ಹರಿಹರ: ಇಂದಿನಿಂದ ನವರಾತ್ರಿ ಕಾರ್ಯಕ್ರಮ ಪ್ರಾರಂಭ

| Published : Sep 22 2025, 01:00 AM IST

ಸಾರಾಂಶ

ಸಾಮೂಹಿಕ ದಸರಾ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮ ಸೆ.22ರಿಂದ ಅ.2ರವರೆಗೆ ನಡೆಯಲಿದೆ. ದಸರಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 22ನೇ ವರ್ಷದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ.

- ಶ್ರೀ ನಾಮದೇವ ಕಲ್ಯಾಣ ಮಂಟಪದಲ್ಲಿ ಸಂಜೆ 5 ಗಂಟೆಗೆ ದುರ್ಗಾಮಾತೆ ಮೂರ್ತಿ ಪ್ರತಿಷ್ಟಾಪನೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಸಾಮೂಹಿಕ ದಸರಾ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮ ಸೆ.22ರಿಂದ ಅ.2ರವರೆಗೆ ನಡೆಯಲಿದೆ. ದಸರಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 22ನೇ ವರ್ಷದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ.

ಸಾಮೂಹಿಕ ಬನ್ನಿ ಮುಡಿವ ಮೆರವಣಿಗೆ ಚಾಲನೆ: ಅ.2ರ ಗುರುವಾರ ಮಧ್ಯಾಹ್ನ 2ರಿಂದ ಶ್ರೀ ಹರಿಹರೇಶ್ವರ ದೇವಸ್ಥಾನ ಆವರಣದಿಂದ ಸಾಮೂಹಿಕ ಬನ್ನಿ ಮುಡಿಯುವ ಮೆರವಣಿಗೆ ಪ್ರಾರಂಭವಾಗಲಿದೆ. ಶ್ರೀಕ್ಷೇತ್ರ ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಬಿ.ಪಿ. ಹರೀಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ನಗರಸಭಾ ಸದಸ್ಯ ಶಂಕರ್ ಖಟಾವ್‌ಕರ್ ವಹಿಸಲಿದ್ದಾರೆ.

ಮೆರವಣಿಗೆಯ ವಿಶೇಷತೆ:

ದಾವಣಗೆರೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದೊಂದಿಗೆ ರಾಜ್ಯದ ಪ್ರಖ್ಯಾತ ಕಲಾ ತಂಡಗಳಿಂದ ಗೊಂಬೆ, ಕೀಲುಕುದುರೆ, ಡೊಳ್ಳು, ಸಮಾಳ ನಂದಿಕೋಲು, ವೀರಗಾಸೆ, ಮರಗಾಲು, ಝಾಂಜ್ ಪತ್‌, ನಾದಸ್ವರ, ತಮಟೆ, ಕೋಲಾಟ, ಸ್ಥಬ್ಧ ಚಿತ್ರಗಳು, ಕುದುರೆ, ಒಂಟೆ ಕುದುರೆ ಸಾರೋಟ್ ಜತೆಗೆ ದುರ್ಗಾಮಾತೆ ಉತ್ಸವಮೂರ್ತಿ ಹೊತ್ತ ಆನೆ ಅಂಬಾರಿ ರಾಜಬೀದಿಯಲ್ಲಿ ಸಂಚರಿಸಲಿದೆ.

ಹರಿಹರೇಶ್ವರ ದೇವಸ್ಥಾನ ಮುಂಭಾಗದಿಂದ ಪ್ರಾರಂಭವಾಗುವ ಮೆರವಣಿಗೆ, ದೇವಸ್ಥಾನ ರಸ್ತೆ, ರಾಣಿ ಚನ್ನಮ್ಮ ವೃತ್ತ, ಮುಖ್ಯರಸ್ತೆ, ಗಾಂಧಿ ಸರ್ಕಲ್, ಹಳೇ ಪೂನಾ- ಬೆಂಗಳೂರು ರಸ್ತೆ ಮೂಲಕ ಜೋಡು ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಲಿದೆ. ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ್ ಸಾಮೂಹಿಕ ಬನ್ನಿ ಮುಡಿಯಲಿದ್ದಾರೆ.

ದುರ್ಗಾಮಾತೆ ಪ್ರತಿಷ್ಟಾಪನೆ:

ನವರಾತ್ರಿ ಹಿನ್ನೆಲೆ ಸೆ.22ರಂದು ಸಂಜೆ 5 ಗಂಟೆಗೆ ಶ್ರೀ ದುರ್ಗಾಮಾತೆಯ ಮೂರ್ತಿಯನ್ನು ಹರಿಹರದ ನಡುವಲಪೇಟೆಯ ಶ್ರೀ ವಿಠಲ ಮಂದಿರ ಶ್ರೀ ನಾಮದೇವ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವುದು. ಪ್ರತಿದಿನ ಸಂಜೆ 5.30ರಿಂದ ವಿವಿಧ ಮಹಿಳಾ ಮಂಡಳಿಗಳಿಂದ ಶ್ರೀ ದುರ್ಗಾ ಮಾತೆಗೆ ಶ್ರೀ ಲಲಿತಾ ಅಷ್ಟೋತ್ತರ ಕುಂಕುಮಾರ್ಚನೆ ನಡೆಯಲಿದೆ.

ಸೆ.24ರಂದು ಬೆಳಗ್ಗೆ 10.30ರಿಂದ ನಗರದ ಮಾತೃಮಂಡಳಿ ಮಾತೆಯರಿಂದ ಶ್ರೀ ಆದಿಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಸಾಮೂಹಿಕ ಪಠಣ ನಡೆಯಲಿದೆ. ಸೆ.25ರ ಸಂಜೆ 6.30 ಕ್ಕೆ ನಗರದ ಮಕ್ಕಳ ವೃಂದದಿಂದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಸೆ.26ನೇ ಶುಕ್ರವಾರ ಸಂಜೆ 6.30ಕ್ಕೆ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸೆ.27ರ ಶನಿವಾರ ಸಂಜೆ 6.30 ಕ್ಕೆವಿವಿಧತೆಯಲ್ಲಿ ಏಕತೆ ಭಾವೈಕ್ಯತೆಯ ರೂಪಕ ಪ್ರದರ್ಶನ ನಡೆಯಲಿದೆ. ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಮಹಿಳಾ ಮಂಡಳಿ ಸದಸ್ಯರಿಂದ ಸೆ.28ರ ಸಂಜೆ 6.30ರಿಂದ "ಆನಂದ ಬಜಾರ್ " ಸವಿರುಚಿಯ ಆಹಾರ ಮೇಳ ಆಯೋಜಿಸಲಾಗಿದೆ.

ಸೆ.29ರ ಬೆಳಗ್ಗೆ 9 ರಿಂದ ಶ್ರೀ ಶಾರದಾದೇವಿ ಪೂಜೆ ಹಾಗೂ 3 ರಿಂದ 5 ವರ್ಷದೊಳಗಿನ ಮಕ್ಕಳಿಗೆ ದತ್ತಾತ್ರೇಯ ಭಟ್ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಅಕ್ಷರಾಭ್ಯಾಸ ಹಾಗೂ ಸಂಜೆ 6-30 ರಿಂದ ಹರಿಹರದ ಶ್ರೀ ನಾಟ್ಯಾಂಜಲಿ ನೃತ್ಯ ತಂಡದಿಂದ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಸೆ.30ರಂದು ಬೆಳಗ್ಗೆ 9-30 ಗಂಟೆಗೆ ಲೋಕಕಲ್ಯಾಣಾರ್ಥ “ಶ್ರೀ ದುರ್ಗಾಹೋಮ ಅ.1ರಂದು ಸಂಜೆ 5-30ಕ್ಕೆ ಅಷ್ಟೋತ್ತರದೊಂದಿಗೆ ಕುಂಕುಮಾರ್ಚನೆ ನೆರವೇರಲಿವೆ.

ಮೆರವಣಿಗೆಯಲ್ಲಿ ಗಣ್ಯರು:

ಸಾಮೂಹಿಕ ಬನ್ನಿ ಮೆವಣಿಗೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಶಾಸಕರಾದ ಎಸ್.ರಾಮಪ್ಪ, ಎಚ್.ಎಸ್. ಶಿವಶಂಕರ್, ಡಿಸಿ ಜಿ.ಎಂ. ಗಂಗಾಧರ ಸ್ವಾಮಿ, ಎಸ್.ಪಿ. ಉಮಾ ಪ್ರಶಾಂತ್, ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ, ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಎನ್.ಎಚ್. ಶ್ರೀನಿವಾಸ ನಂದಿಗಾವಿ, ವಿನಯ್‌ಕುಮಾರ್ ಜಿ. ಬಿ. ಎಸ್.ಎಂ. ವೀರೇಶ್ ಹನಗವಾಡಿ, ಎನ್.ಎ. ಮುರುಗೇಶ ಆರಾಧ್ಯ, ಚಂದ್ರಶೇಖರ ಪೂಜಾರ, ಸೌಮ್ಯಕಾಂತ ಮೊಹಂತಿಣ ಡಾ. ಶಶಿಕುಮಾರ ವಿ. ಮೆಹರ್ವಾಡೆ, ವಾಗೀಶಸ್ವಾಮಿ ಹಾಗೂ ಇತರರು ಭಾಗವಹಿಸಲಿದ್ದಾರೆ.

ಮನವಿ:

ವಿಜಯದಶಮಿಯಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಹರಿಹರೇಶ್ವರ ಸ್ವಾಮಿ, ಕಸಬಾ ಮತ್ತು ಮಹಜೇನಹಳ್ಳಿ ಗ್ರಾಮದೇವತೆ ಮತ್ತು ಸಕಲ ದೇವಸ್ಥಾನಗಳ ಉತ್ಸವ ಮೂರ್ತಿಗಳ ಪಲ್ಲಕ್ಕಿಗಳೊಂದಿಗೆ ನಗರದ ರಾಜಬೀದಿಗಳ ಮುಖಾಂತರ ಮೆರವಣಿಗೆಯೊಂದಿಗೆ ಶ್ರೀ ಜೋಡು ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಸಂಜೆ 6 ಗಂಟೆಗೆ ಸಾಮೂಹಿಕ ದಸರಾ ಬನ್ನಿ ಮುಡಿಯುವ ಎಲ್ಲ ಸಮಾಜಗಳ ಬಂಧು-ಭಗಿನಿಯರು ನಿಗದಿತ ಸಮಯಕ್ಕೆ ಆಗಮಿಸಲು ದಸರಾ ಉತ್ಸವ ಸಮಿತಿ ಕೋರಿದೆ.

- - -

-21HRR02:

ದುರ್ಗಾ ಮಾತೆ.