾಧಿಗಳಿಗೆ ಸಮಗ್ರವಾದ ಸೌಲಭ್ಯ ನೀಡುವ ಉದ್ದೇಶದಿಂದ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಪರಿಸರಕ್ಕೆ ಧಕ್ಕೆ ಆಗದ ರೀತಿಯಲ್ಲಿ ಮುಂದಿನ 25 ವರ್ಷಗಳನ್ನು ಗುರಿಯಾಟ್ಟುಕೊಂಡು ಶಬರಿಮಲೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಪಂಪಾ ನದಿ ತೀರದಲ್ಲಿ ತಿರುವಾಂಕೂರು ದೇವಸ್ಥಾನ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ವಿಶ್ವ ಅಯ್ಯಪ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಶಬರಿಮಲೆಯ ಸಮಗ್ರ ಅಭಿವೃದ್ಧಿಗೆ 2011-12ರಲ್ಲೇ ಮಾಸ್ಟರ್ ಪ್ಲಾನ್ ರಚಿಸಲಾಗಿತ್ತು. ಆದರೆ ಉನ್ನತಾಧಿಕಾರ ಸಮಿತಿ ಅನುದಾನ ಬಳಸಿಕೊಳ್ಳುವಲ್ಲಿ ವಿಳಂಬ ಮಾಡಿತ್ತು. ಈಗ ಸರ್ಕಾರ ಮಧ್ಯಪ್ರವೇಶ ಮಾಡಿದ ಪರಿಣಾಮ ಯೋಜನೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.ಸನ್ನಿದಾನ, ಪಂಪಾ ಹಾಗೂ ನಿಲಕ್ಕಲ್ ಪ್ರದೇಶಗಳನ್ನು ಹಂತ ಹಂತವಾಗಿ ಅಭಿವೃದ್ದಿ ಮಾಡಲಾಗುವುದು. ಸನ್ನಿಧಾನಕ್ಕೆ ಸಂಬಂಧಪಟ್ಟಂತೆ 2022-27ರ ಅವಧಿಯಲ್ಲಿ ಮೊದಲ ಹಂತದಲ್ಲಿ 600.47 ಕೋಟಿ ರು. 2ನೇ ಹಂತದಲ್ಲಿ (2028-33) 100.02 ಕೋಟಿ ರು. ಹಾಗೂ ಮೂರನೇ ಹಂತದಲ್ಲಿ(2034-39) 77.66 ಕೋಟಿ ರು. ವೆಚ್ಚ ಮಾಡಲಾಗುವುದು. ಅದೇ ರೀತಿ ಪಂಪಾ ಸಂಬಂಧ 207.48 ಕೋಟಿ ರು. ಮತ್ತು ಕಾಲು ಹಾದಿ ಅಭಿವೃದ್ಧಿಗೆ 47.97 ಕೋಟಿ ರು. ವೆಚ್ಚ ಮಾಡಲಾಗುವುದು ಎಂದು ಅವರು ವಿವರಿಸಿದರು. ಇದರ ಜತೆ 2025-2030 ಅವಧಿಯಲ್ಲಿ ಹೆಚ್ಚುವರಿಯಾಗಿ 314.96 ಕೋಟಿ ರು.ವೆಚ್ಚ ಮಾಡಿ ಭಕ್ತಾಧಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮ ಹಾಳು ಮಾಡಲು ಯತ್ನ:ವಿಶ್ವ ಅಯ್ಯಪ್ಪ ಸಮ್ಮೇಳನ ನಡೆಸಲು ಈ ಮೊದಲೇ ನಿರ್ಧರಿಸಲಾಗಿತ್ತು. ಆದರೆ ಈ ಕಾರ್ಯಕ್ರಮ ನಡೆಯದಂತೆ ತಡೆಯಲು ಕೆಲ ಹಿತಾಸಕ್ತಿಗಳು ಕೋರ್ಟ್ ಮೊರೆ ಹೋದವು. ಕಾರ್ಯಕ್ರಮದಿಂದ ಅರಣ್ಯನಾಶ ಇಲ್ಲವೇ ಬೇರೆ ಯಾವುದೇ ರೀತಿ ತೊಂದರೆ ಆಗುತ್ತಿತ್ತೇ? ಎಂದ ಮುಖ್ಯಮಂತ್ರಿ ಪಿಣರಾಯಿ ಈ ವರ್ಷದ ಅಂತ್ಯಕ್ಕೆ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಹಿಂದು ಮತದಾರರನ್ನು ಸೆಳೆಯಲು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ಟೀಕೆ ತಿರಸ್ಕರಿಸಿದರು
ತಮಿಳುನಾಡು ಸಚಿವರು ಭಾಗಿಕಾರ್ಯಕ್ರಮಕ್ಕೆ ಬೇರೆ ಬೇರೆ ರಾಜ್ಯಗಳಿಗೂ ಆಹ್ವಾನ ನೀಡಲಾಗಿತ್ತು. ಆದರೆ ತಮಿಳುನಾಡಿನ ಇಬ್ಬರು ಸಚಿವರು ಮಾತ್ರ ಭಾಗಿಯಾಗಿದ್ದರು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಳಿಸಿದ ಸಂದೇಶವನ್ನು ಕಾರ್ಯಕ್ರಮದಲ್ಲಿ ಓದಿದ್ದು ವಿಶೇಷವಾಗಿತ್ತು. ಕಾರ್ಯಕ್ರಮಕ್ಕೆ ವಿವಿಧ ಹಿಂದು ಸಂಘಟನೆಗಳು ಸೇರಿ ವಿವಿಧ ಸಮುದಾಯಗಳು ಬೆಂಬಲ ವ್ಯಕ್ತಪಡಿಸಿದ್ದವು.
ವಿಚಾರಗೋಷ್ಠಿಕಾರ್ಯಕ್ರಮದ ನಂತರ ಕ್ಷೇತ್ರದ ಸಮಗ್ರ ಅಭಿವೃದ್ದಿ ಕುರಿತು ಸಿದ್ಧಪಡಿಸಿರುವ ಮಾಸ್ಟರ್ ಪ್ಲಾನ್, ಆಧ್ಯಾತ್ಮಿಕ ಪ್ರವಾಸಿ ವೃತ್ತ ಹಾಗೂ ಜನದಟ್ಟಣೆ ನಿರ್ವಹಣೆ ಮತ್ತು ಸಿದ್ಧತೆಗಳ ಕುರಿತು ತಜ್ಞರಿಂದ ಉಪನ್ಯಾಸ ಮತ್ತು ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.